ಬೆಂಗಳೂರಿನಲ್ಲಿ ಕಂಡಕ್ಟರಾಗಿ ಜೀವನ ಸಾಗಿಸುತ್ತಿದ್ದ ಶಿವಾಜಿರಾವ್ ಗಾಯಕವಾಡ ಎನ್ನುವ ಒಬ್ಬ ಸಾಮಾನ್ಯ ವ್ಯಕ್ತಿ ತಮಿಳು ಚಿತ್ರ ರಂಗದ ಸೂಪರ್ ಸ್ಟಾರ್ ರಜನಿಕಾಂತ ಆಗುತ್ತಾನೆ. ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನೆಂಬ ಒಬ್ಬ ಕಲಾವಿದರ ಉದರದಲ್ಲಿ ಜನಿಸಿದ ಮುತ್ತುರಾಜನೆಂಬ ವ್ಯಕ್ತಿ ಕನ್ನಡ ಚಲನಚಿತ್ರ ರಂಗದ ಸೂಪರ್ ಸ್ಟಾರ್ ಡಾ.ರಾಜ್‌ಕುಮಾರ್ ಆಗುತ್ತಾರೆ. ಬೆಳಗೆದ್ದು ಮನೆ ಮನೆಗೂ ಹಾಲು ಹಾಕುತ್ತ ಬದುಕು ಕಟ್ಟಿಕೊಂಡ ಎನ್.ಟಿ. ರಾಮರಾವ್ ಎಂಬುವವರು ತೆಲುಗು ಚಿತ್ರರಂಗದ ಧೈತ್ಯ ಪ್ರತಿಭೆಯಾಗಿ ಬೆಳೆದು ಆಂದ್ರ್ರದೇಶದ ಮುಖ್ಯಮಂತ್ರಿಯಾಗುತ್ತಾರೆ. ಓದನ್ನು ಅರ್ಧಕ್ಕೆ ಡ್ರಾಪ್ ಮಾಡಿ ಬಂದವರು, ಬಡತನದಲ್ಲಿಯೇ ಹುಟ್ಟಿ ಬೆಳೆದವರು, ಒಂದು ಚಾನ್ಸ್ ಸಿಗುತ್ತದೆಯೇ ನೋಡೋಣ ಎಂದು ಕೈ ಕಟ್ಟಿ ನಿಂತವರು, ಕಷ್ಟಪಟ್ಟು ಅವಕಾಶ ಗಿಟ್ಟಿಸಿಕೊಂಡವರು ಸೇರಿದಂತೆ ಹತ್ತು ಹಲವು ಜನರು ಇಂದು ಬಣ್ಣದ ಲೋಕವನ್ನು ತಾವು ಬಯಸಿದ ಹಾಗೆ ಆಳುತ್ತಿದ್ದಾರೆ. ಆದರೆ ಅವರೆಲ್ಲ ಕೇವಲ ಹೀರೋ ಆಗಿದ್ದಾರೆ. ಅಬ್ಬಬ್ಬಾ ಎಂದರೆ ಅವರೊಬ್ಬ ಸೂಪರ್ ಸ್ಟಾರ್ ಆಗಿದ್ದಾರೆ. ಅದಕ್ಕೂ ಮಿಗಿಲಾಗಿ ಅವರೇನಾಗಬಲ್ಲರು? ಈ ಪ್ರಶ್ನೆಗೆ ಉತ್ತರ ನಾವು ನೀವೇ ಕೊಟ್ಟುಕೊಳ್ಳುವುದು ಉತ್ತಮ ಎನ್ನುವುದು ನನ್ನ ಯೋಚನೆ. ಕೆಲವೊಮ್ಮೆ ಆಲೋಚನೆ ಮಾಡಿದಾಗ ಅವರಲ್ಲಿ ಪ್ರತಿಭೆ ಇದ್ದವರು ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ. ಮತ್ತೆ ಕೆಲವರು ಅದೃಷ್ಟ ಪರೀಕ್ಷೆಗೆ ಇಳಿದು ಕೈ ಸುಟ್ಟುಕೊಂಡಿದ್ದಾರೆ. ನಮಗೆ ಅವರೆಲ್ಲ ಹೀರೋ ಆಗಿದ್ದು ದೊಡ್ಡ ವಿಷಯವಲ್ಲ. ಆದರೆ ಒಬ್ಬ ಹೀರೋ ಆಗಿ ಜನರ ಮನಸ್ಸನ್ನು ಗೆದ್ದವನು ಇಂದು ದೇವರಾಗುತ್ತಾನೆ ಎಂದರೆ ಅದು ಸಾಮಾನ್ಯ ಕಾರ್ಯವೇ? ಎನ್ನುವುದು ಕೋಟಿ ಮೌಲ್ಯದ ಪ್ರಶ್ನೆ. ಹೀರೋ ಆಗಿ ಜನ ಮಾನಸವನ್ನು ಗೆದ್ದವನು ಮುಂದೊಂದು ದಿನ ಅಭಿಮಾನಿಗಳ ಪಾಲಿಗೆ ಸ್ಟಾರ್ ಆಗುವನೇ ವಿನಃ ಅವರ ಪಾಲಿಗೆ ದೇವರಾಗುತ್ತಾನಾ? ಖಂಡಿತ ಇಲ್ಲ. ಏಕೆಂದರೆ ದೇವರ ಎದುರಿನಲ್ಲಿ ಬದುಕುವ ನಾವುಗಳೇ ದೇವರಾಗಬೇಕೆಂದರೆ ಅದಕ್ಕೆ ನಿಜವಾಗಲೂ ಆ ದೇವರ ಅನುಗ್ರಹ ಬೇಕು. ಅವರ ನಡುವಳಿಕೆ ದೇವರಂತೆಯೇ ಇರಬೇಕು. ಎಲ್ಲದಕ್ಕೂ ಮಿಗಿಲಾಗಿ ದೇವರಂತ ಅಭಿಮಾನಿಗಳ ಹೃದಯದಲ್ಲಿ ಜಾಗ ಪಡೆದಿರಬೇಕು. ಅವರು ಮಾತ್ರ ದೇವರಾಗುತ್ತಾರೆ. ಆ ಕಾರ್ಯವನ್ನು ಕೇವಲ ಪುನೀತ ರಾಜ್‌ಕುಮಾರ ಅಲ್ಲದೇ ಮತ್ಯಾರಿಂದಲೂ ಮಾಡಲಾಗಿಲ್ಲ. ವಿಚಿತ್ರ ಎಂದರೆ ಅಭಿಮಾನಿಗಳ ಹಾರೈಕೆಯಲ್ಲಿಯೇ ಬದುಕಿಗೆ ಹೊಸ ಅರ್ಥವನ್ನು ಕಂಡುಕೊಂಡ ಚಿತ್ರ ಜಗತ್ತಿನ ಮರೆಯಲಾಗದ ಮಾಣಿಕ್ಯ ಎನ್ನಿಸಿಕೊಂಡ ರಾಜಣ್ಣನಿಗೂ ಕೂಡ ನೀಡಲಾಗದ ಸ್ಥಾನವನ್ನು ಅಭಿಮಾನಿ ದೇವರುಗಳು ಅವರ ಮಗನಿಗೆ ನೀಡುತ್ತಾರೆ. ಬಣ್ಣದ ಬದುಕಿನಲ್ಲಿ ಚಿನ್ನದ ದಿನಗಳನ್ನು ಕಂಡಂತ ನಟನನ್ನು ನಮ್ಮ ಪಾಲಿನ ದೇವರು ಎಂದು ಅಭಿಮಾನಿಸುತ್ತಾರೆ. ಒಬ್ಬ ನಟನನ್ನು ಅಭಿಮಾನಿಗಳು ಪ್ರೀತಿಸುವುದು ಸಾಮಾನ್ಯ. ಆದರೆ ಈ ನಟನನ್ನು ಪೂಜಿಸುತ್ತಾರೆ ಎಂದರೆ ಅವರ ವ್ಯಕ್ತಿತ್ವವಾದರೂ ಹೇಗಿರಬಾರದು? ಬದುಕಾದರೂ ಹೇಗಿರಬಾರದು? ಒಮ್ಮೆ ಆಲೋಚಿಸಿ. ಹೀಗೆ ಕಲಾವಿದನಾಗಿ ಬದುಕು ಕಟ್ಟಿಕೊಂಡು ಬದುಕಿಗೆ ವಿದಾಯ ಹೇಳಿದ ಮೇಲೆ ಅಭಿಮಾನಿಗಳ ಪಾಲಿಗೆ ದೇವರಾದ ಪುನೀತ ರಾಜ್‌ಕುಮಾರ ಮಾಡಿದ್ದಾದರೂ ಏನು? ಇವರೆಲ್ಲ ಅವರನ್ನೇಕೆ ಅಷ್ಟು ಪ್ರೀತಿಸುತ್ತಾರೆ. ಇದಕ್ಕೆ ಉತ್ತರ ಹುಡುಕಿದಷ್ಟು ನಿಗೂಢ, ಕೆದಕಿದಷ್ಟು ಆಳ. ಒಟ್ಟಿನಲ್ಲಿ ಈ ಎಲ್ಲ ಘಟನೆಗಳ ಜೊತೆಗೆ ತಳಕು ಹಾಕಿಕೊಳ್ಳುವ ಪುನಿತ ಬದುಕು ಗೆದ್ದವನ ಪಾಲಿಗೆ ದಾರಿ ದೀಪ. ಸೋತವನ ಪಾಲಿಗೆ ಸಂಜೀವಿನಿ.
ಪುನೀತ ರಾಜ್‌ಕುಮಾರ ವಿಷಯಕ್ಕೆ ಬರುವುದಕ್ಕೂ ಮೊದಲು ನಾನೊಂದು ಘಟನೆಯನ್ನು ಉಲ್ಲೇಖಿಸುತ್ತೇನೆ. ಆ ಘಟನೆಯನ್ನು ಅರ್ಥ ಮಾಡಿಕೊಂಡರೆ ಪುನೀತನು ದೇವರಾಗಲು ದಾರಿಯಾಗಿದ್ದೇನು ಎನ್ನುವುದು ನಮಗೆ ಅರ್ಥವಾದರೂ ಆಗಬಹುದು. ತಿದ್ದಲಾರದ ಹೃದಯಗಳ್ನು ತಿದ್ದಿ, ಏಷ್ಯಾದ ಜ್ಞಾನದ ಬೆಳಕೆಂದು ಕರೆಸಿಕೊಂಡು, ಶಾಂತಿ ಧರ್ಮ ಸ್ಥಾಪನೆ ಮಾಡಿದ ಗೌತಮ ಬುದ್ಧ ಕ್ರೂರಿ ಅಂಗೂಲಿ ಮಾಲಾನ ಎದುರಿಗೆ ಹೋಗಿ ನಿಂತಾಗ ಅಂಗೂಲಿ ಮಾಲಾ ಒಂದು ಕ್ಷಣ ಇವರ ಮುಖವನ್ನು ನೋಡಿದ. ಅಷ್ಟರಲ್ಲಿ ಬುದ್ಧ ಹಸನ್ಮುಖಿಯಾಗಿದ್ದವನು ಹೃದಯ ಬಿಚ್ಚಿ ನಗಲಾರಂಭಿಸಿದ. ಬುದ್ಧನ ನಗುವಿನ ಚಾವಟಿ ಏಟನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಅಂಗೂಲಿ ಮಾಲಾ ಈ ರೀತಿ ನಗುತ್ತಿರುವುದಕ್ಕೆ ಕಾರಣವೇನು ಎಂದು ಕೇಳಿದ. ಆಗ ಬುದ್ಧ “ನಾನು ನಗುತ್ತಿಲ್ಲ ಬದಲಿಗೆ ನಿನ್ನ ಮನಸ್ಸನ್ನು ಪರಿವರ್ತಿಸುವುದಕ್ಕೆಂದು