ಸವಣೂರ ತಹಶೀಲ್ದಾರ ಕಚೇರಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಭೇಟಿ
ಹಾವೇರಿ 18: ಶಿರಬಡಗಿ ಗ್ರಾಮಸ್ಥರು 2021-22 ನೇ ಸಾಲಿನಲ್ಲಿ ಮಳೆಯಿಂದ ಹಾನಿಯಾದ ಮನೆಗಳನ್ನು ಹೊಸ ಕಟ್ಟಿಕೊಳ್ಳಲು ಅನುಮತಿ ನೀಡಿಲಾಗಿತ್ತು, ಆದರೆ ಈಗ ಅವುಗಳು ಬ್ಲಾಕ್ ಆಗಿದ್ದು ಹಾಗೂ ಆರಂಭಿಕ ಹಂತದ ಅನುದಾನ ಈವರೆಗೂ ಬಿಡುಗಡೆ ಆಗಿರುವುದಿಲ್ಲ ಎಂದು ಸವಣೂರ ತಹಸೀಲ್ದಾರ ಕಚೇರಿ ಆವರಣದಲ್ಲಿ ಧರಣಿ ನಡೆಸಿದ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಗ್ರಾಮಸ್ಥರ ಅಹವಾಲು ಆಲಿಸಿದರು.
ಸವಣೂರ ತಹಶೀಲ್ದಾರ ಕಚೇರಿಗೆ ಶನಿವಾರ ಭೇಟಿ ನೀಡಿದ ಅವರು, ಸಂತ್ರಸ್ತರೊಂದಿಗೆ ಮಾತನಾಡಿ, ಸರ್ಕಾರಕ್ಕೆ ಈಗಾಗಲೇ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಷ್ಟು ಶೀಘ್ರವಾಗಿ ಸಮಸ್ಯೆ ಇತ್ಯರ್ಥಪಡಿಸಲು ಎಲ್ಲ ರೀತಿಯಿಂದಲೂ ಪ್ರಯತ್ನಿಸಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು .
ಜಿಲ್ಲಾಧಿಕಾರಿಗಳು ಭರವಸೆ ನೀಡಿದ ಹಿನ್ನೆಲಯಲ್ಲಿ ಗ್ರಾಮಸ್ಥರು ಧರಣಿ ಹಿಂಪಡೆದರು. ನಂತರ ತಹಶೀಲ್ದಾರ ಕಚೇರಿ ಪ್ರವೇಶಿಸಿದ ಅವರು, ಭೂ ಸುರಕ್ಷಾ ಯೋಜನೆಯಡಿಯಲ್ಲಿ ಕೈಗೊಂಡಿರುವ ಕಂದಾಯ ದಾಖಲೆಗಳ ಗಣಕೀಕರಣ ಕಾರ್ಯ ಪ್ರಗತಿ ಪರೀಶೀಲನೆ ನಡೆಸಿ, ನಿಗಧಿತ ಅವಧಿಯೊಳಗೆ ಗುರಿ ಸಾಧನೆಮಾಡಬೇಕು. ಕಚೇರಿ ಸಿಬ್ಬಂದಿಗಳು ಸರಿಯಾಗಿ ಕರ್ತವ್ಯ ನಿರ್ವಹಣೆ ಮಾಡಬೇಕು, ಅನಗತ್ಯ ವಿಳಂಬ ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಬೇಕು. ಸಾರ್ವಜನಿಕರು ಪದೇ ಪದೇ ಕಚೇರಿಗೆ ಬರುವಂತಾಗಬಾರದು ಹಾಗೂ ಸಾರ್ವಜನಿಕ ಕುಂದು ಕೊರತೆ ಅರ್ಜಿಗಳನ್ನು ಕಾಲಮಿತಿಯೊಳಗೆ ಪರಿಹರಿಸಬೇಕು ಎಂದು ಸಿಬ್ಬಂದಿಗಳಿಗೆ ಸೂಚನೆ ನೀಡಿದರು.