ಯುವಕರು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವಂತವರಾಗಿ: ನ್ಯಾ. ಉಂಡೋಡಿ
ಜಮಖಂಡಿ 03: ಸ್ವಾಮಿ ವಿವೇಕಾನಂದರು ಯುವಕರ ಮೇಲೆ ಇಟ್ಟಿದ್ದ ವಿಶ್ವಾಸ ಮತ್ತು ನಂಬಿಕೆಯನ್ನು ಹುಸಿಗೊಳಿಸಬಾರದು. ಅದಕ್ಕಾಗಿ ಯುವಕರು ದೇಹಬಲ, ಮನೋಬಲ ಹಾಗೂ ಆತ್ಮಬಲ ಬೆಳೆಸಿಕೊಂಡು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವಂತವರಾಗಬೇಕು ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶೆ ಕವಿತಾ ಎಸ್. ಉಂಡೋಡಿ ಹೇಳಿದರು. ನಗರದಲ್ಲಿ ನಡೆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಆಶ್ರಯದಲ್ಲಿ ಸಾಯಿ ನಿಕೇತನ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಸುಸ್ಥಿರ ಭವಿಷ್ಯಕ್ಕಾಗಿ ಯುವಕರು. ಸ್ಥಿತಿತಾಪಕತ್ವ ಮತ್ತು ಜವಾಬ್ದಾರಿಯಿಂದ ದೇಶವನ್ನು ರೂಪಿಸುವುದು ಎಂಬುದು ರಾಷ್ಟ್ರೀಯ ಯುವ ದಿನಾಚರಣೆಯ ಈ ವರ್ಷದ ಘೋಷವಾಕ್ಯವಾಗಿದೆ ಎಂದರು. ವಕೀಲ ರಾಜೇಂದ್ರ ಕರೋಶಿ ಮುಖ್ಯ ಅತಿಥಿಯಾಗಿ ಮಾತನಾಡಿ, ಅಮೆರಿಕೆಯ ಷಿಕಾಗೊದಲ್ಲಿ ನಡೆದಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣ ಜಗತ್ತಿನಾದ್ಯಂತ ಸಂಚಲನ ಮೂಡಿಸಿತ್ತು. ಸ್ವಾಮಿ ವಿವೇಕಾನಂದರು ಶ್ರೇಷ್ಠ ಸಂನ್ಯಾಸಿ ಹಾಗೂ ಪುರುಷ ಸಿಂಹವಾಗಿದ್ದರು ಎಂದರು. ಬಸವಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಮುಖ್ಯ ಅತಿಥಿಯಾಗಿ ಮಾತನಾಡಿ, ಸಾಮಾಜಿಕ, ರಾಜಕೀಯ ಹಾಗೂ ಆಧ್ಯಾತ್ಮಿಕ ಬದಲಾವಣೆಗಳನ್ನು ತರಬಲ್ಲ ಸಾಮರ್ಥ್ಯ ಯುವಕರಲ್ಲಿದೆ. ಅಂತಹ ಯುವಕರ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸುವುದು ಹಾಗೂ ಯುವಕರಲ್ಲಿ ಸ್ಪೂರ್ತಿ, ಪ್ರೇರಣೆ ತುಂಬುವುದು ಈ ದಿನಾಚರಣೆಯ ಉದ್ದೇಶವಾಗಿದೆ ಎಂದರು. ಸಾಯಿ ನಿಕೇತನ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ವರ್ಷಿಣಿ ವರ್ಣೆಕರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಉಪನ್ಯಾಸಕಿ ಮೈತ್ರಾ ತಳವಾರ ನಿರೂಪಿಸಿ, ವಂದಿಸಿದರು.