ಲೋಕದರ್ಶನ ವರದಿ
ಶ್ರೀನಗರ: ಎರಡು ದಿನಗಳ ಬಳಿಕ ಅಮರನಾಥ ಯಾತ್ರೆ ಇಂದು ಪೆಹಲ್ಗಾಂವ್ ಮಾರ್ಗದ ಮೂಲಕ ಪುನರಾರಂಭಗೊಂಡಿದೆ. ಇದೇ ವೇಳೆ ಭೂಕುಸಿತದ ಕಾರಣಕ್ಕೆ ಅಮಾನತುಗೊಂಡಿದ್ದ ಬಲ್ತಾಲ್ ಮಾರ್ಗದ ಮೂಲಕ ಸಾಗಿದ್ದ ಅಮರನಾಥ ಯಾತ್ರೆ ಇಂದು ನಿರಂತರ ಮೂರನೇ ದಿನ ಕೂಡ ಸ್ಥಗಿತಗೊಂಡೇ ಇದೆ.
ಈ ಎರಡೂ ಮಾರ್ಗಗಳ ಮೂಲಕ ಸಾಗಿದ್ದ ಅಮರನಾಥ ಯಾತ್ರೆಯನ್ನು ಕಳೆದ ಬುಧವಾರ ಅನೇಕ ಕಡೆಗಳಲ್ಲಿನ ಭೂಕುಸಿತ ಮತ್ತು ಬೆಟ್ಟಗಳಿಂದ ಬಂಡೆ ಕಲ್ಲುಗಳು ಜಾರಿ ಉರುಳಿಕೊಂಡು ರಸ್ತೆಗೆ ಬರುತ್ತಿದ್ದ ಕಾರಣ ಸ್ಥಗಿತಗೊಳಿಸಲಾಗಿತ್ತು. ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿನ ಪೆಹಲ್ಗಾಂವ್ ಮಾರ್ಗದ ಮೂಲಕ ಅಮರನಾಥ ಯಾತ್ರೆ ಇಂದು ಬೆಳಗ್ಗೆ ಪುನರಾರಂಭಗೊಂಡಿತು ಎಂದು ಶ್ರೀ ಅಮರನಾಥ ದೇವಾಲಯ ಮಂಡಳಿ (ಎಸ್ಎಎಸ್ಬಿ) ವಕ್ತಾರ ಹೇಳಿದರು. ಆದರೆ ಗುಂದರ್ಬಾಲ್ ಜಿಲ್ಲೆಯ ಬಲ್ತಾಲ್ ಮಾರ್ಗದ ಮೂಲಕ ಸಾಗುತ್ತಿದ್ದ ಅಮರನಾಥ ಯಾತ್ರೆ ಇಂದು ನಿರಂತರ ಮೂರನೇ ದಿನ ಕೂಡ ಸ್ಥಗಿತಗೊಂಡ ಸ್ಥಿತಿಯಲ್ಲೇ ಉಳಿದಿದೆ ಎಂದವರು ಹೇಳಿದರು. ಬಲ್ತಾಲ್ ಮಾರ್ಗದಲ್ಲಿ ಬ್ರಾರಿಮಾಗರ್್ ಮತ್ತು ರಾಯಿಲ್ಪಾತ್ರಿ ನಡುವೆ ಸಂಭವಿಸಿದ ಭೂಕುಸಿತದಿಂದಾಗಿ ಕಳೆದ ಮಂಗಳವಾರ ಮೂವರು ಯಾತ್ರಿಕರು ಮೃತಪಟ್ಟು ಇತರ ನಾಲ್ವರು ಗಾಯಗೊಂಡರೆಂದು ವಕ್ತಾರ ತಿಳಿಸಿದರು. ಪಶ್ಚಿಮ ಬಂಗಾಲದ ಸಂಜಯ್ ಸಾಂತ್ರಾ ಎಂಬವರು ಅಮರನಾಥ ದೇಗುಲಕ್ಕೆ ಸಮೀಪವೇ ಹೃತ್ಕ್ರಿಯೆ ನಿಂತು ನಿಧನಹೊಂದಿದರು ಎಂದು ಅಧಿಕಾರಿ ತಿಳಿಸಿದರು. ಈ ವರ್ಷ ಜೂನ್ 28ರಿಂದ ಅಮರನಾಥ ಯಾತ್ರೆ ಆರಂಭಗೊಂಡ ಬಳಿಕದಲ್ಲಿ ಈ ವರೆಗೆ ಆರು ಮಂದಿ ಹೃತ್ಕ್ರಿಯೆ ನಿಂತು ಮೃತಪಟ್ಟಿದ್ದಾರೆ; ಆ ಮೂಲಕ ಮೃತರ ಒಟ್ಟು ಸಂಖ್ಯೆ 12 ಆಗಿದೆ ಎಂದವರು ಹೇಳಿದರು.