ಜೀವನದಲ್ಲಿ ಶಿಸ್ತು, ಒತ್ತಡ ನಿವಾರಣೆಗೆ ಯೋಗ ಅವಶ್ಯ: ಜಿಲ್ಲಾಧಿಕಾರಿ ಹಿರೇಮಠ

ಗದಗ 21: ಜೀವನದಲ್ಲಿ ಶಿಸ್ತು ಹಾಗೂ ಒತ್ತಡಗಳ ನಿವಾರಣೆಗೆ ಯೋಗವು ತುಂಬಾ ಸಹಕಾರಿಯಾಗಿದೆ. ಯೋಗದಿಂದ ಸದಾ ಸರ್ವದಾ ಆರೋಗ್ಯ ಎಂಬ ಅದ್ಭುತ ಕೊಡುಗೆ ನೀಡಿದ ನಮ್ಮ ಸಂಸ್ಕೃತಿಯಿಂದಾಗಿ ಇಡೀ ವಿಶ್ವವೇ ನಿಬ್ಬೆರಗಾಗಿರುವುದು ಭಾರತೀಯರಾದ ನಮಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನುಡಿದರು.

ಗದಗ ನಗರದ ಭೀಷ್ಮ ಕೆರೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆಯುಷ್ ಇಲಾಖೆ, ಹಾಗೂ ಗದಗ ಜಿಲ್ಲಾ ಯೋಗ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿಂದು ಜರುಗಿದ ವಿಶ್ವ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಮನಸ್ಸು ಹಾಗೂ ದೇಹದ ಅನುಸಂದಾನವನ್ನು ಸಾಧಿಸಬಲ್ಲ ಯೋಗದ ಮಹತ್ವ ಅರಿತಿದ್ದ ಮಹರ್ಷಿ, ಸಾಧು ಸಂತರು ಇದನ್ನು ದಿನ ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಿದ್ದರು.ಸ್ಪರ್ಧಾತ್ಮಕ ಯುಗದ ಒತ್ತಡಗಳಲ್ಲಿ ಶಿಸ್ತು ಬದ್ಧ ಜೀವನ ನಡೆಸುವದು ಅತ್ಯಂತ ಕಷ್ಟಕರವಾಗಿದೆ. ವಿಧ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ನೌಕರರು ನಿಯಮಿತವಾಗಿ ಯೋಗಾಭ್ಯಾಸ ಮಾಡುವದರಿಂದ ಒತ್ತಡ ರಹಿತ ಜೀವನ ಸಾಗಿಸಬಹುದಾಗಿದೆ. ಇಡೀ ಪ್ರಪಂಚವೇ ಯೋಗಾಭ್ಯಾಸದ ಮಹತ್ವ ಅರಿತಿದ್ದು ಭಾರತೀಯರಾದ ಪ್ರತಿಯೊಬ್ಬರು ನಿತ್ಯದ ಜೀವನದಲ್ಲಿ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನುಡಿದರು.

