ತಾಳಿಕೋಟಿ 12: ಮನುಕುಲವನ್ನು ಧರ್ಮದ ದಾರಿಯಲ್ಲಿ ನಡೆಸುವಂತಹ ಪ್ರಜ್ಞಾವಂತಿಕೆಯನ್ನು ಹೊಂದಿದ ಜಂಗಮ ಸಮಾಜ ಕೇವಲ ಬೇಡುವ ಸಮಾಜವಾಗದೆ ಜಗಕ್ಕೆ ಕೊಡುಗೆಯನ್ನು ಕೊಡುವಂತಹ ಸಮಾಜವಾಗಿದೆ ಎಂದು ಮಾಜಿ ಶಾಸಕ, ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನ ಮಠ ಹೇಳಿದರು.
ಬುಧವಾರ ಪಟ್ಟಣದ ಜಂಗಮ ಸಮಾಜ ಬಾಂಧವರು ಎಪಿಎಂಸಿ ವರ್ತಕರ ಸಭಾ ಭವನದಲ್ಲಿ ಹಮ್ಮಿಕೊಂಡ ಜಗದ್ಗುರು ರೇಣುಕಾಚಾರ್ಯರ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೀರಶೈವ ಧರ್ಮ ಪ್ರಾಚೀನ ಧರ್ಮವಾಗಿದ್ದು ಶ್ರೇಷ್ಠ ಸಂಸ್ಕೃತಿ ಪರಂಪರೆ ಹಾಗೂ ಸಂಸ್ಕಾರಗಳನ್ನು ಹೊಂದಿರುವ ಧರ್ಮವಾಗಿದೆ ಈ ಶ್ರೇಷ್ಠ ಧರ್ಮದಲ್ಲಿ ಗುರುವಿನ ಸ್ಥಾನದಲ್ಲಿರುವ ನಾವು ಜಯಂತಿಯ ಈ ಸಂದರ್ಭದಲ್ಲಿ ನಮ್ಮ ಕುರಿತು ಆತ್ಮವತ್ಮಾವಲೋಕನ ಮಾಡಿಕೊಳ್ಳುವ ಅಗತ್ಯ ಇದೆ, ಗುರುವಿನ ಸ್ಥಾನದಲ್ಲಿದ್ದರೂ ನಾವು ಇತರ ಸಮುದಾಯಗಳಿಗಿಂತ ಆರ್ಥಿಕವಾಗಿ ಅತಿ ಹಿಂದುಳಿದ ಸಮಾಜವಾಗಿದ್ದೇವೆ ನಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಲು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಅಗತ್ಯವಿದೆ ಶಿಕ್ಷಣದಿಂದಲೇ ಸಮಾಜಗಳ ಸರ್ವಾಂಗೀಣ ಪ್ರಗತಿ ಸಾಧ್ಯ, ನಾವು ಜೋಳಿಗೆ ಹಿಡಿದು ನಮ್ಮ ಮಕ್ಕಳಿಗೂ ಜೋಳಿಗೆಯನ್ನೆ ಕೊಟ್ಟು ಹೋಗುವುದು ಬೇಡ, ಅವರ ಜೋಳಿಗೆಯಿಂದ ಇತರರಿಗೂ ಸಹಾಯ ಆಗುವಂತೆ ಮಾಡಿ ಹೋಗಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ ಎಂದರು.
ಕೊಡೆಕಲ್ ದುರದುಂಡೇಶ್ವರ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ ವೀರಶೈವ ಧರ್ಮ ಸೈದ್ಧಾಂತಿಕ ತಳಹದಿ ಮೇಲೆ ನಿಂತ ಧರ್ಮವಾಗಿದೆ. ಇಡೀ ಮನುಕುಲದ ಲೇಸನ್ನು ಬಯಸುವ ಧರ್ಮ ಇದಾಗಿದ್ದು, ಈ ಧರ್ಮದ ಮೂಲ ಪ್ರಕೃತಿಯಾಗಿದೆ. ಇಂತಹ ಶ್ರೇಷ್ಠ ಧರ್ಮದ ಅನುಯಾಯಿಗಳಾದ ನಾವು ಆರ್ಥಿಕವಾಗಿ ದುರ್ಬಲ ರಾಗಿದ್ದರೂ ಗುರುವಿನ ಸ್ಥಾನದಲ್ಲಿದ್ದು ಎಲ್ಲ ಸಮಾಜಗಳಿಂದ ಗೌರವಿಸಲ್ಪಡುವವರಾಗಿದ್ದೇವೆ, ಸಮಾಜಕ್ಕೆ ಮಾರ್ಗದರ್ಶನ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಆದ್ದರಿಂದ ನಾವು ಧರ್ಮ ಸಂಸ್ಕಾರಗಳನ್ನು ಬೆಳೆಸಿಕೊಂಡು ಬದುಕಲು ಪ್ರಯತ್ನಿಸಬೇಕಾಗಿದೆ ಎಂದರು.
