ಶಾಲೆಗೆ ಬಂದ ಶಿಕ್ಷಕ ಹೃದಯಾಘಾತದಿಂದ ಸಾವು
ಕಾಗವಾಡ 28: ಶಾಲೆಗೆ ಪಾಠ ಮಾಡಲು ಬಂದ ಶಿಕ್ಷಕರೊಬ್ಬರು ಹೃದಯಾಘಾತದಿಂದ ಪ್ರಾಣ ಬಿಟ್ಟಿರುವ ಘಟನೆ ತಾಲೂಕಿನ ಮಂಗಸೂಳಿ ಗ್ರಾಮದ ಸರಕಾರಿ ಎಮ್ ಆರ್ ಎಮ್ ಕೆ ಪಿ ಎಸ್ ಪ್ರೌಢ ಶಾಲೆಯಲ್ಲಿ ಗುರುವಾರ ನಡೆದಿದೆ.
ಶಾಲೆಯ ಸಮಾಜ-ವಿಜ್ಞಾನ ಶಿಕ್ಷಕ ಭರತ ಶಿಂದೆ (47) ಬೆಳಿಗ್ಗೆ ಶಾಲಾ ಆವರಣಕ್ಕೆ ಬರುತ್ತಲೇ ಎದೆ ನೋವು ಕಾಣಿಸಿಕೊಂಡಿದೆ. ಶಾಲೆಯ ಇನ್ನುಳಿದ ಶಿಕ್ಷಕರು ಅವರನ್ನು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಮಿರಜ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಶಿಕ್ಷಕ ಮೂಲತಃ ರಾಯಬಾಗ ತಾಲೂಕಿನ ಬಿರಡಿ ಗ್ರಾಮದವರಾಗಿದ್ದು ಈ ಮೊದಲು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಮುಂಬಡ್ತಿ ಪಡೆದು ಪ್ರೌಢ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.