ಬೆಂಗಳೂರು, ಫೆ 17, ರಾಜ್ಯ ವಿಧಾನಮಂಡಲ ಅಧಿವೇಶನ ಇಂದಿನಿಂದ ಪ್ರಾರಂಭವಾಗಿದ್ದು, ರಾಜ್ಯಪಾಲ ವಜೂಭಾಯಿ ವಾಲಾ ಅವರು ವರ್ಷದ ಮೊದಲ ಅಧಿವೇಶನದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ. ಸರ್ಕಾರದ ಪ್ರಗತಿಯಲ್ಲಿರುವ ವಿವಿಧ ಯೋಜನೆಗಳು, ಜನಪ್ರಿಯ ಕಾರ್ಯಕ್ರಮಗಳ ಮಾಹಿತಿ ಒಳಗೊಂಡ ೨೦ ಪುಟಗಳ ಸಂಳಕ್ಷಿಪ್ತ ಭಾಷಣವನ್ನು ರಾಜ್ಯಪಾಲರು ಹಿಂದಿಯಲ್ಲಿ ಓದಿದರು. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು. ಐಟಿ ಬಿಟಿ ನಗರ ಬೆಂಗಳೂರಿನಲ್ಲಿ ಸೈಬರ್ ಅಪರಾಧ ಪ್ರಕರಣಗಳನ್ನು ಹತ್ತಿಕ್ಕಲು 8 ಸೈಬರ್ ಅಪರಾಧ ನಿಗ್ರಹಿಸುವ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗುತ್ತಿದ್ದು, ಭಯೋತ್ಪಾದನಾ ವಿರೋಧಿ ಘಟಕ ಅಸ್ಥಿತ್ವಕ್ಕೆ ಬರುತ್ತಿದ್ದು, ಪೋಲಿಸ್ ನೇಮಕಾತಿಯಲ್ಲಿ ಶೇ ೨೫% ರಷ್ಟು ಮೀಸಲಾತಿ ಕಲ್ಪಿಸಲಾಗುತ್ತಿದೆ ಎಂದರು. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ರೈತ ಕಲ್ಯಾಣ ಸರ್ಕಾರದ ಪ್ರಧಾನ ಆದ್ಯತೆಯಾಗಿದೆ.
ರಾಜ್ಯ ಸರ್ಕಾರ ಕಿಸಾನ್ ಸಮ್ಮಾನ್ಯೋಜನೆ ಅಡಿ ೪೧ ಲಕ್ಷ ರೈತರ ಖಾತೆಗೆ ೮.೨೫ ಕೋಟಿ ರೂ ಹಣವನ್ನು ವರ್ಗಾವಣೆ ಮಾಡಿದೆ ಎಂದರು. ನೆರೆ ಸಂತ್ರಸ್ತರ ಸಮಸ್ಯೆಯನ್ನು ಸರ್ಕಾರ ಅತ್ಯಂತ ಪರಿಣಾಮಕಾರಿಯಾಗಿ ನಿಭಾಯಿಸಿದ್ದು, ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಿದೆ. ಈವರೆಗೆ ನೆರೆ ಪರಿಹಾರಕ್ಕಾಗಿ ೮೨೭ ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದು ರಾಜ್ಯಪಾಲರು ಹೇಳಿದರು. ಕೈಗಾರಿಕಾ ಕ್ಷೇತ್ರದ ಅಭ್ಯುದಯ ಸರ್ಕಾರದ ಆದ್ಯತೆಯಾಗಿದ್ದು, ೪,೦೫೦ ಕೋಟಿ ವೆಚ್ಚದ ೨೧ ಯೋಜನೆಗಳಿಗೆ ಅನುಮೋದನೆ ಕೊಡಲಾಗಿದ್ದು, ಆಯುಷ್ಮಾನ್ ಯೋಜನೆ ಅಡಿ ೩.೩ ಲಕ್ಷ ಫಲಾನುಭವಿಗಳ ಚಿಕಿತ್ಸೆ ಒದಗಿಸಲಾಗಿದೆ. ಅಪೌಷ್ಟಿಕತೆ ಮಕ್ಕಳ ಚಿಕಿತ್ಸೆಗಾಗಿ ೪೯ ಕೇಂದ್ರಗಳು ಸ್ಥಾಪಿಸಲಾಗುತ್ತಿದೆ ಎಂದರು. ಬೆಳಗ್ಗೆ 10.55ಕ್ಕೆ ವಿಧಾನಸೌಧ ಪೂರ್ವ ದ್ವಾರಕ್ಕೆ ಆಗಮಿಸಿದ ರಾಜ್ಯಪಾಲರನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ತಿನ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಬರ ಮಾಡಿಕೊಂಡರು.