ವಿಜಯಪುರ 18 : ಭೀಮಾತೀರದಲ್ಲಿ 1959 ರಿಂದಲೂ ಬಂದೂಕು ಸಂಸ್ಕೃತಿ, ಅಪರಾಧಿಕ ಚಟುವಟಿಕೆಗಳು ನಡೆಯುತ್ತಲೇ ಇವೆ. ಆ ಭಾಗದಲ್ಲಿ ಗುಂಡಿನ ಸದ್ದು ಫುಲ್ಸ್ಟಾಪ್ ಆಗಬೇಕಾಗಿದೆ. ಈ ಹಿನ್ನೆಲೆಯಲ್ಲ್ಲಿ ಚಡಚಣ, ಉಮರಾಣಿ ಸೇರಿದಂತೆ ಭೀಮಾತೀರದ ಪಟ್ಟಣ, ಗ್ರಾಮಗಳಲ್ಲಿ ಜಾಗೃತಿ ಶಿಬಿರಗಳನ್ನು ಆಯೋಜಿಸಿ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ಪೊಲೀಸ್ ಇಲಾಖೆ ಮಾಡಲಾಗುವುದು ಎಂದು ಉತ್ತರ ವಲಯ ಐಜಿಪಿ ಅಲೋಕ್ ಕುಮಾರ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಥಮ ಹಂತವಾಗಿ ಇದೇ ದಿ. 19 ರಂದು ಬೆಳಿಗ್ಗೆ 11 ಗಂಟೆಗೆ ಭೀಮಾತೀರದ ಇಂಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಸಾರ್ವಜನಿಕ ಜಾಗೃತಿ ಸಭೆ ಏರ್ಪಡಿಸಲಾಗಿದೆ ಎಂದರು.
ಅದೇ ದಿನ ಚಡಚಣ, ಝಳಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ವಿಜಯಪುರ ಜಿಲ್ಲೆಯಲ್ಲಿ 2300 ಗನ್ ಲೈಸನ್ಸ್ ನೀಡಲಾಗಿದೆ, ಅದರಲ್ಲಿ ಇಂಡಿ ಭಾಗದಲ್ಲಿಯೇ ಸಿಂಹಪಾಲು ಇದ್ದು, 1200 ಕ್ಕೂ ಹೆಚ್ಚು ಗನ್ ಲೈಸನ್ಸ್ ನೀಡಲಾಗಿದೆ, ಈ ಗನ್ ಲೈಸನ್ಸ್ ಪುನರ್ ಪರಿಶೀಲಿಸಿ ಪರಿಶೀಲಿಸಿ ಅವಶ್ಯಕತೆ ಇಲ್ಲದವರ ಗನ್ ಲೈಸನ್ಸ್ ರದ್ದುಪಡಿಸಲು ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸುಮಾಡಲಾಗುವುದು ಸಲ್ಲಿಸಲಾಗುವುದು
ಅನೇಕ ಪ್ರಕರಣಗಳಲ್ಲಿ ಲೈಸನ್ಸ್ ಹೊಂದಿದ ಗನ್ಗಳ ದುರಪಯೋಗವಾಗಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅವಶ್ಯಕತೆ ಇರುವವರಿಗೆ ಮಾತ್ರ ಗನ್ ಲೈಸನ್ಸ್ ಇರಬೇಕು, ಯಾರಿಗೆ ಅವಶ್ಯಕತೆ ಇದೆ, ಯಾರಿಗೆ ಇಲ್ಲ ಎಂಬ ಬಗ್ಗೆಯೂ ಒಂದು ಪಟ್ಟಿ ತಯಾರಿಸಿ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು. ಎಂದು ತಿಳಿಸಿದರು.
ಭೀಮಾತೀರದ ಧರ್ಮರಾಜ್ ಚಡಚಣ ಎನಕೌಂಟರ್ ನಕಲಿ ಎಂಬ ಬಗ್ಗೆ ಸಾಕ್ಷಾಧಾರಗಳು ದೊರಕಿದರೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿ ತನಿಖೆ ನಡೆಸಲಾಗುವುದು. ಒಂದು ವೇಳೆ ಎನಕೌಂಟರ್ ನಕಲಿ ಎಂದು ಸಾಬೀತಾದರೆ ಸಂಬಂಧಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಗಂಗಾಧರ ಚಡಚಣ ಹತ್ಯೆ ಪ್ರಕರಣದಲ್ಲಿ ಪೊಲೀಸರೇ ಭಾಗಿಯಾಗಿರುವುದು ಬೆಳಕಿಗೆ ಬಂದಿರುವುದರಿಂದ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬಂದಂತಾಗಿಲ್ಲವೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಐಜಿಪಿ, ಈ ಘಟನೆಯಿಂದಾಗಿ ನಮಗೂ ಸಹ ನೋವಾಗಿದೆ ಅದರಲ್ಲಿ ಎರಡು ಮಾತಿಲ್ಲ, ಆದರೆ ಎಲ್ಲ ಕ್ಷೇತ್ರಗಳಲ್ಲಿಯೂ ಒಳ್ಳೆಯವರು-ಕೆಟ್ಟವರು ಇದ್ದೇ ಇರುತ್ತಾರೆ. ಕೆಟ್ಟವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಗಂಗಾಧರ ಹತ್ಯೆ ಪ್ರಕರಣದ ಬಗ್ಗೆ ಸಿಐಡಿ ಅಧಿಕಾರಿಗಳು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ. ಕಾನೂನು ಪ್ರಕಾರ ತಪಪಿತಸ್ಥರ ಮೇಲೆ ಅವರು ಕಾನೂನು ಕ್ರಮ ಜರುಗಿಸುತ್ತಾರೆ ಎಂದು ಅವರು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ಎಎಸ್ಪಿ ಆರ್.ಶಿವಕುಮಾರ, ಡಿವೈಎಸ್ಪಿ ಡಿ.ಅಶೋಕ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.