ಎಟಿಪಿ ಫೈನಲ್ಸ್: ವಿಶ್ವ ಅಗ್ರ ಆಟಗಾರ ನಡಾಲ್ಗೆ ಆಘಾತ ನೀಡಿದ ಜ್ವೆರೆವ್

ಲಂಡನ್, ನ 12 :       ವಿಶ್ವದ ಅಗ್ರ ಶ್ರೇಯಾಂಕಿತ ರಫೆಲ್ ನಡಾಲ್ ಅವರು ಎಟಿಪಿ ವಿಶ್ವ ಟೂರ್ ಫೈನಲ್ಸ್ ಗುಂಪು ಹಂತದ ಮೊದಲನೇ ಪಂದ್ಯದಲ್ಲಿ ನೇರ ಸೆಟ್ಗಳಿಂದ ಜರ್ಮನಿಯ ಅಲೆಕ್ಸಾಡರ್ ಜ್ವೆರೆವ್ ವಿರುದ್ಧ ಸೋತು ನಿರಾಸೆ ಅನುಭವಿಸಿದರು.  ಸೋಮವಾರ ತಡರಾತ್ರಿ(ಭಾರತೀಯ ಕಾಲಮಾನ) ನಡೆದ ಸಿಂಗಲ್ಸ್ ಹಣಾಹಣಿಯಲ್ಲಿ ಪ್ರೇರಿತ ಪ್ರದರ್ಶನ ತೋರಿದ ಅಲೆಕ್ಸಾಂಡರ್ ಜ್ವೆರೆವ್, 6-2, 6-4 ಅಂತರದಲ್ಲಿ ನೇರ ಸೆಟ್ಗಳಿಂದ ಸ್ಪೇನ್ ಆಟಗಾರನ ವಿರುದ್ಧ ಗೆದ್ದು ಪ್ರಭುತ್ವ ಸಾಧಿಸಿದರು. ಅಗ್ರ ಶ್ರೇಯಾಂಕಿತ ಆಟಗಾರನ ವಿರುದ್ಧ ಮೊದಲನೇ ಗೆಲುವು ಇದಾಯಿತು. ಗಾಯದಿಂದಾಗಿ ನವೆಂಬರ್ 2 ರಂದು ಪ್ಯಾರಿಸ್ ಮಾಸ್ಟರ್ಸ್ ವಿಥ್ ಡ್ರಾ ಮಾಡಿಕೊಂಡ ಬಳಿಕ ರಫೆಲ್ ನಡಾಲ್ ಇದೇ ಮೊದಲ ಬಾರಿ ಕಣಕ್ಕೆ ಇಳಿದರು. ಆದರೆ, ನಿರೀಕ್ಷಿತ ಪ್ರದರ್ಶ ತೋರುವಲ್ಲಿ ವಿಫಲರಾದರು. ಆದರೆ, ಗಾಯದಿಂದಾಗಿ ಸೋಲು ಅನುಭವಿಸಿದ ಬಗ್ಗೆ ಅವರು ನಿರಾಕರಿಸಿದರು.  " ಪಂದ್ಯದಲ್ಲಿ ಗಾಯದ ಬಗ್ಗೆ ಯಾವುದೇ ಅಡೆತಡೆ ಉಂಟಾಗಲಿಲ್ಲ. ಆದರೆ, ಎದುರಾಳಿ ಆಟಗಾರ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ಯಶಸ್ವಿಯಾದರು. ನಾನು ಅತ್ಯಂತ ಕೆಟ್ಟ ಪ್ರದರ್ಶನ ತೋರಿದೆ. ಹಾಗಾಗಿ, ಸೋಲು ಅನುಭವಿಸಬೇಕಾಯಿತು. ಇನ್ನೆರಡು ದಿನಗಳಲ್ಲಿ ನನ್ನ ಆಟದಲ್ಲಿ ಸುಧಾರಣೆ ಕಂಡುಕೊಳ್ಳುವ ಅಗತ್ಯವಿದೆ." ಎಂದು ಪಂದ್ಯದ ಬಳಿಕ ನಡಾಲ್ ಹೇಳಿದರು.