ರಾಮದುರ್ಗ 27: ತಾಲೂಕಿನ ಓಬಳಾಪೂರ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ಬೇಟಿ ನೀಡಿದ ಶಾಸಕ ಮಹಾದೇವಪ್ಪ ಯಾದವಾಡ ಸಮಯಕ್ಕೆ ಸರಿಯಾಗಿ ಬಾರದ ಕೆಲ ಶಿಕ್ಷಕರ ಬೇಜವಾಬ್ದಾರಿ ನೀತಿಗೆ ಆಕ್ರೋಶ ವ್ಯಕ್ತಪಡಿಸಿದರು.
ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿವೆ. ಕಟ್ಟಡ ದುರಸ್ತಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆಂದು ಭರವಸೆ ನೀಡಿದ ಶಾಸಕರು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸಲು ಸರಕಾರ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿದೆ. ಯೋಜಿತ ಉದ್ದೇಶ ಇಡೇರಬೇಕಾದಲ್ಲಿ ಶಿಕ್ಷಕರು ಪ್ರಾಮಾಣಿಕವಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕು. ಆದರೆ ಓಬಳಾಪೂರ ಶಾಲೆಯಲ್ಲಿ ಶಿಕ್ಷಕರೇ ಸರಿಯಾದ ಸಮಯಕ್ಕೆ ಬರುವುದಿಲ್ಲವೆಂದು ಬಹುದಿನಗಳಿಂದ ಆರೋಪ ಕೇಳಿ ಬರುತ್ತಿದೆ. ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗಿ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಶ್ರಮಿಸಬೇಕೆಂದು ಸೂಚಿಸಿದರು.