ಡಿ.16 ರಂದು ಬೆಳಗಾವಿಯಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶ ಕಾರ್ಯಕ್ರಮ ಜರುಗಲಿದೆ
ರಾಯಬಾಗ 14 : ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಒಳ ಮೀಸಲಾತಿ ಜಾರಿಗೊಳಿಸಲು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಬೇಕೆಂದು ಆಗ್ರಹಿಸಿ ಶನಿವಾರ ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಮಾದಿಗ ಮತ್ತು ಮಾದಿಗ ಉಪಜಾತಿ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಶಾಸಕ ಡಿ.ಎಮ್.ಐಹೊಳೆಯವರಿಗೆ ಮನವಿ ಸಲ್ಲಿಸಿದರು. ಮುಖಂಡ ಸಂಜು ಮೈಶಾಳೆ ಮಾತನಾಡಿ, ಸರ್ವೋಚ್ಚ ನ್ಯಾಯಾಲಯದ ಸಂವಿಧಾನ ಪೀಠ ಒಳಮೀಸಲಾತಿಯನ್ನು ಜಾರಿ ಮಾಡುವ ಅಧಿಕಾರವನ್ನು ಆಯಾ ರಾಜ್ಯಗಳಿಗೆ ನೀಡಿ ಐತಿಹಾಸಿಕ ತೀಪು ನೀಡಿದೆ. ಆದರೆ ಕರ್ನಾಟಕ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಲು ಹಿಂದೇಟ ಹಾಕುತ್ತಿದೆ ಎಂದು ಆರೋಪಿಸಿದರು. ಸರ್ಕಾರದ ಈ ನಿಧಾನಗತಿಯ ನಿರ್ಲಕ್ಷ್ಯ ಧೋರಣೆಯಿಂದ ದಲಿತ ಸಮುದಾಯ ಒಳಮೀಸಲಾತಿಯಿಂದ ವಂಚಿತಗೊಳ್ಳುತ್ತಿದೆ ಎಂದರು. ಚಳಿಗಾಲದ ಅಧಿವೇಶನದಲ್ಲಿ ಒಳಮೀಸಲಾತಿ ಬಗ್ಗೆ ಸರ್ಕಾರದ ಗಮನ ಸೆಳೆಯಲು ರಾಜ್ಯದ ಎಲ್ಲ ಶಾಸಕರ ಗೃಹ ಕಚೇರಿಗಳ ಮುಂದೆ ತಮಟೆ ವಾದ್ಯದೊಂದಿಗೆ ಮನವಿ ಸಲ್ಲಿಸಲಾಗುತ್ತಿದೆ. ಮತ್ತು ಡಿ.16 ರಂದು ಬೆಳಗಾವಿಯಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಮುಖಂಡರಾದ ಮಹೇಶ ಕರಮಡಿ, ಅಶೋಕ ಮರೆಪ್ಪಗೋಳ, ರೀತೇಶ ಅವಳೆ, ಮಹಾವೀರ ಮಾಂಗ, ರಾಕೇಶ ಅವಳೆ, ಉಮೇಶ ಪೂಜಾರಿ, ರಾಘವೇಂದ್ರ ಮೇತ್ರಿ, ರೇಖಾ ಭಂಡಾರೆ, ಲಕ್ಕವ್ವ ಮಂಟೂರ, ಲವ್ವಪ್ಪ ಐಹೊಳೆ, ಮಹೇಶ ಮಾಂಗ, ಚಂದ್ರು ಕಾಂಬಳೆ, ಸಂಜು ಮೇಗಾಡೆ, ಅಮರ ದಾದುಗೋಳ ಸೇರಿ ಅನೇಕರು ಇದ್ದರು.