ಬೆಂಗಳೂರು, ಜ 27: ಶ್ರೀರಾಮನ ಆದರ್ಶಗಳನ್ನು ಪ್ರಸ್ತುತ ಪಡಿಸಲಿರುವ ಶ್ರೀರಾಮಾಯಣ ಕುರಿತ ನೃತ್ಯರೂಪಕ ಕಾರ್ಯಕ್ರಮವನ್ನು ಫೆ.3, 4 ಹಾಗೂ 5 ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಗೀತ ಸಂಭ್ರಮ ಟ್ರಸ್ಟ್ ವತಿಯಿಂದ 3 ದಿನಗಳ ಕಾಲ ನಡೆಯಲಿರುವ ಸಂಗೀತ ಸಂಭ್ರಮದಲ್ಲಿ ಪವಿತ್ರ ಗ್ರಂಥ ರಾಮಾಯಣಕ್ಕೆ ಸಂಬಂಧಿಸಿದಂತೆ ವಿವಿಧ ಕಲಾ ಪ್ರಕಾರಗಳ ಕಲಾ ಉತ್ಸವ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೆರವೇರಿಸಲಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಎಲ್.ಸಂತೋಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಫೆ.3 ರಂದು ಬೆಳಿಗ್ಗೆ ಶ್ರೀರಾಮಾಯಣ ನಡಿಗೆ ಮತ್ತು ಗಿಡ ನೆಡುವ ಕಾರ್ಯಕ್ರಮದಲ್ಲಿ ನಗರದ 24 ಶಾಲೆಗಳ 2 ಸಾವಿರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಳ್ಳಲಿದ್ದು, ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಯದುಗಿರಿ ಯತಿರಾಜ ನಾರಾಯಣ ಚಿಯರ್ ಸ್ವಾಮೀಜಿ ಅವರಿಂದ ಹಿರಿಯ ಮಹೋನ್ನತ ಕಲಾವಿದರಿಗೆ, ವಿದ್ವಾಂಸರಿಗೆ ಸಂಭ್ರಮ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ದೇಶಕ ನಾಗಾಭರಣ ಆಗಮಿಸಲಿದ್ದು, ಸಂಜೆ 7 ಗಂಟೆಗೆ ರಾಮಾಯಣದ ಪ್ರಾಮುಖ್ಯತೆ ಕುರಿತು ಶತಾವದಾನಿ ಆರ್.ಗಣೇಶ ರಾಮಾಯಣ ಪ್ರಾಮುಖ್ಯತೆಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಫೆ. 4 ರಂದು ನಾಗರತ್ನಮ್ಮನವರ ಜೀವನ ಕೃತ್ಯಯನ್ನಾಧರಿಸಿದ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಫೆಬ್ರುವರಿ 5 ರಂದು ಶ್ರೀರಾಮಯಣ, ರಾಮಾಯಣ ಗ್ರಂಥ ಕುರಿತು ನೃತ್ಯರೂಪಕ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿನ ಅಧ್ಯಕ್ಷೆ ಡಾ.ಪಿ.ರಮಾ, ಡಾ.ವೀಣಾಮೂರ್ತಿ ವಿಜಯ ಉಪಸ್ಥಿತರಿದ್ದರು.