ವರುಣನ ಕಣ್ಣು ಮುಚ್ಚಾಲೆ ಆಟಕ್ಕೆ ಅಡಕೆ ಬೆಳೆಗಾರರು ಕಂಗಾಲು
ಲೋಕದರ್ಶನ ವರದಿ
ಮುಂಡಗೋಡ 8: ಕಳೆದ ಒಂದು ವಾರದಿಂದ ವರುಣನ ಕಣ್ಣು ಮುಚ್ಚಾಲೆ ಆಟಕ್ಕೆ ಅಡಕೆ ಬೆಳೆಗಾರರು ಕಟಾವಾದ ಅಡಕೆಯನ್ನು ಒಣಗಿಸಲಾಗದೇ ಸಂಕಷ್ಟಕ್ಕೀಡಾದ ಪರಿಸ್ಥಿತಿ ತಾಲೂಕಿನ ಬೆಡಸಗಾಂವ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳಲ್ಲಿ ರೈತರ ಗೋಳು ಕೆಳುವರಾರು ಅನ್ನುವ ಹಾಗೆ ಆಗಿದೆ.
ಮಲೆನಾಡು ಪ್ರದೇಶವೆನಿಸಿಕೊಂಡಿರುವ ಬೆಡಸಗಾಂವ ಸುತ್ತಮುತ್ತಲಿನ ಹಳ್ಳಿಗಳ ರೈತರ ಪ್ರಮುಖವಾದ ಹಾಗೂ ವಾಣಿಜ್ಯ ಬೆಳೆ ಅಡಕೆಯಾಗಿದ್ದು ಈಗ ಅಡಕೆ ಬೆಳೆಯ ಕಟಾವು ನಡೆದಿದೆ. ಆದರೆ ಇದೇ ವೇಳೆ ಮಳೆ ಬೀಳಲು ಆರಂಭವಾಗಿದ್ದರಿಂದ ಅಡಕೆ ಬೆಳೆಗಾರರಿಗೆಲ್ಲ ತುಂಬಾ ತೊಂದರೆಯಾಗಿದೆ. ದಟ್ಟವಾಗಿ ಕವಿದಿರುವ ಮೋಡ ಮತ್ತು ಆಗಾಗ ಬೀಳುತ್ತಿರುವ ಮಳೆಯ ಕಾರಣದಿಂದ ಅಡಕೆ ಬೆಳೆಗಾರರಿಗೆ ಅಡಕೆಯನ್ನು ಕಟಾವು ಮಾಡಿ ಅದನ್ನು ಸುಲಿದು ಒಣಗಿಸುವುದು ಹರ ಸಾಹಸವಾಗಿದೆ.
ಅಡಕೆಯನ್ನು ಕನಿಷ್ಠ ಆರು ದಿವಸಗಳಾದರೂ ಬಿಸಿಲಲ್ಲಿ ಚೆನ್ನಾಗಿ ಒಣಗಿಸಲೇಬೇಕು. ಒಣಗಿದರೆ ಒಳ್ಳೆಯ ಗ್ರೇಡ್ ಸಿಗುತ್ತದೆ ಮತ್ತು ಉತ್ತಮ ಧಾರಣೆ ಬರುತ್ತದೆ. ಇಲ್ಲವಾದರೆ ಅಡಕೆಯು ಮುಗ್ಗು ಹಿಡಿದು ಅಡಕೆಗೆ ಉತ್ತಮ ಗ್ರೇಡ್ ಬರುವುದಿಲ್ಲ ಅದರಿಂದ ಮಾರುಕಟ್ಟೆಯಲ್ಲಿ ಒಳ್ಳೆಯ ಧಾರಣೆ ಸಿಗುವುದಿಲ್ಲ. ಸ್ವಲ್ಪ ಬಿಸಿಲು ಬೀಳುವ ವೇಳೆ ಅಡಕೆಯನ್ನು ಒಣಗಿಸಲು ಹಾಕಿದರೆ ಮತ್ತಷ್ಟು ಹೊತ್ತಿಗೆ ಮಳೆ ಬಂದು ಅಡಕೆಯನ್ನು ಮಳೆಯಿಂದ ರಕ್ಷಿಸಿಕೊಳ್ಳಬೇಕು. ಮಳೆಯಿಂದ ತುಂಬಾ ತೊಂದರೆಯಾಗಿದೆ. ಅಡಕೆ ತಯಾರು ಮಾಡಲು ಸುಲಿದ ಅಡಕೆಯೆಲ್ಲ ಮುಗ್ಗು ಬರುತ್ತಾ ಇದೆ ಎಂದು ಬೆಡಸಗಾಂವ್ನ ಮಹಾಬಲೇಶ್ವರ ಗಣಪತಿ ಭಟ್ಟ ತಮ್ಮ ನೋವನ್ನು ಪತ್ರಿಕೆಗೆ ಮಾಹೀತಿ ನೀಡಿದ್ದಾರೆ.