ಅಪೆಕ್ಸ್ ಬ್ಯಾಂಕ್ ಅವ್ಯವಹಾರ: ವಿಧಾನಸಭೆಯಲ್ಲಿ ನಿಯಮ 60ರಡಿ ಚರ್ಚೆಗೆ ಒತ್ತಾಯಿಸಿ ಜೆಡಿಎಸ್‌ ಧರಣಿ; ಕಲಾಪ ಮುಂದೂಡಿಕೆ

ಬೆಂಗಳೂರು, ಮಾ.23, ಅಪೆಕ್ಸ್ ಬ್ಯಾಂಕ್ ಅವ್ಯವಹಾರದ ಬಗ್ಗೆ ವಿಚಾರ ಪ್ರಸ್ತಾಪಕ್ಕೆ ಅವಕಾಶ ನೀಡಿಲ್ಲ ಎಂದು ಜೆಡಿಎಸ್‌ ಸದಸ್ಯರು ವಿಧಾನಸಭೆಯಲ್ಲಿಂದು ಧರಣಿ ನಡೆಸಿದ್ದರಿಂದ ಕಲಾಪವನ್ನು 10 ನಿಮಿಷ ಕಾಲ ಮುಂದೂಡಿದ ಪ್ರಸಂಗ ನಡೆಯಿತು.ನಿಯಮ 60ರಲ್ಲಿ ಮಂಜುನಾಥ್, ಎಚ್.ಡಿ.ರೇವಣ್ಣ ತುರ್ತು ನೋಟಿಸ್ ನೀಡಿದ್ದಾರೆ. ಆದರೆ ಅದು ನಿಯಮ 60ರಲ್ಲೂ ಬರುವುದಿಲ್ಲ, ಆದರೂ ಅದಕ್ಕೆ ಪರಿವರ್ತಿಸಿ ಮಾತನಾಡಲು ಅವಕಾಶ ನೀಡುತ್ತೇನೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಹೇಳಿ ಚರ್ಚೆಗೆ ಅವಕಾಶ ನೀಡಿದರು.ಆದರೆ ಈ ವೇಳೆ ಕಾನೂನು ಸಚಿವ ಜೆ.ಸಿ, ಮಾಧುಸ್ವಾಮಿ ಎದ್ದು ನಿಂತು, ನಿಯಮ 60ರಲ್ಲಿ ಬರುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದ ಮೇಲೂ ಅದೇ ನಿಯಮದಡಿ ಚರ್ಚೆಗೆ ಹೇಗೆ ಅವಕಾಶ ಮಾಡುತ್ತೀರಿ, ಅದನ್ನು ಬೇರೆ ನಿಯಮಗಳಡಿ ಚರ್ಚೆಗೆ ಅವಕಾಶ ಕೊಡಿ ಎಂದು ಹೇಳಿದರು.ಆಗ ಎಚ್.ಡಿ.ರೇವಣ್ಣ, ಈಗಾಗಲೇ ನೀವು ಚರ್ಚೆಗೆ ಅವಕಾಶ ನೀಡಿ ಆಗಿದೆ. ಆದರೆ ಪ್ರಸ್ತಾಪಿಸಲು ಅವಕಾಶ ನೀಡಿ, ಬಳಿಕ ಅದನ್ನು ಬೇರೆ ನಿಯಮಗಳಿಗೆ ಬದಲಾಯಿಸಿ ಎಂದು ಆಗ್ರಹಿಸಿದರು.