ನಾನು ಕೊನೆಯ ಹಾಗೂ ಅತೀ ಶಕ್ತಿಶಾಲಿಯಾದ ಅಸ್ತ್ರವನ್ನು ಪ್ರಯೋಗಿಸುತ್ತಿದ್ದೇನೆ” ಎಂದು ಹೇಳಿ ನಗುತ್ತ ನಿಂತ. ಅಲ್ಲಿಯವರೆಗೂ ತನ್ನೆದುರು ಬಂದವರು ಸಾವಿನ ಭಯದಿಂದ ನಡುಗುವುದನ್ನು ನೋಡಿದ್ದ ಅಂಗೂಲಿ ಮಾಲಾ ಇಂದು ಸಾವಿನ ಎದುರು ನಿಂತು ಸಮಾಧಾನದಿಂದ ನಗುವ ವ್ಯಕ್ತಿಯನ್ನು ಕಂಡಿದ್ದು ಅವನಲ್ಲಿ ಏನೋ ಮಿಂಚಿನ ಸಂಚಾರ ಉಂಟು ಮಾಡಿತು. ಮರುಕ್ಷಣವೇ ಕ್ರೌರ್ಯ ತುಂಬಿದ ಕಣ್ಣುಗಳಿಂದ ಅಶ್ರುಧಾರೆ ಹರಿಯಲಾರಂಭಿಸಿತು. ರಾಕ್ಷಸೀ ಮನಸ್ಸು ಚಿದ್ರಗೊಂಡು ಬದುಕಿನ ಅರ್ಥ ಉಂಟಾಯಿತು. ಈ ಘಟನೆಯ ನಂತರದಲ್ಲಿಯೇ ಅಂಗೂಲಿ ಮಾಲಾ ಬುದ್ಧನ ಪ್ರೀತಿಯ ಶಿಷ್ಯನಾಗಿದ್ದು. ಅದೇ ಕಾರಣಕ್ಕಾಗಿಯೇ ಭಾರತ ದೇಶದ ನ್ಯೂಕ್ಲಿಯರ್ ಬಾಂಬ್ ಯಾವುದು? ಎಂದು ಯಾರಾದರೂ ಕೇಳಿದರೆ ಅದಕ್ಕೆ ನಾನು ನೀಡುವ ಉತ್ತರ ಬುದ್ಧನ ನಗು. ಇದನ್ನು ಆಧರಿಸಿಯೇ ಭಾರತೀಯರು ಪರಮಾಣು ಬಾಂಬ್ ಪ್ರಯೋಗಕ್ಕೆ ಸ್ಮೈಲಿಂಗ್ ಬುದ್ಧ ಎಂದು ಹೇಸರಿಟ್ಟಿದ್ದು. ಒಟ್ಟಿನಲ್ಲಿ ಎಲ್ಲವನ್ನು ಗೆಲ್ಲಬೇಕು ಎಂದು ಹೊರಟರೆ ನಮ್ಮ ಬಳಿ ಇರಬೇಕಾದ ಶಕ್ತಿಶಾಲಿಯಾದ ಅಸ್ತ್ರವೇ ನಗು ಎಂದತಾಯಿತು. ಇಷ್ಟು ಹೇಳಿದ ಮೇಲೆ ನಮಗೆ ಅರ್ಥವಾಗಿರಲೇಬೇಕಲ್ಲವೇ? ಪುನೀತ್ ಇಂದು ದೇವರೇಕಾದರು ಎಂದು. ಅದಕ್ಕೆ ಕಾರಣ ಕನ್ನಡಿಗರ ಮನವನ್ನು ಗೆಲ್ಲುವುದಕ್ಕೆ ಅವರು ಪ್ರಯೋಗಿಸಿದ ಅತೀ ಶಕ್ತಿಶಾಲಿಯಾದ ಅಸ್ತ್ರವೆಂದರೆ ಅವರ ನಗು. ಮಾತಿಗೂ ಮುನ್ನ ಬರುತ್ತಿದ್ದ ನಗು ಎಂಥವರನ್ನು ಕೂಡ ಆ ಕ್ಷಣದಲ್ಲಿ ಸೆರೆ ಹಿಡಿಯುತ್ತಿತ್ತು. ನಾನು ಸಾಕಷ್ಟು ಜನರನ್ನು ಕಂಡಿದ್ದೇನೆ. ಸಾಕಷ್ಟು ಚಿತ್ರನಟರನ್ನು ನೋಡಿದ್ದೇನೆ. ಪ್ರತಿಕ್ಷಣವನ್ನು ನಗುತ್ತ ಕಳೆಯುವವರನ್ನು ಕಂಡು ಖುಷಿಪಟ್ಟಿದ್ದೇನೆ. ಆದರೆ ಯಾರ ನಗು ಕೂಡ ಪುನೀತ ರಾಜ್‌ಕುಮಾರರ ನಗುವಿನಂತೆ ನನ್ನನ್ನು ಕಾಡಿಲ್ಲ. ನನ್ನ ಮನಸ್ಸನ್ನು ಕೆಣಕಿಲ್ಲ. ಅದಕ್ಕೆ ಬುದ್ಧನ ನಂತರದಲ್ಲಿ ಜನರ ಮನವನ್ನು ಗೆದ್ದ ಮಹಾನ್ ನಗು ಎಂದರೆ ಅದು ಪುನೀತ್ ರಾಜ್‌ಕುಮಾರದು ಇದ್ದಿರಬಹುದು.
