ಬಿಬಿಎಂಪಿ ಅಧಿಕಾರಿಗಳು ಜಮೀರ್ ಅಹಮದ್ ಕೇಳಿ ಸ್ಥಳಕ್ಕೆ ತೆರಳಬೇಕಿತ್ತಾ: ಮುಖ್ಯಮಂತ್ರಿ ಕಿಡಿ

ಬೆಂಗಳೂರು,ಏ 20, "ಅವರು ಯಾರ್ರೀ ಕೇಳೋಕೆ, ಅವರಿಗೂ ಇದಕ್ಕೂ ಏನ್ರೀ ಸಂಬಂಧ. ಸರ್ಕಾರ ಮಾಡುವ ಕೆಲಸಕ್ಕೆ ಅವರ ಅಪ್ಪಣೆ ಪಡೆದು ಹೋಗಬೇಕಾ" ಹೀಗೆಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ವಿರುದ್ಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಶಂಕಿತರ ಜತೆ ಸಂಪರ್ಕ ಹೊಂದಿದ್ದವರನ್ನು ಕ್ವಾರೆಂಟೇನ್ ಮಾಡಲು ಪಾದರಾಯನಪುರಕ್ಕೆ ತೆರಳಿದ ಸಂದರ್ಭದಲ್ಲಿ ಉಂಟಾ ಗಲಭೆ ವಿಚಾರದಲ್ಲಿ ಶಾಸಕರು ರೀತಿ ಹೇಳಿಕೆ ಕೊಡ್ತಿದ್ದಾರಲ್ಲ, ಅವರಿಗೂ ಇದಕ್ಕೂ ಏನ್ರೀ ಸಂಬಂಧ. ಅಂದರೆ ಅವರೇ ಇದಕ್ಕೆಲ್ಲಾ ಪ್ರಚೋದನೆ ಕೊಡ್ತಿದ್ದಾರೆ ಎಂದು ಭಾವಿಸಬೇಕೆ? ಎಂದು ಪ್ರಶ್ನಿಸಿದರು.ಯಾರು ತಪ್ಪು ಮಾಡಿದ್ದಾರೋ ಅಂತಹವರ ವಿರುದ್ಧ ಕ್ರಮ ಆಗಬೇಕು ಎನ್ನಬೇಕಾದ ವ್ಯಕ್ತಿಯೇ ಈ ರೀತಿ ಹೇಳಿಕೆ ಕೊಡ್ತಿದ್ದಾರೆ ಅಂದರೆ ಇದು ಬೇಜವಬ್ದಾರಿತನದ ಪರಮಾಧಿ ಎಂದು ವಾಗ್ದಾಳಿ ನಡೆಸಿದರು.ಪಾದರಾಯನಪುರದಲ್ಲಿ ಭಾನುವಾರ ಆರೋಗ್ಯ ಇಲಾಖೆ ಅಧಿಕಾರಿಗಳ ಮೇಲೆ ದುಷ್ಕರ್ಮಿಗಳು ಗೂಂಡಾಗಿರಿ ನಡೆಸಿ ಶೆಡ್ ಮುರಿದಿದ್ದಾರೆ. ಗೃಹ ಸಚಿವರು ಪೊಲೀಸರು ಕಾಳಜಿ ವಹಿಸಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ. ನಾವು ಅವರ ಆರೋಗ್ಯ ಕಾಪಾಡುವ ಕಾಳಜಿ ತೋರಿದರೂ ಗೂಂಡಾಗಿರಿ ಮಾಡಲಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ, ಈಗಾಗಲೇ 54 ಮಂದಿ ಬಂಧನ ಮಾಡಲಾಗಿದೆ. ಇನ್ನು 5 ಜನರನ್ನು ಬಂಧಿಸಲಾಗುವುದು. ಕಾನೂನು ರೀತಿ ಬಿಗಿ ಕ್ರಮಕ್ಕೆ ಸೂಚನೆ ನೀಡಲಾಗಿದೆ, ಉನ್ನತ ಪೊಲೀಸ್ ಅಧಿಕಾರಿಗಳು, ಗೃಹ ಸಚಿವರು ಹೆಚ್ಚಿನ ಕಾಳಜಿ ತೋರಿದ್ದಾರೆ, ರಾಜ್ಯದಲ್ಲಿ ಇಂತಹ ಘಟನೆ ನಡೆದಿರಲಿಲ್ಲ, ಗೊಂಡಾ ವರ್ತನೆ ಸಹಿಸಲು ಸಾಧ್ಯವಿಲ್ಲ, ಬಿಗಿ ಕ್ರಮಕ್ಕೆ ಸೂಚನೆ ನೀಡಿದ್ದೇವೆ ಎಂದರು.