ಆದರೆ ಸ್ಪೀಕರ್, ಈಗಾಗಲೇ ಸರ್ಕಾರ ಇದನ್ನು ನಿಯಮ 60ರಡಿ ಚರ್ಚಿಸಲು ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಸಮಜಾಯಿಷಿ ನೀಡಿದರು.ಬ್ಯಾಂಕ್ ಅವ್ಯವಹಾರದಿಂದ ಇಡೀ ರಾಜ್ಯದ ರೈತರಿಗೆ ಮೋಸ ಆಗಿದೆ. ಅವಕಾಶ ಕೊಟ್ಟು ಹಿಂದಕ್ಕೆ ಪಡೆಯುವುದು ಸರಿಯಲ್ಲ ಎಂದು ಅನ್ನದಾನಿ ಸೇರಿದಂತೆ ಜೆಡಿಎಸ್‌ ಸದಸ್ಯರು ಸದನದ ಬಾವಿಗಿಳಿದು ಧರಣಿಗೆ ಇಳಿದರು.ಆಗ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ನಿಯಮಗಳ ಪ್ರಕಾರ ಸದನ ನಡೆಯಲಿ, ಮಧ್ಯಾಹ್ನದ ಬಳಿಕ ಬೇರೆ ನಿಯಮಗಳಡಿ ಚರ್ಚೆಗೆ ಅವಕಾಶ ನೀಡಬಹುದು ಎಂದರು. ಆಗ ಜೆಡಿಎಸ್ ಸದಸ್ಯರು, ನಾವು ನಿಯಮಗಳ ಪ್ರಕಾರವೇ ಅವಕಾಶ ಕೋರಿದ್ದೆವು, ಆದರೆ ಈಗ ಅವಕಾಶ ನೀಡಿಲ್ಲ ಎಂದು ಹೇಳಿದರು.ಎ.ಟಿ.ರಾಮಸ್ವಾಮಿ ಮಾತನಾಡಿ, ಐದು ನಿಮಿಷಗಳ ಕಾಲ ವಿಷಯವನ್ನು ಪ್ರಸ್ತಾಪಿಸಲು ಈಗ ಅವಕಾಶ ನೀಡಿ ಎಂದರು.ಸಚಿವ ಜಗದೀಶ್ ಶೆಟ್ಟರ್ ಆಕ್ಷೇಪ ವ್ಯಕ್ತಪಡಿಸಿ, ಈಗಾಗಲೇ ನೀವು ರೂಲಿಂಗ್ ಕೊಟ್ಟು ಆಗಿದೆ. ಬೇರೆ ರೂಪದಲ್ಲಿ ಪರಿವರ್ತಿಸಿ ಕೊಡಿ ಬಳಿಕ ಅವಕಾಶ ನೀಡಬಹುದು ಎಂದರು.
ಸ್ಪೀಕರ್ ಮಾತನಾಡಿ, ಸದನದಲ್ಲಿ ಹಠಮಾರಿ ಧೋರಣೆ ಸರಿಯಲ್ಲ. ಸಂಜೆ ಅವಕಾಶ ಮಾಡಿಕೊಡುತ್ತೇವೆ. ಎಲ್ಲ ಜೆಡಿಎಸ್ ಸದಸ್ಯರು ತಮ್ಮ ಆಸನಗಳಿಗೆ ಮರಳಬೇಕು. ರಾಜಕೀಯ ಉದ್ದೇಶದಿಂದ ಮಾಡುವುದಾದರೆ ಸದನಕ್ಕೆ ಅಡ್ಡಿ ಪಡಿಸಿ, ರಾಜ್ಯದ ಜನರು ಇದನ್ನು ನೋಡುತ್ತಾರೆ ಎಂದು ತೀಕ್ಷ್ಣವಾಗಿ ಹೇಳಿದರು.

ಕಾಂಗ್ರೆಸ್ ಸದಸ್ಯ ಆರ್.ವಿ.ದೇಶಪಾಂಡೆ ಅವರಿಗೆ ಬಜೆಟ್‌ ಮೇಲಿನ ಚರ್ಚೆಗೆ ಸ್ಪೀಕರ್ ಅವಕಾಶ ನೀಡಿದರು.ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಸಂಜೆ 5 ಗಂಟೆಗೆ ಕೊಡುತ್ತೇನೆ ಎಂದು ಸ್ಪೀಕರ್ ಹೇಳಿದ್ದಾರೆ. ಜೆಡಿಎಸ್ ಸದಸ್ಯರು ಆಸನಕ್ಕೆ ಮರಳಬೇಕು ಎಂದು ಮನವಿ ಮಾಡಿದರು.ದೇಶಪಾಂಡೆ ಮಾತನಾಡಿ, ಜೆಡಿಎಸ್ ಸದಸ್ಯರು ಧರಣಿ ನಡೆಸುತ್ತಿದ್ದಾಗ ತಮಗೆ ಮಾತನಾಡುವುದು ಸರಿಯೆನಿಸುವುದಿಲ್ಲ ಎಂದರು. ಈ ಬಗ್ಗೆ ಹಲವು ಹೊತ್ತು ಗದ್ದಲದ ವಾತಾವರಣ ನಿರ್ಮಾಣವಾಯಿತು. ಯಾರು ಏನು ಹೇಳುತ್ತಿದ್ದಾರೆ ಎಂಬುದು ಕೇಳದಾಯಿತು.ಸಿ.ಟಿ.ರವಿ, ನೀವು ರಾಜಕಾರಣ ಮಾಡುವುದಾದರೆ ಬೇರೆ ವೇದಿಕೆಯಲ್ಲಿ ಮಾಡಿ, ರಾಜಕೀಯಕ್ಕೆ ಈ ವೇದಿಕೆಯನ್ನು ಬಳಸಬೇಡಿ ಎಂದು ಟೀಕಿಸಿದರು.ಬಳಿಕ ಸ್ಪೀಕರ್ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು.