ಕೆಳವರ್ಗದ ಹುಡುಗನ ಸಂಘರ್ಷದ ಹಾದಿ

ಕ್ಯಾಸನಕೇರೆ ಎಂಬ ಹಳ್ಳಿಯ ಕೆಳವರ್ಗದ ಜನಾಂದಲ್ಲಿ ಹುಟ್ಟಿ ಬೆಳೆದ ಮುತ್ತತ್ತಿ ಮುತ್ತುರಾಜ್ (ನಾಯಕ ಜಯಪ್ರಕಾಶ್ ರೆಡ್ಡಿ) ತನ್ನವರಿಗೆ ಆಗುತ್ತಿರುವ ಅನ್ಯಾಯವನ್ನು ಕಂಡು, ನಾನು ಎಲ್‌.ಎಲ್‌.ಬಿ ಓದಿ ತನ್ನ ಜನಾಂಗದ ಧ್ವನಿಯಾಗಿ ನಿಲ್ಲಬೇಕು ಎಂಬ ಉದ್ದೇಶದಿಂದ ಶಿವಮೊಗ್ಗದ ಲಾ ಕಾಲೇಜ್‌ಗೆ ಸೇರುತ್ತಾನೆ. ತರ್ಲೆ, ತುಂಟಾಟಗಳಿಂದ ಶುರುವಾಗುವ ಕಾಲೇಜು ಜರ್ನಿಯಲ್ಲಿ ಮುತ್ತುಗೆ ಜೋತಿ ಮಹಾಲಕ್ಷ್ಮೀ (ನಾಯಕಿ ಮೀನಾಕ್ಷಿ) ಪರಿಚಯವಾಗುತ್ತದೆ. ಎಲ್ಲಾ ವಿಷಯಗಳಲ್ಲಿ ಮುಂದಿರುವ ಮುತ್ತುಗೆ ಇಂಗ್ಲೀಷ್‌ನಲ್ಲಿ ಜಿರೋ ನಾಲೇಜ್‌. ಮುತ್ತುಗೆ ಇಂಗ್ಲೀಷ ಕಲಿಸಿ ಪಾಸ್ ಮಾಡಿಸುವ ಜವಾಬ್ದಾರಿ ಜೋಗೆ. ಹೀಗೆ ಶುರುವಾದ ಮುತ್ತು ಜೋ ಪರಿಚಯ ಸ್ನೇಹವಾಗಿ ಕಾಲೇಜ್ ಹುಡುಗರೆಲ್ಲ ಇವರಿಬ್ಬರ ಬಗ್ಗೆ ಮಾತನಾಡುವಂತಾಗುತ್ತದೆ. 

