ರಾಯಬಾಗ 04: ರಾಷ್ಟ್ರಾದ್ಯಾಂತ ಮಹಾತ್ಮ ಗಾಂಧೀಜಿ ಯವರ 150ನೇ ಜನ್ಮ ದಿನವನ್ನು ಪ್ಲಾಸ್ಟಿಕ್ ಮುಕ್ತ ಭಾರತ ಮತ್ತು ಸ್ವಚ್ಛ ಭಾರತ ಅಭಿಯಾನದೊಂದಿಗೆ ವಿಶಿಷ್ಠವಾಗಿ ಆಚರಿಸಲಾಗುತ್ತಿದೆ, ಈ ಅಭಿಯಾನ ಯಶಸ್ವಿಗೊಳಿಸಲು ದೇಶದ ಪ್ರತಿಯೊಬ್ಬ ಪ್ರಜೆ ಕೈಜೋಡಿಸಬೇಕೆಂದು ಶಾಸಕ ಡಿ.ಎಮ್.ಐಹೊಳೆ ಕರೆ ನೀಡಿದರು.
ಬುಧವಾರ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಸಸಿ ನೇಡುವುದರ ಮೂಲಕ ಮಹಾತ್ಮ ಗಾಂಧೀಜಿಯವರ 150ನೇ ಮತ್ತು ಲಾಲಬಹದ್ದೂರ ಶಾಸ್ತ್ರಿ ಅವರ 115ನೇ ಜಯಂತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಕರು ವಿದ್ಯಾರ್ಥಿಗಳಿಗೆ ಜಲ ಮತ್ತು ಪರಿಸರ ಸಂರಕ್ಷಣೆ, ಶುಚ್ಚಿತ್ವ, ಯೋಗದ ಮಹತ್ವ ಮತ್ತು ಪ್ಲಾಸ್ಟಿಕ್ ಬಳಕೆ ತಡೆಯುವುದರ ಕುರಿತು ಅರಿವನ್ನು ಮೂಡಿಸಿ, ಅವರಲ್ಲಿ ನಾಗರೀಕ ಪ್ರಜ್ಞೆಯನ್ನು ಬೆಳೆಸಬೇಕೆಂದರು.
ತಾ.ಪಂ.ಅಧ್ಯಕ್ಷೆ ಸುಜಾತಾ ಪಾಟೀಲ ಮಾತನಾಡಿ, ಶಿಕ್ಷಕರು ಮಕ್ಕಳಲ್ಲಿ ಗಾಂಧೀಜಿಯವರ ಆದರ್ಶ ಜೀವನ ತತ್ವಗಳನ್ನು ಬೋಧಿಸಿ, ಸಮಾಜದಲ್ಲಿ ಶಾಂತಿ, ಸಹಬಾಳ್ವೆಯಿಂದ ಬದುಕಲು ಮಾರ್ಗದರ್ಶ ನೀಡಬೇಕು. ಇಂದು ದೇಶಾದ್ಯಾಂತ ಪ್ಲಾಸ್ಟಿಕ್ ಮುಕ್ತ ಭಾರತವನ್ನಾಗಿ ಮಾಡಲು ಅಭಿಯಾನ ಕೈಗೊಂಡಿರುವುದು ಸ್ವಾಗತಾರ್ಹವಾಗಿದ್ದು, ವಿದ್ಯಾರ್ಥಿಗಳಲ್ಲಿ ಪ್ಲಾಸ್ಟಿಕ್ನಿಂದ ಪರಿಸರ ಮತ್ತು ಜನರ ಆರೋಗ್ಯದ ಮೇಲೆ ಆಗುವ ಹಾನಿ ಬಗ್ಗೆ ಮನವರಿಕೆ ಮಾಡಿಸಬೇಕೆಂದರು.
ತಹಶೀಲ್ದಾರ ಡಿ.ಎಚ್.ಕೋಮರ, ತಾ.ಪಂ.ಇಒ ಸುದೀಪ ಚೌಗಲಾ, ಬಿಇಒ ಎಚ್.ಎ.ಭಜಂತ್ರಿ, ದೈಹಿಕ ಪರೀವಿಕ್ಷಕ ಡಿ.ಎಸ್.ಡಿಗ್ರಜ, ಸಮನ್ವಯಾಧಿಕಾರಿ ಬಿ.ಎಮ್.ಮಾಳಿ, ಅಣ್ಣಾಸಾಬ ಖೆಮಲಾಪೂರೆ, ಸದಾಶಿವ ಘೋರ್ಪಡೆ, ಶಿವಾನಂದ ಹುಲಗಬಾಳಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.