ಭರತ ಹುಣ್ಣಿಮೆ ಜಾತ್ರೆಗೆ ಯಲ್ಲಮ್ಮನಗುಡ್ಡ ಸಜ್ಜು ವರದಿ- ಮಲ್ಲನಗೌಡ ಪಾಟೀಲ
ಉಗರಗೋಳ: ಬುಧವಾರ 12 ರಂದು ಜರುಗಲಿರುವ ರಾಜ್ಯದ ಬೃಹತ್ ಜಾತ್ರೆಗಳಲ್ಲಿ ಒಂದಾಗಿರುವ ಭರತ ಹುಣ್ಣಿಮೆ ಜಾತ್ರೆಗೆ ಸಮೀಪದ ಯಲ್ಲಮ್ಮನಗುಡ್ಡ ಸಜ್ಜಾಗಿದೆ. ಈ ಜಾತ್ರೆಗೆ ಕರ್ನಾಟಕ, ಮಹಾರಾಷ್ಟ್ರ, ಗೋವಾ ಮೊದಲಾದ ರಾಜ್ಯಗಳಿಂದ 20 ಲಕ್ಷಕ್ಕೂ ಅಧಿಕ ಭಕ್ತರು ಬರುವ ನೀರೀಕ್ಷೆ ಇದ್ದು, ಅವರಿಗೆ ಬೆಳಗಾವಿ ಜಿಲ್ಲಾಡಳಿತ, ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಮತ್ತು ರೇಣುಕಾ ಯಲ್ಲಮ್ಮ ಕ್ಷೇತ್ರ ಅಭಿವೃದ್ಧಿ ಮಂಡಳಿಯಿಂದ ಅಗತ್ಯ ಮೂಲಸೌಕರ್ಯ ಒದಗಿಸಲು ಕ್ರಮ ವಹಿಸಲಾಗಿದೆ. ಮಂಗಳವಾರ ಬೆಳಿಗ್ಗೆಯಿಂದಲೇ ಸಹಸ್ರಾರು ಭಕ್ತರ ದಂಡು ಯಲ್ಲಮ್ಮನ ಸನ್ನಿಧಿಗೆ ಹರಿದುಬರುತ್ತಿದೆ. ಬುಧವಾರ ನಸುಕಿನ ವೇಳೆಗೆ ಇಡೀ ಗುಡ್ಡದ ಪರಿಸರ ಭಕ್ತ ಸಾಗರದಿಂದ ತುಂಬಿ ತುಳುಕಲಿದೆ. ಈ ಜಾತ್ರೆಗೆ ಚಕ್ಕಡಿಬಂಡಿಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಭಕ್ತರು ಅಲಂಕೃತ ಚಕ್ಕಡಿಗಳ ಮೂಲಕ ಬರುತ್ತಿರುವ ದೃಶ್ಯ ಕಣ್ಮನಸೆಳೆಯುತ್ತಿದೆ. ಗುಡ್ಡದಲ್ಲಿ ಕುಂಕುಮ-ಭಂಡಾರ, ತೆಂಗಿನಕಾಯಿ, ಕರ್ೂರ, ಬಾಳೆಹಣ್ಣು ಮತ್ತಿತರ ಪೂಜಾ ಸಾಮಗ್ರಿಗಳ ವ್ಯಾಪಾರ ಜೋರಾಗಿದೆ. 'ಈ ಹಿಂದೆ ಜಾತ್ರೆಗೆ ಜಿಲ್ಲಾಡಳಿತದಿಂದ ಕೆಲವು ಸೌಕರ್ಯ ಕಲ್ಪಿಸುತ್ತಿದ್ದೆವು. ಆದರೆ, ವಿಶೇಷ ಆಸಕ್ತಿ ವಹಿಸಿ ಹೆಚ್ಚಿನ ಸೌಕರ್ಯದ ವ್ಯವಸ್ಥೆ ಮಾಡಿದ್ದೇವೆ. ದೇವಿ ದರ್ಶನಕ್ಕಾಗಿ ಅಲ್ಲಲ್ಲಿ ಎಲ್ ಇಡಿ ಪರದೆಗಳನ್ನು ಅಳವಡಿಸುತ್ತಿದ್ದೇವೆ. ಇದರಿಂದ ಜನಸಂದಣಿ ಕಾರಣಕ್ಕೆ, ದೇವಸ್ಥಾನದ ಒಳಗೆ ಹೋಗಲಾಗದವರಿಗೂ ದೇವಿ ದರ್ಶನಕ್ಕೆ ಅನುಕೂಲವಾಗಲಿದೆ' ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಹೇಳಿದ್ದಾರೆ.ಗುಡ್ಡಕ್ಕೆ ಹೋಗುವ ಭಕ್ತರಿಗೆ ಅನುಕೂಲವಾಗಲೆಂದು ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಯಲ್ಲಮ್ಮನಗುಡ್ಡಕ್ಕೆ 24*7 ಮಾದರಿಯಲ್ಲಿ ನೇರವಾಗಿ ವಿಶೇಷ ಬಸ್ ವ್ಯವಸ್ಥೆ ಮಾಡಿದ್ದೇವೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ ಹುದ್ದಾರ ಹೇಳಿದ್ದಾರೆ. 'ಜಾತ್ರೆಗೆ ಬರುವವರಿಗೆ ಅನುಕೂಲವಾಗಲೆಂದು ಉಗರಗೋಳದಿಂದ ದೇವಸ್ಥಾನದವರೆಗೆ ಉಚಿತವಾಗಿ 6 ಮಿನಿ ಬಸ್‌ಗಳ ವ್ಯವಸ್ಥೆ ಮಾಡಿದ್ದೇವೆ. ಅಂಗವಿಕಲರು, ಹಿರಿಯ ನಾಗರಿಕರಿಗಾಗಿ ಚೈನ್ ಗೇಟ್ ನಿಂದ ದೇವಸ್ಥಾನದವರೆಗೆ ಬ್ಯಾಟರಿಚಾಲಿತ ವಾಹನಗಳ ವ್ಯವಸ್ಥೆ ಮಾಡಿದ್ದೇವೆ. ಜಾನುವಾರುಗಳಿಗೆ ಮೇವು ದಾಸೋಹ ಮಾಡಿದ್ದೇವೆ. ಭಕ್ತರಿಗೂ ಅಲ್ಲಲ್ಲಿ ದವಾಖಾನೆಗಳನ್ನು ಓಪನ್ ಮಾಡಿದ್ದೆವೆ. ಜಿಲ್ಲಾಡಳಿತ, ಶಾಸಕರ ಮಾರ್ಗದರ್ಶನದಲ್ಲಿ ಇಡೀ ಜಾತ್ರೆ ಯಶಸ್ಸಿಗೆ ಸಿದ್ಧತೆ ಮಾಡಿಕೊಂಡಿದ್ದೇವೆ' ಎದು ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ ತಿಳಿಸಿದರು.