ಭೋಪಾಲ್ ಅ 16: ರಸ್ತೆಗಳನ್ನು ಚಿತ್ರನಟಿಯರ ಮುಖ ಮತ್ತು ಕೆನ್ನೆಗೆ ಹೋಲಿಕೆ ಮಾಡುವ ಪರಿಪಾಠ ಮುಂದುವರಿದು ಕೊಂಡು ಬಂದಿದೆ. ಹಿಂದೆ ಒಮ್ಮೆ ರಸ್ತೆಗಳ ಸ್ಥಿತಿಯನ್ನು ಬಿಹಾರದ ಮುಖ್ಯಮತ್ರಿಯಾಗಿದ್ದ ಲಾಲು ಪ್ರಸಾದ್ ಅವರು ಹೇಮಮಾಲಿನಿಯ ಕೆನ್ನೆಗೆ ಹೋಲಿಕೆ ಮಾಡಿದ್ದರು. ಆಗ ಇದಕ್ಕೆ ಅವರ ವಿರೋಧಿಯೊಬ್ಬರು ಪ್ರಬ್ರಲವಾಗಿ ಆಕ್ಷೇಪಿಸಿ ರಸ್ತೆಗಳು ಓಂ ಪುರಿಮುಮುಖದಂತಾಗಿದೆ ಎಂದು ಜರಿದಿದ್ದರು.
ಮಧ್ಯಪ್ರದೇಶದಲ್ಲಿ ರಸ್ತೆ ವಿವಾದ ಬಿಜೆಪಿ ಕಾಂಗ್ರೆಸ್ ನಡುವೆ ಜುಗಲ್ ಬಂಧಿಗೆ ಕಾರಣವಾಗಿದೆ. ರಾಜ್ಯದ ರಸ್ತೆ ಪರಿಸ್ಥಿತಿಗಳನ್ನು ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯ ಕೆನ್ನೆಗೆ ಹೋಲಿಕೆ ಮಾಡಿ ಮಧ್ಯಪ್ರದೇಶ ಸಚಿವ ಪಿ.ಸಿ. ಶರ್ಮಾ ಹೊಸ ವಿವಾದಕ್ಕೆ ಕಾರಣವಾಗಿದ್ದಾರೆ. ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯ ಕೆನ್ನೆಯಂತೆ ಇರುವ ಮಧ್ಯಪ್ರದೇಶದ ರಸ್ತೆಗಳನ್ನು ಕಾಂಗ್ರೆಸ್ ಸರ್ಕಾರ ಶೀಘ್ರದಲ್ಲೇ ಬಿಜೆಪಿ ಲೋಕಸಭಾ ಸಂಸದೆ ಹೇಮಾಮಾಲಿನಿ ಕೆನ್ನೆಯಂತೆ ನುಣುಪಾಗಿ ಮಾಡಲಿದೆ ಎಂದು ಸಚಿವ ಪಿ.ಸಿ. ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭೂಪಾಲ್ ನ ರಸ್ತೆ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸುತ್ತಿದ್ದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಸ್ತೆಗಳು ವಿಜಯವರ್ಗಿಯ ಕೆನ್ನೆಯಂತಿದ್ದು, ಇವುಗಳಿಗೆ ಪ್ಲಾಸ್ಟಿಕ್ ಸರ್ಜರಿಯ ಅವಶ್ಯಕತೆಯಿದೆ. ಮಧ್ಯಪ್ರದೇಶದ ರಸ್ತೆಗಳನ್ನು ಅಮೆರಿಕದ ರಾಜಧಾನಿ ವಾಷಿಂಗ್ಟನ್ನ ರಸ್ತೆಗಳಂತೆ ನಿರ್ಮಿಸಲಾಗುವುದು ಎಂದರು.
ಮಳೆಯ ನಂತರ, ಎಲ್ಲೆಡೆ ಗುಂಡಿಗಳಿವೆ. ಪ್ರಸ್ತುತ ರಸ್ತೆಗಳ ಸ್ಥಿತಿ ಸಿಡುಬಿನ ಕಲೆಗಳಾಂತಾಗಿ ಕೈಲಾಶ್ ವಿಜಯವರ್ಗಿಯ ಕೆನ್ನೆಗಳಂತೆ ಮಾರ್ಪಟ್ಟಿದೆ ಎಂದು ಜರಿದಿದ್ದಾರೆ.
ಹದಗೆಟ್ಟ ರಸ್ತೆಗಳನ್ನು ಇನ್ನು 15 ದಿನಗಳಲ್ಲಿ ದುರಸ್ತಿ ಮಾಡಿ ಸಂಸದೆ ಹೇಮಾಮಾಲಿನಿ ಕೆನ್ನೆಗಳಂತೆ ನಯವಾಗಿ ಮಾಡಲಾಗುವುದು ಎಂದು ಸಚಿವರು ಹೇಳಿಕೆ ನೀಡಿ ವಿವಾದ ಕಿಡಿ ಹೊತ್ತಿಸಿದ್ದಾರೆ.