ನಾನು ನನ್ನ ಪಾಡಿಗೆ ಲ್ಯಾಪ್‌ಟಾಪ್ ಮುಂದಿಟ್ಟುಕೊಂಡು ಕೀಲಿಮಣಿಗಳನ್ನು ಕುಟ್ಟುತ್ತ, ತಲೆಕೆರದುಕೊಳ್ಳುತ್ತ, ಏನೋ ಕೆಲಸದಲ್ಲಿ ತೊಡಗಿದ್ದೆ. ಮನೆಯಲ್ಲಿನ ಟಿವಿ ತನ್ನಪಾಡಿಗೆ ತಾನು ಬಡಿದುಕೊಳ್ಳುತ್ತಿತ್ತು. ಜಾಹಿರತುಗಳು ಬಂದು ಬಂದು ನನ್ನನ್ನು ಕೊಳ್ಳಿ, ನನ್ನನ್ನು ಖರಿದಿಸಿ ಎಂದು ಅಂಗಲಾಚುತ್ತಿದ್ದವು. ಇನ್ನು ಕೆಲವು ಜಾಹಿರಾತುಗಳು ಕಪ್ಪಾಗಿದ್ದವರನ್ನು ಬೆಳ್ಳಗೆ ಮಾಡುತ್ತೇವೆ. ದಪ್ಪವಾಗಿದ್ದವರನ್ನು ಥೆಳ್ಳಗೆ ಮಾಡುತ್ತೇವೆ ಎಂದು ಪುಂಕಾನುಪುಂಕವಾಗಿ ಸುಳ್ಳು ಹೇಳುತ್ತಿದ್ದವು. ಆದರೆ ಕೆಟ್ಟವರನ್ನು ಒಳ್ಳೆಯವರನ್ನಾಗಿ ಮಾಡುತ್ತೇವೆ. ದುಷ್ಟರನ್ನು ಶಿಷ್ಟರನ್ನಾಗಿ ಮಾಡುತ್ತೇವೆ ಎಂದು ಮಾತ್ರ ಯಾರೂ ಹೇಳಲೇ ಇಲ್ಲ. ಮುಂದಾದರೂ ಸಹ ಹೇಳುವುದೂ ಇಲ್ಲ. ಅದು ಇರಲಿ ಬಿಡಿ ಅದು ಇದ್ದದ್ದೆ. ಅಷ್ಟರಲ್ಲಿ ಸುದ್ದಿವಾಹಿನಿಯವರು ಪುನೀತ್ ರಾಜ್‌ಕುಮಾರ ಅವರ ‘ಗಂಧದ ಗುಡಿ’ ಚಿತ್ರವನ್ನು ವೀಕ್ಷಿಸಿ ಬಂದ ಜನಗಳನ್ನು ಮಾತನಾಡಿಸುತ್ತಿದ್ದರು. ಕೆಲವರು ಚಿತ್ರ ಚನ್ನಾಗಿದೆ ಎಂದಷ್ಟೇ ಹೇಳಿದರು. ಮತ್ತೆ ಕೆಲವರು ಮಾತನಾಡುವುದಕ್ಕೆ ಪದಗಳೇ ಬಾರದೆ ಸುಮ್ಮನೆ ಹೊರಟು ಹೋದರು. ಇನ್ನು ಕೆಲವರು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದರು. ಚಿತ್ರ ನೋಡಿದ ಮೇಲೆ ಮತ್ತೆ ಕಾಡಿದ ಅಪ್ಪುವನ್ನು ನೆನೆದು ಭಾವುಕರಾದರು. ಈ ವರ್ತನೆಗಳನ್ನು ನೋಡಿದ ನನ್ನ ಗೆಳೆಯ ಇದು ಸ್ವಲ್ಪ ಅತಿರೇಕವಾಯಿತು ಎನಿಸಲಿಲ್ಲವೇ? ಎಂದು ಪ್ರಶ್ನೆ ಹಾಕಿದ. ಆದರೆ ಆ ಕ್ಷಣಕ್ಕೆ ನಾನು ಪ್ರತಿಕ್ರಿಯಿಸುವುದಕ್ಕೆ ಮುಂದಾಗಲಿಲ್ಲ. ಕಾರಣ ಇದನ್ನು ಅತಿರೇಕ ಎಂದು ನಾನು ಒಪ್ಪಿಕೊಂಡರೆ ತಪ್ಪಾಗುತ್ತದೆ ಎಂದು ಒಳಮನಸ್ಸು ಹೇಳುತ್ತಿತ್ತು. ಕೇವಲ ಒಬ್ಬ ಚಿತ್ರ ನಟನನ್ನು ನೆನೆದು ಈ ರೀತಿಯಾಗಿ ಅತಿರೇಕದ ಭಾವುಕತನದಿಂದ ಅತ್ತಿದ್ದರೆ ನಾನು ಸಹಜವಾಗಿ ಒಪ್ಪಿಕೊಳ್ಳುತ್ತಿದ್ದೆನೇನೋ. ಆದರೆ ಆತ ಅಳುತ್ತಿದ್ದುದ್ದು ಬಣ್ಣದ ಲೋಕದ ಪುನೀತ ರಾಜ್‌ಕುಮಾರನನ್ನು ನೋಡಿ ಅಲ್ಲ. ಬದಲಿಗೆ ಬದುಕು ಹೇಗೆ ಮಾಡಬೇಕು ಎನ್ನುವುದನ್ನು ತಿಳಿಸಿಕೊಟ್ಟ ಪುನಿತ್ ರಾಜ್ ಕುಮಾರ್‌ಗಾಗಿ. ತನ್ನ ನಗುವಿನಿಂದ ಕೋಟ್ಯಾಂತರ ಜನರ ಮನಸ್ಸನ್ನು ಗೆದ್ದ ಪುನೀತ್ ರಾಜ್‌ಕುಮಾರನಿಗಾಗಿ. ಚಿಕ್ಕವಯಸ್ಸಿನಲ್ಲಿಯೇ ಲೋಕದ ಸಂತೆ ಮುಗಿಸಿಕೊಂಡು ಹೋದರೋ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗುಳಿದ ದೊಡ್ಮನೆ ಹುಡುಗನಿಗಾಗಿ. ಸ್ವಾರ್ಥದ ಆಚೆಗೆ ಒಂದು ಸಮಾಜವಿದೆ; ಅದು ನಮಗಾಗಿ ಬಹಳಷ್ಟು ಕೊಟ್ಟಿದೆ; ಅದಕ್ಕೆ ನಾವೂ ಕೂಡ ಒಂದಷ್ಟು ಕೊಡಬೇಕಾದದ್ದು ಇದೇ ಎನ್ನುವುದುನ್ನು ತೋರಿಸಿಕೊಟ್ಟ ಯುವರತ್ನನಿಗಾಗಿ. ಅದೇ ಕಾರಣಕ್ಕಾಗಿಯೇ ನಾನು ಉಲ್ಲೇಖಿಸಿದ್ದು. ಒಬ್ಬ ಸಾಮಾನ್ಯ ಮನುಷ್ಯ ಹೀರೋ ಆಗಬಹುದು. ಆದರೆ ಒಬ್ಬ ಹೀರೋ ದೇವರಾಗುವುದೆಂದರೆ ಸಾಮನ್ಯವೇ? ಎಂದು. ಆದರೆ ಇದನ್ನು ಪುನೀತ ರಾಜ್‌ಕುಮಾರ್ ಸತ್ಯವಾಗಿಸಿದ್ದಾರೆ.
