ಕೃಷಿ ಅಭಿವೃದ್ಧಿಗೆ 50 ಸಾವಿರ ಸಹಾಯ ಧನ ವಿತರಣೆ: ಶಾಸಕ ಲಕ್ಷ್ಮಣ ಸವದಿ

50 thousand rupees assistance distributed for agricultural development: MLA Lakshman Savadi

ಕೃಷಿ ಅಭಿವೃದ್ಧಿಗೆ 50 ಸಾವಿರ ಸಹಾಯ ಧನ ವಿತರಣೆ: ಶಾಸಕ ಲಕ್ಷ್ಮಣ ಸವದಿ  

ಅಥಣಿ 08: ವಿಶ್ವ ಬ್ಯಾಂಕ ನೆರವಿನ ರಿವಾರ್ಡ ಯೋಜನೆಯ ಜೀವನೋಪಾಯ ಘಟಕದಡಿ ಅಥಣಿ ಕೃಷಿ ಇಲಾಖೆ ಮೂಲಕ 70 ಸ್ವ ಸಹಾಯ ಸಂಘಗಳಿಗೆ ವಿತರಿಸಿದ 50 ಸಾವಿರ ಸುತ್ತು ನಿಧಿಯ ಮೊತ್ತವನ್ನು ಕೃಷಿ ಅಭಿವೃದ್ಧಿಗೆ ಅದರಲ್ಲೂ ಸಾವಯವ ಕೃಷಿಗೆ ಬಳಸಿಕೊಳ್ಳಿ ಎಂದು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಹೇಳಿದರು.  

ಅವರು ಕೃಷಿ ಇಲಾಖೆ ಆವರಣದಲ್ಲಿ ತೆಲಸಂಗ ಮತ್ತು ಅರಟಾಳ ಗ್ರಾಮ ಪಂಚಾಯತ ವ್ಯಾಪ್ತಿಯ 70 ಸ್ವ ಸಹಾಯ ಸಂಘಗಳಿಗೆ 50 ಸಾವಿರ ಸುತ್ತು ನಿಧಿ ಮೊತ್ತ ವಿತರಿಸಿ ಮಾತನಾಡುತ್ತಿದ್ದರು.  

       ಮಹಿಳಾ ಸ್ವ ಸಹಾಯ ಸಂಘಗಳು ನಿಯಮಿತವಾಗಿ ಮತ್ತು ನಿಗದಿತ ಅವಧಿಯಲ್ಲಿಯೇ ಪಡೆದ ಸಾಲವನ್ನು ತೀರಿಸುತ್ತವೆ ಹೀಗಾಗಿಯೇ ವಿಶ್ವ ಬ್ಯಾಂಕ್, ಡಿಸಿಸಿ ಬ್ಯಾಂಕ ಸೇರಿದಂತೆ ಎಲ್ಲ ಬ್ಯಾಂಕುಗಳು ಮಹಿಳಾ ಸ್ವ ಸಹಾಯ ಸಂಘಗಳಿಗೆ ಯಾವುದೇ ಗ್ಯಾರಂಟಿ ಪಡೆಯದೇ ಸಾಲ ನೀಡುತ್ತವೆ ಎಂದ ಅವರು ನಾನು ಕೃಷಿ ಸಚಿವನಾಗಿದ್ದ ಸಂದರ್ಭದಲ್ಲಿ ಈ ಎರಡೂ ಗ್ರಾಮ ಪಂಚಾಯತಿಗಳ ಸ್ವ ಸಹಾಯ ಸಂಘಗಳನ್ನು ಈ ಯೋಜನೆಗೆ ಸೇರೆ​‍್ಡಗೊಳಿಸಿದ್ದೆ ಇದರ ಪರಿಣಾಮ ಇಂದು ಪ್ರತಿ ಸ್ವ ಸಹಾಯ ಸಂಘಗಳಿಗೆ ಒಟ್ಟು 8 ಕೋಟಿಯಷ್ಟು ಸಹಾಯ ಧನ ಮಂಜೂರಾಗಿದ್ದು, ಹಂತ ಹಂತವಾಗಿ ಮಹಿಳಾ ಸ್ವ ಸಹಾಯ ಸಂಘಗಳಿಗೆ ವಿತರಿಸಲಾಗುತ್ತದೆ ಎಂದರು.  

