ಯಶಸ್ವಿಯಾಗಿ ಜರುಗಿದ ಶಾಲಾ ವಾರ್ಷಿಕೋತ್ಸವ
ಕಾರವಾರ 15: ಎಜ್ಯುಕೇಶನ್ ಸೊಸೈಟಿಯ ಹಿಂದೂ ಪ್ರೌಢಶಾಲೆ, ಸುಮತಿ ದಾಮ್ಲೆ ಬಾಲಕಿಯರ ಪ್ರೌಢಶಾಲೆ ಹಾಗೂ ಬಾಲಮಂದಿರ ಪ್ರೌಢಶಾಲೆಗಳ ವಾರ್ಷಿಕೋತ್ಸವವು ಅಚ್ಚುಕಟ್ಟಾಗಿ ಜರುಗಿ ಎಲ್ಲರ ಮನಸೂರೆಗೊಂಡಿತು.
ಮುಖ್ಯ ಅತಿಥಿಗಳಾಗಿ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಾದ ಮಾನ್ಯ ಕೆ. ಲಕ್ಷ್ಮೀಪ್ರಿಯಾ ಆಗಮಿಸಿ, “ಸಾಧನೆಗೆ ಬೇಕಾಗಿರುವುದು ಕೇವಲ ಆಶಾವಾದವಲ್ಲ, ಆಸೆಯೂ ಅಲ್ಲ. ಯಾರಿಂದಲೂ ಅಲುಗಾಡಿಸಲಾಗದ ಪ್ರಬಲವಾದ ಇಚ್ಛಾಶಕ್ತಿ. ನಮ್ಮ ಕಾರ್ಯದಲ್ಲಿ ಶ್ರದ್ಧೆ, ಶ್ರಮ, ವಿವೇಚನೆ, ದಕ್ಷತೆ ಇರಬೇಕು”. ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಅತಿಥಿಗಳಾಗಿ ಕಾರವಾರ ಉಪವಿಭಾಗದ ಉಪ-ವಿಭಾಗಾಧಿಕಾರಿಗಳಾದ ಕನಿಷ್ಕ ಆಗಮಿಸಿ, “ಉತ್ಸಾಹ, ದಕ್ಷತೆಯ ಜೊತೆಗೆ ಹಿಡಿದ ಪಟ್ಟನ್ನು ಬಿಡದಿರುವುದು. ಇವು ಯಶಸ್ಸಿಗೆ ಅತ್ಯಗತ್ಯ. ಮಕ್ಕಳು ದೇಶದ ಮಹೊನ್ನತ ಸಂಪತ್ತು. ಅವರನ್ನು ನಿರ್ಲಕ್ಷಿಸಿದರೆ, ದೇಶದ ಸಂಪತ್ತನ್ನು, ಬುನಾದಿಯನ್ನು ಮತ್ತು ಭವಿಷ್ಯವನ್ನು ನಿರ್ಲಕ್ಷಿಸಿದಂತೆ” ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಅಧ್ಯಕ್ಷತೆಯನ್ನು ಕಾರವಾರ ಎಜ್ಯುಕೇಶನ್ ಸೊಸೈಟಿಯ ಎಸ್.ಪಿ. ಕಾಮತ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಅನಿರುದ್ಧ ಹಳದಿಪುರ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿಗಳಾದ ಜಿ.ಪಿ. ಕಾಮತ್ ಸ್ವಾಗತಿಸಿ, ಅತಿಥಿ ಪರಿಚಯ ಮಾಡಿದರು. ಹಿಂದೂ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಅರುಣ ವಿ. ರಾಣೆ, ಸುಮತಿ ದಾಮ್ಲೆ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಗಿರಿಜಾ ಎನ್. ಬಂಟ ಹಾಗೂ ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆ ಶಾಲಾ ವಾರ್ಷಿಕ ವರದಿ ಓದಿದರು.
ಸೀಮಾ ರೇವಣಕರ ಬಹುಮಾನದ ಯಾದಿ ಓದಿದರೆ, ಸಂತೋಷ ಎಂ. ಶೇಟ್, ಸೀಮಾ ರೇವಣಕರ, ನಾಹಿದಾ ಹನಗಿ ಮತ್ತು ನೀಫಾ ಡಿ’ಕೋಸ್ಟಾ ಕಾರ್ಯಕ್ರಮ ನಿರೂಪಿಸಿದರು.