ಏಕೆಂದರೆ ಒಬ್ಬ ಚಿತ್ರ ನಟ ನಮ್ಮನ್ನು ಅಗಲಿ ಹೋದರೆ ಕೆಲವೇ ದಿನಗಳಲ್ಲಿ ಮರೆತು ಹೋಗುತ್ತಾನೆ. ಅವರು ನಟಿಸಿದ ಹಳೆಯ ಚಿತ್ರಗಳನ್ನು ಕಂಡಾಗ ಜನ ಸುಮ್ಮನೆ ಚಿತ್ರವನ್ನು ನೋಡಿ ಖುಷಿ ಪಡುತ್ತಾರೆಯೇ ಹೊರತು ಅಗಲಿ ಹೋದ ನಟನನ್ನು ನೋಡಿ ಕಣ್ಣೀರು ಇಡುವುದಿಲ್ಲ. ಆದರೆ ಪುನೀತ್ ವಿಷಯದಲ್ಲಿ ಹಾಗಾಗಲಿಲ್ಲ. ಅವರು ಮಡಿದು ವರ್ಷ ಗತಿಸಿದರೂ ಕೂಡ ಅವರ ನೆನಪುಗಳು ನಮ್ಮನ್ನು ಮತ್ತಷ್ಟು ಕಾಡುತ್ತಿವೆಯೇ ಹೊರತು ಕಡಿಮೆಯಾಗುತ್ತಿಲ್ಲ. ಮನೆಯವರು ಕಣ್ಣೀರು ಹಾಕುವುದು ಸಾಮಾನ್ಯ. ಆದರೆ ಮನೆಯೇ ಇಲ್ಲದವರು ಸಹ ಅವರಿಗಾಗಿ ಕಣ್ಣೀರು ಹಾಕುತ್ತಾರೆ ಎಂದರೆ ಅದಕ್ಕೆ ಕಾರಣ ಅವರ ವ್ಯಕ್ತಿತ್ವ. ಸಭೆ ಸಮಾರಂಭ ಮೆರವಣಿಗೆಗಳಲ್ಲಿ ಇಂದು ಪುನೀತ್ ಪೋಟೋ ಕಡ್ಡಾಯವಾಗುತ್ತಿದೆ. ಅದರಲ್ಲೂ ಅವರ ಆಕ್ಷನ್ ಪೋಟೋಗಳನ್ನು ಯಾರೂ ತರುವುದಿಲ್ಲ. ಬದಲಿಗೆ ಹೃದಯ ತುಂಬಿ ನಗುತ್ತಿದ್ದ ಪೋಟೋ ಎತ್ತಿಕೊಂಡು ಬರುತ್ತಾರೆ. ಅದನ್ನು ಕಂಡ ಕನ್ನಡಿಗರು ಕಣ್ಣೀರಾಗುತ್ತಾರೆ. ಇನ್ನಷ್ಟು ದಿನ ನೀವು ನಮ್ಮ ಜೊತೆಗೆ ಬದುಕಿರಬೇಕಿತ್ತು ಎಂದು ಹೇಳಿಕೊಳ್ಳುತ್ತಾರೆ. ಆದರೆ ಶರಣರ ಗುಣ ಮರಣದಲ್ಲಿ ಕಾಣ ಎನ್ನುವ ಮಾತಿನಂತೆ ಪುನೀತ್ ರಾಜ್‌ಕುಮಾರ ಮರಣದ ನಂತರದಲ್ಲಿ ಅವರ ಮಹತ್ತರ ಕಾರ್ಯಗಳು ಬೆಳಕಿಗೆ ಬಂದವು. ಸುದ್ದಿಗಾಗಿ ಸದ್ದು ಮಾಡುವ ಜನಗಳ ಮಧ್ಯದಲ್ಲಿ ಸದ್ದಿಲ್ಲದೇ ಸಮಾಜ ಸೇವೆ ಮಾಡುತ್ತ ಎದ್ದು ಹೋದ ಈ ಪುಣ್ಯಾತ್ಮನನ್ನು ಕಂಡು ಕಣ್ಣೀರಾಗದ ಹೃದಯಗಳೇ ಇಲ್ಲವೇನೋ ಎನ್ನುವ ಮಟ್ಟಕ್ಕೆ ಇಂದು ಪುನೀತ್ ಕಾಡುತ್ತಿದ್ದಾರೆ. ಅದರಲ್ಲೂ ಗಂಧದಗುಡಿ ಚಿತ್ರ ಬಿಡುಗಡೆಯಾಗುತ್ತಿದ್ದಂತೆ ಇಷ್ಟು ದಿನ ಕಂಡ ಪುನೀತ್ ಚಿತ್ರಗಳು ಒಂದು ತೂಕವಾದರೆ ಗಂಧದಗುಡಿ ಚಿತ್ರವೇ ಒಂದು ತೂಕವಾಗಿದೆ ಎನ್ನುವುದು ಅಭಿಮಾನಿಗಳ ಮಾತಾಗಿದೆ. ಇಷ್ಟು ದಿನದ ಚಿತ್ರಗಳಲ್ಲಿ ಪವರ್‌ಸ್ಟಾರ್ ಪುನೀತರಾಜ್‌ಕುಮಾರರನ್ನು ನೋಡಿದ್ದೇವೆ. ಈ ಚಿತ್ರದಲ್ಲಿ ಸಾಮಾನ್ಯ ಪುನೀತ್ ಹೇಗಿದ್ದರು ಎನ್ನುವುದುನ್ನು ಕಾಣಬಹುದು ಎಂದು ಬಹಳಷ್ಟು ಅಭಿಮಾನಿಗಳು ಹೇಳಿಕೊಳ್ಳುತ್ತಿದ್ದಾರೆ. ವಿಚಿತ್ರ ಎಂದರೆ ಅಭಯಾರಣ್ಯ ಉಳಿಸು, ಪ್ರಾಣಿಗಳನ್ನು ಉಳಿಸು ಎಂದು ಹೇಳುತ್ತ ಕಾಡಿನ ಕುರಿತು, ಕನ್ನಡ ನಾಡಿನ ಕುರಿತು ಅರಿವು ಮೂಡಿಸುತ್ತ ಡಾಽಽರಾಜ್‌ಕುಮಾರ ಗಂಧದ ಗುಡಿ ಚಿತ್ರದಲ್ಲಿ ನಟಿಸಿದರು. ಅಪ್ಪನ ದಾರಿಯಲ್ಲಿಯೇ ಹೆಜ್ಜೆ ಹಾಕಿದ ಮಗ ಶಿವರಾಜ್‌ಕುಮಾರ್ ಗಂಧದಗುಡಿ ಭಾಗ ಎರಡರಲ್ಲಿ ಬಣ್ಣ ಹಚ್ಚಿದರು. ಅವರಿಬ್ಬರನ್ನು ಮೀರಿಸಿದ ಪುನೀತ್ ಇಂದು ಕನ್ನಡ ನಾಡು ಹೊಂದಿರುವ ಅಪಾರ ವನ್ಯ ಸಂಪತ್ತನ್ನು, ಖಗ ಮೃಗಗಳನ್ನು ಜಗತ್ತಿಗೆ ತೋರಿಸುವುದಕ್ಕಾಗಿ ಬಣ್ಣ ಹಚ್ಚಿದ್ದಾರೆ. ಅಪ್ಪ, ಅಣ್ಣ ನಟಿಸಿ ಸೈ ಎನಿಸಿಕೊಂಡ ಚಿತ್ರದ ಹೆಸರನ್ನೇ ಬಳಸಿಕೊಂಡು ಚಿತ್ರ ಮಾಡುವ ಮೂಲಕ ಅಭಿಮಾನಿಗಳಿಂದ ಜೈ ಎನಿಸಿಕೊಂಡಿದ್ದಾರೆ. ನಾನಿಲ್ಲಿ ಚಿತ್ರ ವಿಮರ್ಷೆ ಬರೆಯುತ್ತಿಲ್ಲ. ಅದರ ಕುರಿತು ಮುಂದಿನ ದಿನಗಳಲ್ಲಿ ನೋಡೋಣ. ಆದರೆ ನಾನಿಲ್ಲಿ ಹೇಳುವುದಕ್ಕೆ ಹೊರಟಿರುವುದು ಹೀರೋ ಆದ ಪುನಿತ್ ರಾಜ್‌ಕುಮಾರ ದೇವರು ಹೇಗಾದರು ಎನ್ನುವುದನ್ನು ಮಾತ್ರ.
ಕೆಲವೊಮ್ಮೆ ಅತಿಯಾದ ಅಭಿಮಾನದಿಂದ ಮಾಡುವ ಕಾರ್ಯಗಳು ನೋಡುಗರಿಗೆ ಅತಿರೇಕ ಎನಿಸುತ್ತದೆ. ಇಂಥಹ ಹಲವಾರು ಘಟನೆಗಳನ್ನು ನಾವು ಆಂಧ್ರ ಪ್ರದೇಶ, ತಮಿಳುನಾಡು, ಕೇರಳಗಳಲ್ಲಿ ನೋಡುತ್ತೇವೆ. ತಮ್ಮ ನೆಚ್ಚಿನ ನಟನ ಚಿತ್ರ ಬಿಡುಗಡೆಯಾದರೆ ಅತಿರೇಕದ ವರ್ತನೆ ಮಾಡುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಸಾಮಾನ್ಯವಾಗಿ ಅಂಥಹ ದೃಶ್ಯಗಳನ್ನು ನೋಡುವುದಕ್ಕೆ ಸಾಧ್ಯವಿಲ್ಲ. ಒಂದುವೇಳೆ ಆ ದೃಶ್ಯಗಳು ಕಂಡರೆ ಅಲ್ಲಿ ಅಂಧಾಭಿಮಾನ ಇರುವುದಿಲ್ಲ ಬದಲಿಗೆ ಅತೀಯಾದ ಪ್ರೀತಿ ಇರುತ್ತದೆ. ಅದನ್ನೇ ನಾವಿಂದು ಪುನೀತ್ ಅವರ ಅಭಿಮಾನಿಗಳ ವಿಷಯದಲ್ಲಿ ನೋಡುತ್ತಿದ್ದೇವೆ. ಪುನೀತ್ ರಾಜ್‌ಕುಮಾರ್ ನಟಿಸಿದ ಚಿತ್ರಗಳನ್ನು ಇಡೀ ಕುಟುಂಬದ ಸದಸ್ಯರು ಕುಳಿತುಕೊಂಡು ನೋಡುವಂತವುಗಳಾಗಿದ್ದವು. ಅದರಲ್ಲೂ ಕೆಲವು ಚಿತ್ರಗಳಂತೂ ನಮ್ಮ ತಪ್ಪುಗಳನ್ನು ನಮಗೆ ತೋರಿಸಿ ತಿದ್ದುಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುವಂತವುಗಳಾಗಿದ್ದವು. ಇದರಿಂದಾಗಿಯೇ ಪುನೀತ್ ರಾಜ್ ಕುಟುಂಬದ ಕುಡಿಯಾಗಿದ್ದರೂ ಕೂಡ ಚಿತ್ರ ವೀಕ್ಷಿಸಿದ ಮೇಲೆ ನಮ್ಮ ಮನೆಯ ಮಗನಾಗಿ, ನಮ್ಮ ಕುಟುಂಬದ ಸದಸ್ಯನಾಗಿ ಬಿಡುತ್ತಿದ್ದರು. ಅದರಲ್ಲೂ ‘ರಾಜಕುಮಾರ’ ಚಿತ್ರದಲ್ಲಿ “ಯೋಗವು ಒಮ್ಮೆ ಬರುವುದು ನಮಗೆ ಯೋಗ್ಯತೆ ಒಂದೇ ಉಳಿವುದು ಕೊನೆಗೆ” ಎಂದು ಹಾಡುತ್ತಾರೆ. ಅದು ನಮಗೆ ಹೇಳಿದ್ದೋ, ಇಲ್ಲ ತಮ್ಮ ಬದುಕು ಹೀಗೆ ಇರುತ್ತದೆ ಎಂದು ಜನತೆಗೆ ಮೊದಲೇ ಹೇಳಿದ್ದೋ ತಿಳಿಯುತ್ತಿಲ್ಲ. ಅವರಿಗೆ ಚಿತ್ರ ರಂಗದಲ್ಲಿ ಯೋಗವಿತ್ತು. ಹಾಗೆ ಇಂದು ಅವರಿಲ್ಲದೇ ಹೋದರೂ ಅವರ ಯೋಗ್ಯತೆ ಏನು ಎನ್ನುವುದನ್ನು ಜಗತ್ತೇ ಕೊಂಡಾಡುತ್ತಿದೆ ಅಂದ ಮೇಲೆ ಪುನೀತ್ ದೇವರಾಗಿದ್ದರಲ್ಲಿ ಅನುಮಾನವೇ ಇಲ್ಲ ಬಿಡಿ. ರಾಜ್‌ಘಾಟ್, ಕಿಸಾನ್ ಘಾಟ್, ಚೈತ್ಯಭೂಮಿ ಸೇರಿದಂತೆ ಹಲವು ಮಹಾತ್ಮರ ಸಮಾಧಿ ಸ್ಥಳಕ್ಕೆ ಜನರು ಭೇಟಿ ನೀಡಿ ಪುನೀತರಾಗುತ್ತಾರೆ. ಅದೇ ನಿಟ್ಟಿನಲ್ಲಿ ಇಂದು ಬೆಂಗಳೂರಿನಲ್ಲಿ ಪುನೀತರ ಸಮಾಧಿ ಸ್ಥಳಕ್ಕೆ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಕೈ ಮುಗಿದು ಕಣ್ಣೀರಿಡುತ್ತಾರೆ. ನಿನ್ನಂತೆ ನಾನು ಬದುಕುತ್ತೇನೆ ಎಂದು ಹೇಳಿ ಶಪತ ಮಾಡುತ್ತಾರೆ. ಭಕ್ತಿಯಿಂದ ದೇವರಿಗೆ ಹೂವು ಅರ್ಿಸುವ ಹಾಗೆ ಪುನೀತ್ ಸಮಾಧಿಗೆ ಹೂವು ಹಾಕುತ್ತಾರೆ. ಇದನ್ನು ಒಬ್ಬರು ಮಾಡುತ್ತಾರೆ ಎಂದು ಇನ್ನೊಬ್ಬರು ಮಾಡುವುದಿಲ್ಲ. ಬದಲಿಗೆ ಯಾರಿಗೆ ಪುನೀತ್ ಮೇಲೆ ಅಭಿಮಾನ, ಪ್ರೀತಿ ಗೌರವ ಇದೆಯೇ ಅವರು ಮಾಡುತ್ತಾರೆ. ಪುನೀತ್ ರಾಜ್‌ಕುಮಾರ ಹೇಳಿದಂತ ಯೋಗ್ಯತೆಯನ್ನು ಗಳಿಸಿಕೊಳ್ಳುವುದಕ್ಕೆ, ಗಳಿಸಿದ್ದನ್ನು ಉಳಿಸಿಕೊಳ್ಳುವುದಕ್ಕೆ ಸಿದ್ಧವಾಗುತ್ತಾರೆ. ಇದೇ ಅಲ್ಲವೇ ನಿಜವಾದ ಅಭಿಮಾನ. ಭಕ್ತಿಯಿಂದ ಕಾಲುಮುಟ್ಟಿ ನಮಸ್ಕರಿಸಿದ ಸ್ವಾಮೀಜಿಗಳು ಮಾಡಬಾರದ್ದನ್ನು ಮಾಡಿ ಜೈಲು ಸೇರುತ್ತಿದ್ದಾರೆ. ಸ್ವಯಂ ಘೋಷಿತ ದೇವ ಮಾನವರುಗಳು ಸ್ವಂತಃಕ್ಕೆ ಕೈಲಾಸದಂತ ದೇಶ ಕಟ್ಟಿಸಿಕೊಂಡಿದ್ದಾರೆ. ಆದರೆ ಸ್ವಂತಕ್ಕೆಂದು ಸ್ವಲ್ಪ ಸಮಾಜಕ್ಕಾಗಿ ಸರ್ವಸ್ವ ಎನ್ನುವ ಪುನೀತ್ ರಾಜ್‌ಕುಮಾರ್ ಅಂಥವರು ಅಭಿಮಾನಿಗಳ ಪಾಲಿನ ದೇವರಾಗಿದ್ದಾರೆ. ಇದನ್ನೇ ಹೇಳುವುದು ಎಷ್ಟು ದಿನ ಬದುಕಿದೆವು ಎನ್ನುವುದು ಮುಖ್ಯವಾಗುವುದಿಲ್ಲ. ಬದಲಿಗೆ ನಾವು ಹೇಗೆ ಬದುಕಿದೆವು ಎನ್ನುವುದು ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ ಪುನೀತ್ ರಾಜ್‌ಕುಮಾರ್ ಚಿಕ್ಕವಯಸ್ಸಿನಲ್ಲಿಯೇ ನಮ್ಮನ್ನು ಅಗಲಿದರು ಕೂಡ ಅವರ ನೆನಪುಗಳು ಹಾಗೂ ಅವರ ಬದುಕು ನಮಗೆ ಶಾಶ್ವತ ಆದರ್ಶವಾಗುತ್ತವೆ. ಇಂದು ಅಭಿಮಾನಿಗಳು ತೋರುವ ಪ್ರೀತಿ ಕೆಲವರಿಗೆ ಅತಿರೇಕವಾಗಿ ಕಂಡರು ಕೂಡ ಮುಂದೆ ಅದು ಅದ್ಭುತವಾದ ಇತಿಹಾಸಕ್ಕೆ ಸಾಕ್ಷಿಯಾಗುತ್ತದೆ. ಏಕೆಂದರೆ ಸ್ವಾತಂತ್ರ್ಯ ಹೋರಾಟದ ಸಾರಥ್ಯ ವಹಿಸಿದ್ದ ಬಾಪೂ ಸತ್ತಾಗ ಎಷ್ಟು ಜನ ಅತ್ತಿದ್ದರೂ ಎನ್ನುವುದನ್ನು ನಾವು ಕಣ್ಣಾರೆ ಕಂಡಿಲ್ಲ. ಅವರ ಅಂತಿಮ ಸಂಸ್ಕಾರದಲ್ಲಿ ಎಷ್ಟು ಜನ ಭಾಗವಹಿಸಿದ್ದರು ಎನ್ನುವುದು ನಾವು ನೋಡಿಲ್ಲ. ಆದರೆ ಇದಕ್ಕೆ ನಿದರ್ಶನ ನೀಡುವ ನಿಟ್ಟಿನಲ್ಲಿ ಪುನೀತ್‌ರಾಜ್‌ಕುಮಾರ ಬದುಕಾಗಿತ್ತು. ಹುಟ್ಟು ದರಿದ್ರವಾಗಿದ್ದರೂ ಕೂಡ ಸಾವು ಚರಿತ್ರೆಯಾಗಬೇಕು ಎಂದು ಬಾಬಾಸಾಹೇಬರು ಹೇಳಿದ ಮಾತಿಗೆ ಸಾಕ್ಷಿ ಎನ್ನುವಂತೆ ಸಾವಿನಲ್ಲಿಯೂ ಕೂಡ ಚರಿತ್ರೆ ನಿರ್ಮಿಸಿದ ಪುನೀತರಾಜ್‌ಕುಮಾರ್ ಇಂದಿಗೂ ಎಂದಿಗೂ ಎಂದೆಂದಿಗೂ ಅಮರವಾಗಿದ್ದಾರೆ. ಕಾರಣ ಅವರು ಕೇವಲ ಹೀರೋ ಆಗಲಿಲ್ಲ ಬದಲಿಗೆ ರೀಯಲ್ ಹೀರೋ ಆದರು. ಅವರು ಬಣ್ಣ ಹಚ್ಚಿದಾಗ ಮಾತ್ರ ಓದಾರ್ಯ ತೋರಲಿಲ್ಲ. ಬದಲಿಗೆ ಬಣ್ಣದ ಬದುಕಿನ ಆಚೆಗೆ ಭವ್ಯವಾಗಿ ಬಾಳಿದರು. ಚಿತ್ರರಂಗದಲ್ಲಿ ಮಾತ್ರ ಬೆಟ್ಟದ ಹೂವಾಗಲಿಲ್ಲ ಬದುಕಿನಲ್ಲಿಯೂ ಬೆಟ್ಟದ ಹೂವಾಗಿ ಬಾಳಿದರು. ಅಭಿಮಾನಿಗಳ ಹೃದಯದ ‘ಫೃಥ್ವಿ’ಯಲ್ಲಿ ಮೆರೆದ ‘ವೀರ ಕನ್ನಡಿಗ’ ಇಂದು ‘ರಾಜಕುಮಾರನಾಗಿ’ ಎಲ್ಲರನ್ನು ರಂಜಿಸಿದ್ದಾನೆ. ಸರ್ವರ ಪ್ರೀತಿಯ ‘ಅಪ್ಪು’ ಇಂದು ಅಭಿಮಾನಿಗಳ ಭಾವೆಗಳ ಕುದುರೆಗೆ ‘ಜಾಕಿ’ಯಾಗಿದ್ದಾನೆ. ‘ನಟಸಾರ್ವಭೌಮನ’ ಮಗನಾದ ‘ಮೌರ್ಯ’ ಯುವಕರ ಪಾಲಿಗೆ ‘ಯುವರತ್ನ’ನಾಗಿ ಗುರುತಿಸಿಕೊಂಡಿದ್ದಾನೆ. ಒಟ್ಟಿನಲ್ಲಿ ಹೇಳುವುದಾದರೆ ಡಾಽಽರಾಜ್‌ಕುಮಾರ ಅವರ ಮಗ ಪುನೀತ ರಾಜ್‌ಕುಮಾರ ಎಂದು ಹೇಳುವ ಕಾಲವಿತ್ತು. ಆದರೆ ಈವಾಗ ಕಾಲ ಬದಲಾಗಿದೆ. ಪುನೀತ್ ರಾಜ್‌ಕುಮಾರ ಅವರ ತಂದೆ ಡಾಽಽರಾಜ್‌ಕುಮಾರ್ ಎಂದು ಹೇಳುವ ಮಟ್ಟಕ್ಕೆ ಪುನೀತ ಬೆಳೆದ್ದಿದ್ದಾರೆ. ದೇಹದಿಂದ ಅವರು ಅಗಲಿದ್ದರು ದೇವರಾಗಿ ನಮ್ಮಲ್ಲಿ ಉಳಿದಿದ್ದಾರೆ. ಅದಕ್ಕೆ ಹೇಳಿದ್ದು ಈ ರೀತಿಯ ವ್ಯಕ್ತಿಗಳು ಹುಟ್ಟುವುದು ಅಪರೂಪ. ಅದಕ್ಕೆ ಪುನೀತರಾಜ್‌ಕುಮಾರ ಆಗಿದ್ದಾರೆ ಅಭಿಮಾನಿಗಳ ಪಾಲಿಗೆ ದೈವ ಸ್ವರೂಪ ಅಲ್ಲವೇ?
- * * * -