ಪಡೇಕನೂರ ದಾಸೋಹ ಮಠದ ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ ಜಂಗಮ ಸಮಾಜ ಭಾಂದವರು ಆಚಾರವಂತರಾಬೇಕು ನೀತಿವಂತರಾಗಬೇಕು ಜಗದ್ಗುರು ರೇಣುಕಾಚಾರ್ಯರು ತೋರಿದ ಮಾರ್ಗದಲ್ಲಿ ನಡೆದು ಎಲ್ಲ ಸಮಾಜಗಳನ್ನು ಒಗ್ಗೂಡಿಸಿಕೊಂಡು ಹೋಗಲು ಪ್ರಯತ್ನಿಸಬೇಕು, ಸಮಾಜವನ್ನು ಸಂಘಟಿಸಲು ಪೂಜ್ಯ ರಾಮಲಿಂಗಯ್ಯ ಶ್ರೀಗಳು ಅವಿರಥ ಶ್ರಮವನ್ನು ವಹಿಸುತ್ತಿದ್ದಾರೆ ಅವರಿಗೆ ನಾವೆಲ್ಲರೂ ಬೆಂಬಲವಾಗಿ ನಿಲ್ಲಬೇಕಾಗಿದೆ ಎಂದರು.ಜ್ಯೋತಿಷ್ಯ ರತ್ನ ರಾಮಲಿಂಗಯ್ಯ ಮಹಾಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿ ಜಂಗಮ ಸಮಾಜಕ್ಕೆ ಸರ್ಕಾರದ ಸೌಲಭ್ಯಗಳ ಅಗತ್ಯವಿದ್ದು ಇವುಗಳನ್ನು ಪಡೆಯಲು ಸಮಾಜ ಭಾಂಧವರನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದೇವೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ ಎಂದರು. ವೇದಿಕೆ ಕಾರ್ಯಕ್ರಮ ಮುನ್ನ ಕಾಸ್ಕಾತೇಶ್ವರ ಮಠದಿಂದ ಆರಂಭಗೊಂಡ ಜಗದ್ಗುರು ರೇಣುಕಾಚಾರ್ಯರ ಮೂರ್ತಿಯ ಮೆರವಣಿಗೆ ಸಕಲ ವಾಧ್ಯ ಮೇಳಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುಖ್ಯ ವೇದಿಕೆಗೆ ತಲುಪಿತು. ಕಾರ್ಯಕ್ರಮವನ್ನು ಉಪಸ್ಥಿತ ಎಲ್ಲ ಶ್ರೀಗಳು ಅತಿಥಿಗಳು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸಾಸನೂರ- ತುಂಬಗಿ ಹಿರೇಮಠದ ಪೂಜ್ಯ ಶ್ರೀ ಮಹಾಂತಲಿಂಗ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು. ನೇತೃತ್ವವನ್ನು ನಾವದಗಿಯ ಪೂಜ್ಯ ಶ್ರೀ ಷ.ಬ್ರ. 108 ಶ್ರೀ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು, ದೇವರ ಹಿಪ್ಪರಗಿಯ ಪೂಜ್ಯಶ್ರೀ ಜಡಿ ಸಿದ್ದೇಶ್ವರ ಶಿವಾಚಾರ್ಯರು, ಕಲಕೇರಿ ಸಿದ್ದರಾಮ ಶಿವಾಚಾರ್ಯರು, ಪರದೇಶಿ ಮಠದ ಶಿವಯೋಗಿ ಶಿವಾಚಾರ್ಯರು, ವಡವಡಗಿಯ ಪೂಜ್ಯ ಶ್ರೀ ವೀರಸಿದ್ಧ ಮಹಾಸ್ವಾಮಿಗಳು ವಹಿಸಿದ್ದರು.
ಈ ವೇಳೆ ಕಾಶಿಬಾಯಿ ಅಮ್ಮನವರು, ಸರೋಜಿನಿ ಅಮ್ಮನವರು, ಶರಣಯ್ಯ ಹಿರೇಮಠ, ಶಿವಶಂಕರ ಹಿರೇಮಠ, ಮುತ್ತುರಾಜ್ ಜಾಗೀರದಾರ,ದಯಾನಂದ ಮೂಗಡ್ಲಿಮಠ, ಶ್ರೀಗುರು ಹಿರೇಮಠ, ಡಾ.ಸೋಮಶೇಖರಯ್ಯ ಹಿರೇಮಠ, ಈರಯ್ಯ ಹಿರೇಮಠ, ಮಲ್ಲಿಕಾರ್ಜುನ ಕೊಡಗಾನೂರ, ವಿಜಯಕುಮಾರ ಮಠ,ಆರ್.ಎಸ್.ಹಿರೇಮಠ, ಓಂ ಪ್ರಕಾಶ ಡೊಣೂರಮಠ, ಗಜದಂಡಯ್ಯ ಹಿರೇಮಠ, ಕಾಶಿನಾಥ ಹಿರೇಮಠ, ಶಿವಬಸಯ್ಯ ಹಿರೇಮಠ, ಜ್ಯೋತಿ ಹಿರೇಮಠ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತ ರಾಮಗಿರಿಮಠ ಹಾಗೂ ಬೇಡ ಜಂಗಮ ಸಮಾಜದ ಸರ್ವ ಬಾಂಧವರು ಇದ್ದರು. ಅಜಯ್ ಡೋಣೂರಮಠ ಪ್ರಾರ್ಥಿಸಿದರು. ಶಿವಶಂಕರ್ ಹಿರೇಮಠ ಸ್ವಾಗತಿಸಿದರು.ಆರಿ್ಬ. ಧಮ್ಮೂರಮಠ ದಂಪತಿಗಳು ಹಾಗೂ ಶಿಕ್ಷಕ ಆರ್.ಎಫ್.ಹಿರೇಮಠ ನಿರೂಪಿಸಿ ವಂದಿಸಿದರು.