      ಮಹಿಳಾ ಸ್ವ ಸಹಾಯ ಸಂಘಗಳಿಗೆ ವಿತರಿಸಿರುವ ಸುತ್ತು ನಿಧಿ ಅಥವಾ ಸಹಾಯ ಧನವನ್ನು ಕೃಷಿ ಅಭಿವೃದ್ಧಿಗಾಗಿ, ಭೂಮಿ ಫಲವತ್ತತೆ ಹೆಚ್ಚಿಸಲು, ಒಡ್ಡು ನಿರ್ಮಾಣ, ನರ್ಸರಿ, ಹೈನುಗಾರಿಕೆ ಸೇರಿದಂತೆ ಕೃಷಿಗೆ ಅನಕೂಲವಾಗುವ ಕಾರ್ಯಗಳಿಗೆ ಬಳಸಿಕೊಳ್ಳಿ ಎಂದು ಕವಿ ಮಾತು ಹೇಳಿದ ಅವರು ಈ ಸಹಾಯ ಧನ ಬಳಸಿಕೊಳ್ಳುವ ಮೂಲಕ ಇಡೀ ರಾಜ್ಯದಲ್ಲಿಯೇ ಎಲ್ಲ 70 ಸ್ವ ಸಹಾಯ ಸಂಘಗಳು ಮಾದರಿ ಸಂಘಗಳಾಗಬೇಕು ಎಂದು ಕರೆ ನೀಡಿದರು.  

          ಕೃಷಿ ಅಭಿವೃದ್ಧಿಯ ಜೊತೆಗೆ ಸ್ವ ಸಹಾಯ ಸಂಘದ ಸದಸ್ಯೆಯರು ಸಾವಯವ ಕೃಷಿಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಪ್ರತಿಯೊಂದು ಕನಿಷ್ಢ ಎರಡು ಎಕರೆ ಭೂಮಿಯಲ್ಲಿ ಜವಾರಿ ತಳಿಯ ಕಾಯಿ ಪಲ್ಲೆಯನ್ನು ಸಾವಯವ ವಿಧಾನದಲ್ಲಿ ಬೆಳೆಸಿ ಮಾರಾಟ ಸಂಘಗಳ ಮೂಲಕ ಯೋಗ್ಯ ದರದಲ್ಲಿ ಮಾರಾಟ ಮಾಡಿದಲ್ಲಿ ಸಂಘಗಳು ಹೆಚ್ಚಿನ ಲಾಭ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ದಿನದಿಂದ ದಿನಕ್ಕೆ ಹೆಮ್ಮಾರಿಯಂತೆ ಬೆಳೆಯುತ್ತಿರುವ ಮಾರಕ ಕ್ಯಾನ್ಸರ ರೋಗವನ್ನು ಮಹಿಳಾ ಸ್ವ ಸಹಾಯ ಸಂಘದವರು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದ ಅವರು ಇತ್ತೀಚಿಗೆ ಹಾನಿಕಾರಕ ರಸಾನ ಸಿಂಪಡಿಸಿದ ಆಹಾರ ಧಾನ್ಯಗಳನ್ನು, ಕಾಯಿ, ಪಲ್ಲೆಗಳ ಉಪಯೋಗ ಆಗುತ್ತಿರುವ ಪರಿಣಾಮ ಕ್ಯಾನ್ಸರ್ ಅತೀ ವೇಗವಾಗಿ ಬೆಳೆಯುತ್ತಿದ್ದು, ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಸಾವಯವಕ್ಕೆ ಆದ್ಯತೆ ಕೊಡುವ ಮೂಲಕ ಆರೋಗ್ಯವಂತ, ಸಧೃಢ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಬೇಕು ಎಂದರು.  

       ತೆಲಸಂಗ ಗ್ರಾಮ ಪಂಚಾಯತ ಅಧ್ಯಕ್ಷೆ ಭಾರತಿ ಲೋಖಂಡೆ, ಅರಟಾಳ ಗ್ರಾಮ ಪಂಚಾಯತ ಅಧ್ಯಕ್ಷೆ  ಶಾಂತಾಬಾಯಿ ಹಟ್ಟಿ,  ಧುರೀಣರಾದ ಶಿವಪ್ಪ ಹಟ್ಟಿ, ಶ್ರೀಶೈಲ ನಾಯಿಕ, ರಾವಸಾಬ ಹೊನಗೌಡ, ಜಡೆಪ್ಪ ಕುಂಬಾರ, ರಾಮನಗೌಡ ಪಾಟೀಲ, ಕೃಷಿ ಅಧಿಕಾರಿ ನಾಗಣ್ಣಾ ಬಿರಾದಾರ, ಸ್ವ ಸಹಾಯ ಸಂಘಗಳ ಸಂಯೋಜಕ ರಾಮಚಂದ್ರ ನಾಯಿಕ ಸೇರಿದಂತೆ 70 ಸ್ವ ಸಹಾಯ ಸಂಘಗಳು ಸದಸ್ಯೆಯರು, ಕೃಷಿ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.