ಮಹಿಳೆಯ ಸಶಕ್ತಿಕರಣವೇ “ನಲ್‌-ಜಲ್ ಮಿತ್ರ” ತರಬೇತಿಯ ಉದ್ದೇಶ: ಶಿವಕಾಂತಮ್ಮ ನಾಯಕ

Empowerment of women is the objective of “Nal-Jal Mitra” training: Sivakanthamma Nayaka

ಮಹಿಳೆಯ ಸಶಕ್ತಿಕರಣವೇ “ನಲ್‌-ಜಲ್ ಮಿತ್ರ” ತರಬೇತಿಯ ಉದ್ದೇಶ: ಶಿವಕಾಂತಮ್ಮ ನಾಯಕ 

ವಿಜಯಪುರ, ಜ.18 :  ಪುರುಷರಿಗೆ ಸರಿಸಮಾನವಾಗಿ ಮಹಿಳೆಯು ಸಹ ಕೌಶಲ್ಯ ಕಲಿಯುವುದರಲ್ಲಿ ಸಕ್ಷಮವಾಗಿರುವಳು ಎಂಬ ಉದ್ದೇಶದಿಂದ ಮಹಿಳೆಯರಿಗೆ “ನಲ್‌-ಜಲ್ ಮಿತ್ರ” ತರಬೇತಿ ನೀಡಲಾಗುತ್ತಿದೆ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಿವಕಾಂತಮ್ಮ (ಕಾಂತಾ) ನಾಯಕ ಹೇಳಿದರು.  

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಮ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ,  ಎನ್‌ಆರ್‌ಎಲ್‌ಎಂ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ನಡೆದ ಕೇಂದ್ರ ಸರ್ಕಾರದ ಪ್ರಮುಖ ಯೋಜನೆ ಜಲ್ ಜೀವನ್ ಮಿಷನ್ ಅಡಿ “ನಲ್ ಜಲ್ ಮಿತ್ರ” 17 ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಮಹಿಳೆಯು ಸಶಕ್ತಳಾಗಬೇಕೆಂಬುವುದು “ನಲ್‌-ಜಲ್ ಮಿತ್ರ” ತರಬೇತಿಯ ಉದ್ದೇಶವಾಗಿದೆ. ಪೈಪ್‌ಗಳ ದುರಸ್ಥಿ, ಕೊಳಾಯಿ ಜೋಡಣೆ, ಹಾಗೂ ವಿದ್ಯುತ್ ಪರಿಕರಗಳ ದುರಸ್ಥಿಗಳ ಕುರಿತು ಚೆನ್ನಾಗಿ ತಿಳಿದುಕೊಂಡು ತಮ್ಮ ತಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ನೀರಿನ ವ್ಯವಸ್ಥೆ ಸರಿಪಡಿಸಿಕೊಳ್ಳುವಂತೆ ತರಬೇತಿದಾರರಿಗೆ ತಿಳಿಸಿದರು.  

ಮಹಿಳೆಯರು ಕೇವಲ ಬ್ಯೂಟಿಪಾರ್ಲರ್ ಹಾಗೂ ಟೇಲರಿಂಗ್ ತರಬೇತಿಗಷ್ಟೇ ಸಿಮೀತವಾಗಿರದೇ ಸರ್ಕಾರದ ವತಿಯಿಂದ ಮಹಿಳೆಯರಿಗಾಗಿ ಹಲವಾರಿ ಕೌಶಲ್ಯ ತರಬೇತಿ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುತ್ತಿವೆ ಅವುಗಳಲ್ಲಿಯೂ ಕೂಡಾ ಆಸಕ್ತಿ ವಹಿಸಿ ಕೌಶಲ್ಯ ಪಡೆದು ಜೀವನೋಪಾಯಕ್ಕೆ ದಾರಿ ಕಂಡುಕೊಳ್ಳಬಹುದು ಸಲಹೆ ನೀಡಿದರು.  

ಈ ತರಬೇತಿಯು ಪ್ರತಿ ಗ್ರಾಮ ಪಂಚಾಯಿತಿಯಿಂದ ಸ್ವಸಹಾಯ ಸಂಘದ ಇಬ್ಬರು ಮಹಿಳಾ ಸದಸ್ಯರಿಗೆ ತರಬೇತಿಗಾಗಿ ಗುರುತಿಸಲಾಗಿದೆ. ತರಬೇತಿ ನಂತರ ಪ್ರತಿ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ, ಟೂಲ್ ಕಿಟ್ ಹಾಗೂ ಎರಡು ಜೊತೆ ಸಮವಸ್ತ್ರ ನೀಡಲಾಗುವುದು ಎಂದು ಮಾಹಿತಿ ನೀಡಿದರು.  

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಮಾತನಾಡಿ ತಮ್ಮ ಮನೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಕೌಶಲ್ಯ ಹೊಂದಿರುವ ಮಹಿಳೆ ಈ ತರಬೇತಿಯಿಂದ ತಾಂತ್ರಿಕ ಕೌಶಲ್ಯವನ್ನು ಪಡೆದು ಗ್ರಾಮೀಣ ಪ್ರದೇಶದ ಸಾರ್ವಜನಿಕ ಜನತೆಗ ತಮ್ಮ ಕೌಶಲ್ಯದಿಂದ ಅನುಕೂಲ ಕಲ್ಪಿಸಿ, ಗ್ರಾಮ ಸಮಸ್ಯೆಗಳನ್ನು ಒಂದೊಂದಾಗಿ ಸುಧಾರಣೆಗೆ ತಮ್ಮದು ಒಂದು ಕೊಡುಗೆಯಾಗಲಿದೆ ಎಂದು ಹೇಳಿದರು.  

ಶ್ರಮ, ನಿಷ್ಠೆಯಿಂದ ತರಬೇತಿ ಪಡೆದು ತಮ್ಮ ತಮ್ಮ ಹಳ್ಳಿಗಳ ಸಣ್ಣಪುಟ್ಟ ಸಮಸ್ಯೆಗಳಿದ್ದಲ್ಲಿ ಬಗೆಹರಿಸಿಕೊಳ್ಳಬಹುದಾಗಿದೆ.  

ತರಬೇತಿಗೆ ಆಗಮಿಸಿದ ಮಹಿಳೆಯರ ಜವಾಬ್ದಾರಿ ಹೆಚ್ಚಾಗಿದ್ದು, ತಮಗೆನಾದರೂ ಸಮಸ್ಯೆ ಕಂಡುಬಂದಲ್ಲಿ ಸಮಸ್ಯೆಗೆ ಪರಿಹಾರ ಕಾಣಲು ಜಿಲ್ಲಾ ಪಂಚಾಯತ ವತಿಯಿಂದ ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ಅವರು ತಿಳಿಸಿದರು.  

ತರಬೇತಿಯು ಸೋಲಾಪುರ ರಸ್ತೆಯಲ್ಲಿರುವ ಸರ್ಕಾರಿ ಐಟಿಐ ಕಾಲೇಜಿನಲ್ಲಿ 17 ದಿನಗಳ ತರಬೇತಿ ಹಾಗೂ 21 ದಿನಗಳ ಕ್ಷೇತ್ರ ಭೇಟಿ ಹೀಗೆ ಒಟ್ಟು 38 ದಿನಗಳ ತರಬೇತಿಯಿದಾಗಿದ್ದು, ತಾವುಗಳೆಲ್ಲರು ಉತ್ತಮ ರೀತಿಯಲ್ಲಿ ತರಬೇತಿ ಪಡೆದುಕೊಳ್ಳುವಂತೆ ಕಾರ್ಯಕ್ರಮದಲ್ಲಿ ಅವರು ತಿಳಿಸಿದರು.  

ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಬಿ.ಎಸ್‌.ರಾಠೋಡ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳಾದ ಸಿ.ಬಿ.ಕುಂಬಾರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಕುಂಬಾರ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ರಮೇಶ ದೇಸಾಯಿ, ನಿರ್ಮಿತಿ ಕೇಂದ್ರದ ಅಧಿಕಾರಿ ಜಿ.ಎನ್‌.ಮಲಜಿ ಜಿಲ್ಲಾ ಪಂಚಾಯತಿ ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.