ಪರಿಷತ್ತ್ ಅಗಲಿದ ಗಣ್ಯರಿಗೆ ಸಂತಾಪ: ಕಲಾಪ ದಿನದ ಮಟ್ಟಿಗೆ ಮುಂದೂಡಿಕೆ

ಬೆಂಗಳೂರು, ಫೆ.  17, ವಿಧಾನಮಂಡಲದ ಜಂಟಿ ಅದಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣದ ಬಳಿಕ ಸಂಪ್ರದಾಯದಂತೆ ವಿಧಾನ ಪರಿಷತ್ ಕೂಡ ಇಂದು ಸಮಾವೇಶಗೊಂಡಿತ್ತು.140ನೇ ಅಧಿವೇಶನದ ಮೊದಲನೇ ದಿನದ ಕಲಾಪ ಆರಂಭಗೊಳ್ಳುತ್ತಿದ್ದಂತೆ  ಇತ್ತೀಚೆಗೆ ನಿಧನರಾದ 19 ಗಣ್ಯರಿಗೆ  ಸಂತಾಪ ಸೂಚನೆ ಬಳಿಕ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ಇದಕ್ಕೂಮೊದಲು ವಂದೇಮಾತರಂ ಗೀತೆಯ ಮೂಲಕ ಕಲಾಪ ಆರಂಭಗೊಂಡಿತ್ತು. ಸಭಾಪತಿ ಪ್ರತಾಪ್ಚಂದ್ರ ಶೆಟ್ಟಿ ಪರಿಷತ್ ಅವರು ಇತ್ತೀಚೆಗೆ ನಿಧನರಾದ ಮಾಜಿ ರಾಜ್ಯಪಾಲ  ಟಿ.ಎನ್.ಚತುರ್ವೇದಿ, ನಾರಾಯಣ ರಾವ್ , ಮಾಜಿ ಸಭಾಪತಿ ಡಿ.ಮಂಜುನಾಥ್, ಮಾಜಿ ಸಚಿವ  ಡಾ.ವೈಜನಾಥ್ ಪಾಟೀಲ್, ಹಿರಿಯ ಸಮಾಜವಾದಿ ಜಿ.ಮಾದಪ್ಪ, ವಿಧಾಸಭೆ ಮಾಜಿ ಸದಸ್ಯ  ಮಲ್ಲಾರಿಗೌಡ ಶಂಕರಗೌಡ ಪಾಟೀಲ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಮಾಜಿ ಶಾಸಕ ನಾರಾಯಣರಾವ್  ಗೋವಿಂದ ತರಳೆ, ಉಡುಪಿಯ ವಿಶ್ವೇಶ  ಪೇಜಾವರ ತೀರ್ಥಶ್ರೀ, ಸ್ಯಾಕ್ಸೋಫೊನ್ ವಾದಕ ಕದರಿ  ಗೋಪಾಲನಾಥ ,ಹಿರಿಯ ಲೇಖಕ ಎಂ.ಚಿದಾನಂದಮೂರ್ತಿ, ಯಕ್ಷಗಾನ ಕಲಾವಿದ ಹೊಸ್ತೋಟ ಮಂಜುನಾಥ  ಭಾಗವತ, ಸಾಹಿತಿ ಡಾ.ಚನ್ನಣ್ಣ ವಾಲೀಕಾರ್, ಕೃಷಿ ವಿಜ್ಞಾನಿ ಪ್ರೊ.ಎಸ್.ಕಟಗಿಹಳ್ಳಿಮಠ,  ಅಮೆರಿಕದ ನಾಸಾ ನಿವೃತ್ತ ವಿಜ್ಞಾನಿ ಡಾ.ನವರತ್ನ  ಶ್ರೀನಿವಾಸ ರಾಜಾರಾಮ್, ಹಿರಿಯ ಸಾಹಿತಿ  ಚಂದ್ರಕಾಂತ್ ಕರದಳ್ಳಿ, ನೃತ್ಯ ವಿದ್ವಾಂಸ ಡಾ. ಆರ್.ಸತ್ಯನಾರಾಯಣ್ ಅವರ ನಿಧನಕ್ಕೆ  ಸದನದಲ್ಲಿ ಸಂತಾಪ ಸೂಚಿಸಿದರು.ಸಂತಾಪದ ಮೇಲೆ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ವಿಪಕ್ಷ ನಾಯಕ ಎಸ್.ಆರ್ಪಾಟೀಲ್ ಮಾತನಾಡಿದರು.ಈ ಮಧ್ಯೆ ಇತ್ತೀಚೆಗೆ ಉಪಚುನಾವಣೆಯಲ್ಲಿ  ಬಿಜೆಪಿಯಿಂದ  ಗೆಲುವು ಸಾಧಿಸಿ ಸಚಿವರಾಗಿರುವ ನಾರಾಯಣಗೌಡ ಅವರು  ಮೊದಲ ಬಾರಿಗೆ ಮೇಲ್ಮನೆ  ಪ್ರವೇಶಿಸಿದರು. ವಿಧಾನ ಪರಿಷತ್ತಿನಲ್ಲಿ ಆಡಳಿತರೂಢ ಶಾಸಕರ ಸಾಲಿನಲ್ಲಿ ಕುಳಿತುಕೊಳ್ಳದೇ  ಜೆಡಿಎಸ್ ಶಾಸಕರ ಸಾಲಿನಲ್ಲಿ ಕುಳಿತುಕೊಂಡು ಗಮನ ಸೆಳೆದರು.ಸಂತಾಪ ಸೂಚನೆ ಬಳಿಕ ಸಭಾಪತಿ ಕಲಾಪವನ್ನು ಮಂಗಳವಾರ ಬೆಳಿಗ್ಗೆ 10.30ಕ್ಕೆ ಮುಂದೂಡಿದರು.