ಶಿವಮೊಗ್ಗ, ಜೂನ್ 21, ಕೃಷಿ ಸಚಿವ ಬಿ.ಸಿ.ಪಾಟೀಲರು ಮತ್ತು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಸ್ವಗ್ರಾಮ ಯಲವಾಳ ಗ್ರಾಮದ ಕೃಷಿ ಸಚಿವರ ತೋಟದಲ್ಲಿ ಯೋಗ ಮಾಡುವ ಮೂಲಕ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ, ಯೋಗ ಎನ್ನುವುದು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿಯನ್ನೂ ನೀಡಬಲ್ಲದು. ಋಷಿಮುನಿಗಳು ಈ ಹಿಂದೆ ಆಚರಿಸಿ ಅನುಸರಿಸುತ್ತಿದ್ದ ಯೋಗವನ್ನು ಇಂದಿಗೂ ನಮ್ಮ ದೇಶದಲ್ಲಿ ಪಾರಂಪರಿಕವಾಗಿ ಮುಂದುವರೆಸಿಕೊಂಡು ಬರಲಾಗುತ್ತಿದೆ.
ಯೋಗ ದಿನಾಚರಣೆಯಂದು ಮಾತ್ರ ಯೋಗ ಮಾಡದೇ ಪ್ರತಿನಿತ್ಯ ವ್ಯಾಯಾಮ, ಯೋಗ ಮಾಡುವುದು ಒಳ್ಳೆಯದು. ಯೋಗ ಎಲ್ಲರ ದೈನಂದಿನ ಭಾಗವಾಗಬೇಕು ಎಂದು ಕರೆ ನೀಡಿದರು.ಯೋಗಕ್ಕೆ ತನ್ನದೇ ಆದ ಇತಿಹಾಸವಿದ್ದು, ಅದರ ಜೊತೆಗೂ ವೈಜ್ಞಾನಿಕವಾಗಿಯೂ ಯೋಗ ಸಾಬೀತಾಗಿದೆ. ಯೋಗವನ್ನು ಗುರುಗಳಿಂದ ಯೋಗಶಾಲೆಯಲ್ಲಿ ಕಲಿಯಬಹುದು. ಅಲ್ಲದೇ ಕೈಬೆರಳಲ್ಲಿರುವ ಮೊಬೈಲ್‌ನಲ್ಲಿ ಯೋಗ ಕಲಿಸುವ ಅದೆಷ್ಟೋ ಯೋಗದ ವಿಡಿಯೋ ಚಾನೆಲ್‌ಗಳು ಆ್ಯಪ್‌ಗಳು ಸಹ ಲಭ್ಯ. ನಮ್ಮ ದೇಹಕ್ಕೆ ಅನುಕೂಲಕರವಾಗುವಂತೆ ಆದಷ್ಟು ಮಾರ್ಗದರ್ಶನ ಪಡೆದೇ ಯೋಗವನ್ನು ಅನುಸರಿಸುವುದು ಉತ್ತಮ ಎಂದು ಬಿ.ಸಿ.ಪಾಟೀಲರು ಹೇಳಿದರು.