ಶಿವಾನಂದ ಮಠದ ಕೈವಲ್ಯನಾಥ ಸ್ವಾಮೀಜಿ ಮಾತನಾಡಿ ಎಂಟು ನೂರು ವರ್ಷಗಳ ಭಾರತದ ಇತಿಹಾಸದಲ್ಲಿ ಜೀವನದಲ್ಲಿ ಯಾವೆಲ್ಲ ಅಂಶಗಳು ಬೇಕೆನ್ನುವುದನ್ನು ಕಂಡು ಹಿಡಿದಿದ್ದು ಭಾರತೀಯರು. ಅದರಲ್ಲೂ ಅತ್ಯಂತ ಮಹತ್ವದ್ದಾದ ಯಾವುದೇ ರೋಗ ರುಜಿನಗಳು ಬಾರದಂತೆ ಇರಲು ಪತಂಜಲಿ ಮುನಿಗಳು ಯೋಗವನ್ನು ಕಂಡುಹಿಡಿದರು. ಭಾರತೀಯರು ಅವಿಷ್ಕಾರ ಮಾಡಿದಂತಹ ಯೋಗವನ್ನು ಇಂದು ಇಡೀ ವಿಶ್ವವೇ ಮುಕ್ತ ಕಂಠದಿಂದ ಶ್ಲಾಘಿಸುತ್ತಿರುವದು ಹೆಮ್ಮೆಯ ವಿಷಯವಾಗಿದೆ. ವಿದ್ಯಾಥರ್ಿಗಳಿಗೆ ಯೋಗವು ಒಂದು ಶ್ರೇಷ್ಠ ಸಾಧನವಾಗಿದ್ದು ಇದನ್ನು ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಜೀವನವನ್ನು ಉತ್ತಮಗೊಳಿಸಲು ಕರೇ ನೀಡಿದ ಅವರು ಯೋಗವು ಕೇವಲ ಮುನಿಗಳಿಗೆ ಅಥವಾ ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ ಇದನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ವೈದ್ಯರಿಂದ ದೂರವಿರಲು ಕರೇ ನೀಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಗದಗ-ವಿಜಯಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮಿಜಿ ಆಶೀರ್ವಚನ ನೀಡಿ ಮನುಷ್ಯ ತನ್ನ ಜೀವನವನ್ನು ಯೋಗ ಜೀವನವನ್ನಾಗಿ ಬದಲಾಯಿಕೊಳ್ಳಬೇಕು. ಜೀವನ ನಿತ್ಯೋತ್ಸವವಾಗಬೇಕಾದರೆ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಬೇಕು. ಯೋಗಕ್ಕೆ ಭಾರತೀಯರಿಗಿಂತ ಪಾಶ್ಚಿಮಾತ್ಯ ರಾಷ್ಟ್ರದವರು ಹೆಚ್ಚಾಗಿ ಮಾರು ಹೋಗಿದ್ದು ಭಾರತೀಯರಾದ ನಾವು ಇದರ ಮಹತ್ವವನ್ನು ಅರಿಯಬೇಕಾಗಿದೆ ಎಂದರು. ನಮ್ಮ ಒಳಿತಿಗಾಗಿ ಜೀವನದ ನಿತ್ಯೋತ್ಸವಕ್ಕಾಗಿ ಪ್ರತಿಯೊಬ್ಬರು ಯೋಗಾಭ್ಯಾಸ ರೂಢಿಸಿಕೊಳ್ಳುವಂತೆ ಸ್ವಾಮೀಜಿ ನುಡಿದರು.

ಇದೇ ಸಂದರ್ಭದಲ್ಲಿ ಯೋಗಸಾಧನೆ ಮಾಡಿದ ಮಹನಿಯರಿಗೆ ಸನ್ಮಾನಿಸಲಾಯಿತು.

ಜಿ.ಪಂ. ಸದಸ್ಯ ಸಿದ್ದು ಪಾಟೀಲ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಎನ್.ಎಸ್.ಪ್ರಸನ್ನಕುಮಾರ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಉಪ ವಿಭಾಗಾಧಿಕಾರಿ ಪಿ.ಎಸ್.ಮಂಜುನಾಥ, ಜಿ.ಪಂ. ಉಪಾಧ್ಯಕ್ಷ ಪ್ರಾಣೇಶರಾವ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ವಿರೂಪಾಕ್ಷ ರೆಡ್ಡಿ ಮಾದಿನೂರ, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅಪಾರ ಯೋಗಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಶೋಕ ಮತ್ತಿಗಟ್ಟಿ, ಸಾಯಿಪ್ರಕಾಶ ಮಡಿವಾಳರ, ಲೋಹಿತ, ಸುಮಲತಾ ಜಾನುಪಂತ ಯೋಗ ಪ್ರಾತ್ಯಕ್ಷಿಕತೆ ನೀಡಿದರು. ಡಾವಣಗೆರೆ ಜಿಲ್ಲಾ ಆಯುಷ ವೈದ್ಯಾಧಿಕಾರಿ ಡಾ. ರತ್ನಾ ಯೋಗಾಸನಗಳನ್ನು ನಿರೂಪಿಸಿದರು. ಜಿಲ್ಲಾ ಆಯುಷ ಅಧಿಕಾರಿ ಸುಜಾತಾ ಪಾಟೀಲ ಸ್ವಾಗತಿಸಿ ವಂದಿಸಿದರು.