ಕಲಬುರಗಿ, ಮೇ 8,ಲಾಕ್‍ಡಾನ್ ಸಡಿಲಿಕೆ ಹಿನ್ನೆಲೆಯಲ್ಲಿ ಕಳೆದ 5 ದಿನದಲ್ಲಿ ಬೆಂಗಳೂರು, ಹುಬ್ಬಳ್ಳಿ ಮತ್ತು ಇತರೆ ಕಡೆಯಿಂದ ಕಲಬುರಗಿ ಜಿಲ್ಲೆಗೆ 7539 ಜನ ವಲಸಿಗರು ಆಗಮಿಸಿದ್ದು, ಇದರಲ್ಲಿ ಕಲಬುರಗಿ ನಗರಕ್ಕೆ 728 ಜನ ಆಗಮಿಸಿದ್ದಾರೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ರಾಹುಲ ಪಾಂಡ್ವೆ ತಿಳಿಸಿದ್ದಾರೆ.ವಲಸೆ ಬಂದವರೆಲ್ಲರಿಗೂ ಬಸ್ಸು ನಿಲ್ದಾಣದಲ್ಲಿ ಥರ್ಮಲ್ ಸ್ಕ್ಯಾನ್ ಮೂಲಕ ಸ್ಕ್ರೀನಿಂಗ್ ಮಾಡಿ ಅವರೆಲ್ಲರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಬಂದವರಿಗೆ ಆಹಾರ ಪೊಟ್ಟಣ, ಕುಡಿಯುವ ನೀರು ಮತ್ತು ಹಾಲು ನೀಡಿ ಮನೆಗಳಿಗೆ ತೆರಳಲು ವಾಹನದ ವ್ಯವಸ್ಥೆ ಮಾಡಿಕೊಡಲಾಗಿದೆ. ಕೈಗಳಿಗೆ ಹೋಂ ಕ್ವಾರಂಟೈನ್ ಸೀಲು ಹಾಕಿ ಗೃಹ ಬಂಧನದಲ್ಲಿರಲು ತಿಳಿಸಲಾಗಿದೆ ಎಂದರು.
ವಲಸೆ ಬಂದವರಲ್ಲಿ ಯಾರಿಗಾದರು ಕೋವಿಡ್-19 ಲಕ್ಷಣ ಕಂಡುಬಂದಲ್ಲಿ ನಗರದ ಜಿಮ್ಸ್ ಅಥವಾ ಪಾಲಿಕೆಯಿಂದ ನಗರದ ನಾಲ್ಕು ಕಡೆ ಸ್ಥಾಪಿಸಲಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬಂದು ತಪಾಸಣೆ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.ಕಲಬುರಗಿ ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ಜನರಲ್ಲಿ ಅರಿವು ಮೂಡಿಸಲು ನಗರದಲ್ಲೆಡೆ ಹೆದ್ದಾರಿ ಫಲಕ ಮತ್ತು ಜಾಹೀರಾತು ಫಲಕಗಳ ಮೇಲೆ ಅರಿವು ಮೂಡಿಸುವ ಬ್ಯಾನರ್ ಅಳವಡಿಸಲಾಗುತ್ತಿದೆ ಎಂದರು.
ಕೊರೊನಾ ಸೋಂಕು ಪತ್ತೆಯಾದ ಕಲಬುರಗಿ ನಗರದ ವಿವಿಧೆಡೆ ಕಂಟೇನ್ಮೆಂಟ್ ಝೋನ್ ಘೋಷಿಸಿದಲ್ಲದೆ ಸುಗಮ ಸಂಚಾರಕ್ಕೆ ನಿರ್ಬಂಧ ಹೇರಿ ಒಂದೇ ಮಾರ್ಗದಲ್ಲಿ ಒಳ ಮತ್ತು ಹೊರ ಪ್ರವೇಶಕ್ಕಾಗಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಕೆಲ ಕಿಡಿಗೇಡಿಗಳು ಬ್ಯಾರಿಕೇಡ್ ಧ್ವಂಸಗೊಳಿಸುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು.ಕಲಬುರಗಿ ನಗರದಲ್ಲಿ ಲಾಕ್‍ಡೌನ್ ಸಡಿಲಿಕೆಯನ್ನು ಹಿಂಪಡೆಯಲಾಗಿದ್ದು, ಯಾವುದೇ ಹೇರ್ ಸಲೂನ್, ಬೇಕರಿ, ಹೊಟೇಲ್‍ಗಳು ತೆರೆಯಬಾರದು. ಒಂದು ವೇಳೆ ನಿಯಮ ಉಲ್ಲಂಘಿಸಿ ಅಂಗಡಿಗಳನ್ನು ತೆರೆದ್ದಲ್ಲಿ ಪಾಲಿಕೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.