ಕೆಳವರ್ಗದಿಂದ ಬಂದ ಮುತ್ತು ಹಾಗೂ ಮೇಲ್ವರ್ಗದಿಂದ ಬಂದ ಜೋ ನಡುವೆ ಇರುವುದು ಸ್ನೇಹಾನಾ? ಪ್ರೀತಿನಾ? ಜೋ ಮನೆಯಲ್ಲಿ ಮುತ್ತುವನ್ನು ಒಪ್ಪಿಕೊಳ್ಳುತ್ತಾರ? ಕಾಲೇಜ್‌ನಲ್ಲಿ ನಡೆಯುತ್ತಿದ್ದ ವರ್ಗ ಸಂಘರ್ಷ ಏನು? ನಾನು ಓದಿ ಊರು ಉದ್ದಾರ ಮಾಡಬೇಕೆಂಬ ಮುತ್ತುನ ಕನಸು ಇಡೇರುತ್ತಾ? ಎಂಬ ಪ್ರಶ್ನೆಗಳಿಗೆ ಉತ್ತರವಾಗಿ ‘ಕರ್ಕಿ’ ಸಿನಿಮಾ ನೋಡಲೇ ಬೇಕು. ಸಿನಿಮಾದ ಕಥೆ ಏನೋ ಚನ್ನಾಗಿದೆ. ಆದರೆ ಇಂದಿನ ಕಾಲಘಟ್ಟಕ್ಕೆ ಕಥೆ ಸುಕ್ತವಾಗಿಲ್ಲ. ಚಿತ್ರದಲ್ಲಿ ತೋರಿಸಿದಂತೆ ಸದ್ಯ ಸಮಾಜದ ಪರಿಸ್ಥಿತಿ ಇಲ್ಲ ಎಂದು ಹೇಳಬಹುದು. ಹಾಗಾಗಿ ‘ಕರ್ಕಿ’ ಹಳೆಯ ಕಥೆ ಎನಿಸುತ್ತದೆ. ಇದೊಂದು ತಮಿಳಿನ ಚಿತ್ರವೊಂದರ ರಿಮೇಕ್ ಆಗಿದ್ದರು ಒಂದಿಷ್ಟು ಬದಲಾವಣೆ ಮಾಡಿಕೊಂಡು ನಿರ್ದೇಶಕರು ಅಚ್ಚುಕಟ್ಟಾಗಿ ಸಿನಿಮಾ ಕಟ್ಟಿ ಕೊಟ್ಟಿದ್ದಾರೆ. ಕಲಾವಿದರ ನಟನೆ ಚನ್ನಾಗಿದ್ದು, ನಾಯಕ ಜೆಪಿ ಮೊದಲಿಗಿಂತ ನಟನೆಯಲ್ಲಿ ಪಳಗಿದ್ದಾರೆ. ಇನ್ನು ಮಲಯಾಳಂ ಮೂಲದ ನಾಯಕಿ ಮೀನಾಕ್ಷಿ ಪಾತ್ರದಲ್ಲಿ ಹೆಚ್ಚು ಆಕರ್ಷಿಸುತ್ತಾರೆ. ಜೊತೆಗೆ ನಾಯಕನ ಗೆಳೆಯನಾಗಿ ಸಾಧುಕೋಕಿಲ ಪ್ರೇಕ್ಷಕರನ್ನು ರಂಜಿಸುವರು.  

ಇನ್ನು ಸಿನಿಮಾ ಸ್ಕ್ರೀನ್ ಪ್ಲೇ, ಛಾಯಾಗ್ರಹಣ ಉತ್ತಮವಾಗಿದ್ದು, ಒಂದು ಹಾಡು ಮತ್ತು ಬ್ಯಾಗರೌಂಡ್ ಸಂಗೀತ ಅದ್ಭುತವಾಗಿದೆ. ಚಿತ್ರದ ಸಂಭಾಷಣೆ ಹಳತಾಗಿದ್ದು, ಕೆಲವು ಕಡೆ ಡ್ರಾಮಾ ಡೈಲಾಗ್ ತರಾ ಫಿಲ್ ಬರುತ್ತದೆ. ಇಷ್ಟನ್ನು ಹೊರತು ಪಡಿಸಿ ಸಿನಿಮಾ ಚನ್ನಾಗಿ ಬಂದಿದ್ದು, ಈ ವಾರ ತೆರೆಗೆ ಬಂದ ಸಿನಿಮಾಗಳ ಪೈಕಿ ಪ್ರೇಕ್ಷಕರಿಗೆ ‘ಕರ್ಕಿ’ ಒಂದು ಒಳ್ಳೆಯ ಆಯ್ಕೆ ಎನ್ನಬಹುದು. 

ಚಿತ್ರ; ಕರ್ಕಿ 

ನಿರ್ದೇಶಕರು; ಪವಿತ್ರನ್ 

ನಿರ್ಮಾಪಕರು; ಪ್ರಕಾಶ್ ಪಳನಿ 

ಸಂಗೀತ; ಅರ್ಜುನ್ ಜನ್ಯ 

ತಾರಾಗಣ; ಜಯಪ್ರಕಾಶ್ ರೆಡ್ಡಿ (ಜೆಪಿ), ಮೀನಾಕ್ಷಿ, ಸಾಧುಕೋಕಿಲ, ಬಲರಾಜ ವಾಡಿ, ಯತಿರಾಜ್, ಮಿಮಿಕ್ರಿ ಗೋಪಿ, ಸ್ವಾತಿ, ಮಂಜು ಮುಂತಾದವರು.