ಮಹಿಳೆಯರು ಸಮಾಜದ ಕಣ್ಣು ಹೊರತು ಅವಳು ಎಂದಿಗೂ ಅಬಲೆಯಲ್ಲ; ಜ್ಯೋತಿ ಪಾಟೀಲ

Women are never helpless unless they are the eyes of society; Jyoti Patil

ಮಹಿಳೆಯರು ಸಮಾಜದ ಕಣ್ಣು ಹೊರತು ಅವಳು ಎಂದಿಗೂ ಅಬಲೆಯಲ್ಲ; ಜ್ಯೋತಿ ಪಾಟೀಲ 

ಧಾರವಾಡ, 08 : ಮಹಿಳೆ ಮಾನವ ಸಂತತಿಯ ತಾಯಿ. ಮಹಿಳೆಯರು ಸಮಾಜದ ಕಣ್ಣು ಹೊರತು ಅವಳು ಎಂದಿಗೂ ಅಬಲೆಯಲ್ಲ ಎಂದು ಹು-ಧಾ ಮಹಾನಗರ ಪಾಲಿಕೆ ಸದಸ್ಯೆ ಜ್ಯೋತಿ ಪಾಟೀಲ ಅಭಿಪ್ರಾಯಪಟ್ಟರು. 

ಅವರು ಕಲ್ಯಾಣನಗರದ ಸಿದ್ಧರಾಮೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲ್ಪಟ್ಟ ವಿಶ್ವಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಮಹಿಳೆ ಕೇವಲ ಗೃಹಕೃತ್ಯಕ್ಕೆ ಮಾತ್ರ ಸೀಮಿತವಾದವಳಲ್ಲ. ಅಗತ್ಯಬಿದ್ದಾಗ ಕೈಯಲ್ಲಿ ಖಡ್ಗ ಹಿಡಿದು ಹೋರಾಟ ಮಾಡಿದ್ದನ್ನು ಕಾಣುತ್ತೇವೆ. ಒಂದು ಕಾಲಕ್ಕೆ ಪರಾವಲಂಬಿಯಾಗಿದ್ದ ಮಹಿಳೆ ಇಂದು ಸ್ವಾವಲಂಬನೆಯ ಶಕ್ತಿಯಾಗಿ ಬೆಳೆದಿದ್ದಾಳೆ. ಹೆಣ್ಣಾಗಲಿ-ಗಂಡಾಗಲಿ ಯಾರೂ ದುರ್ಬಲರಲ್ಲ ಇಬ್ಬರೂ ಸಮಾಜದ ಎರಡು ಕಣ್ಣುಗಳಿದ್ದಂತೆ. ಆದಿಶಕ್ತಿಯ ಸ್ವರೂಪಿಯಾದ ಮಹಿಳೆಯರ ಸಾಧನೆಗಳನ್ನು ಸ್ಮರಿಸಲು ಈ ದಿನ ಆಚರಿಸಲಾಗುತ್ತದೆ. ಮಾರ್ಚ 8 ಕೇವಲ ಮಹಿಳಾ ದಿನಾಚರಣೆಗೆ ಸೀಮಿತವಾಗಬಾರದು. ಅನುದಿನ ಮಹಿಳೆಯರನ್ನು ಸ್ಮರಿಸುವ ಕಾರ್ಯವಾಗಬೇಕೆಂದರು. 

ಕ.ವಿ.ವ.ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ, ‘ಮಹಿಳೆ ಅಂದು-ಇಂದು’ ವಿಷಯ ಕುರಿತು ಉಪನ್ಯಾಸ ನೀಡಿ, ಮಹಿಳೆ ಇಲ್ಲದ ಜೀವನವನ್ನು ಉಹಿಸಿಕೊಳ್ಳುವುದೇ ಕಷ್ಟ. ಜನನದ ಯಂತ್ರ ಎಂದು ಕರೆಯಲ್ಪಟ್ಟ ಮಹಿಳೆ ಇಂದು ದುಡಿಯುವ ಯಂತ್ರವೂ ಆಗಿದ್ದಾಳೆ. ಕುಟುಂಬದ ಕಣ್ಣು ಹಾಗೂ ಗೃಹ ದೇವತೆಯಾದ ಮಹಿಳೆಯನ್ನು ಸಮಾಜ ತಾತ್ಸಾರ ಮಾಡಿದರೆ ದೇಶದ ಅರ್ಧಭಾಗವೇ ಕತ್ತಲೆಯಲ್ಲಿದ್ದಂತೆ.           12ನೇ ಶತಮಾನದಲ್ಲಿ ಮಹಿಳೆಯರಿಗೆ ಬಸವಾದಿ ಶರಣರು ಸ್ವಾತಂತ್ರ್ಯ, ಸಮಾನತೆ ನೀಡಿದ್ದರಿಂದ ಅನೇಕ ಮಹಿಳಾ ವಚನಗಾರ್ತಿಯರಾಗಲು ಸಾಧ್ಯವಾಯಿತು. ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದನ್ನು ಕಾಣಬಹುದೆಂದರು. 

ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಗೀರೀಜಾ ಹಿರೇಮಠ ಮಾತನಾಡಿ, ಇಂದು ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದು ಪುರುಷರಷ್ಟೆ ಸರಿಸಮಾನವಾದ ಸ್ಥಾನಮಾನ ಹೊಂದಿದ್ದಾರೆ. ವೇದಕಾಲದಲ್ಲೂ ಸ್ತ್ರೀಪಂಡಿತರು ವೇದ, ಮಂತ್ರ ಬರೆದಿದ್ದನ್ನು ಕಾಣಬಹುದೆಂದರು.  

ಇದೇ ಸಂದರ್ಭದಲ್ಲಿ ಕಾಲೇಜಿನ ಮಹಿಳಾ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. 

ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಡಾ. ಕುಮಾರಸ್ವಾಮಿ ಹಿರೇಮಠ, ಪ್ರಾಧ್ಯಾಪಕ ಆರ್‌. ಕೆ. ಗುರುವಿನ, ಎಸ್‌.ಎಂ. ಕೊಟಬಾಗಿ, ಜಯಶೀಲಾ ಎ.ಎಚ್‌. ಗೀರೀಜಾ ಸುಂಕದ, ಉಮಾ ಮಠ, ಅನುರಾಧಾ ಆರಾಧ್ಯಮಠ, ನಮೃತಾ ಕಲಭಾವಿಮಠ ಸೇರಿದಂತೆ ವಿದ್ಯಾರ್ಥಿಗಳು, ಸಿಬ್ಬಂದಿಗಳು ಮತ್ತಿತರರು ಇದ್ದರು.  

ರಾಜೀವ ಜಾಂಗಟೆ ಸ್ವಾಗತಿಸಿದರು. ಅರುಣಕುಮಾರ ಚಲವಾದಿ ನಿರೂಪಿಸಿದರು. ಸುಲೇಮಾನ ತಹಶೀಲ್ದಾರ ವಂದಿಸಿದರು.