ವಕ್ಪ್‌ ತಿದ್ದುಪಡಿ ಮಸೂದೆ ಮುಸ್ಲಿಂ ಸಮೂದಾಯಕ್ಕೆ ಮಾರಕ: ತಾಳಿಕೋಟಿ

Wakf Amendment Bill is fatal for Muslim community: Talikoti

ವಕ್ಪ್‌ ತಿದ್ದುಪಡಿ ಮಸೂದೆ ಮುಸ್ಲಿಂ ಸಮೂದಾಯಕ್ಕೆ ಮಾರಕ: ತಾಳಿಕೋಟಿ 

ಗಜೇಂದ್ರಗಡ 04: ವಕ್ಪ್‌ ತಿದ್ದುಪಡಿ ಮಸೂದೆ ಜಾರಿಯಿಂದ ಮುಸ್ಲಿಂ ಸಮೂದಾಯಕ್ಕೆ ಮಾರಕವಾಗಲಿದೆ ಎಂದು ಅಂಜುಮನ್ ಇಸ್ಲಾಂ ಕಮೀಟಿ ಮಾಜಿ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ಹೇಳಿದರು. 

ನಗರದ  ಅಂಜುಮನ್ ಇಸ್ಲಾಂ ಕಮೀಟಿ ನೇತೃತ್ವದಲ್ಲಿ ನಡೆದ ವಕ್ಪ್‌ ತಿದ್ದುಪಡಿ ಮಸೂದೆ ಹಿಂಪಡೆಯಲು ಒತ್ತಾಯಿಸಿ ಜಾಮೀಯ ಮಸೀದಿಯಿಂದ ಕಪ್ಪು ಪಟ್ಟಿ ಧರಿಸಿ, ಕಾಲ್ನಡಿಗೆ ಮೂಲಕ ಕೆ.ಕೆ.ಸರ್ಕಲ್ ವೃತ್ತದವರೆಗೆ ಮೆರವಣಿಗೆ ನಡೆಸಿ  ತಹಶಿಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. 

ದೇಶದಲ್ಲಿ ಎಲ್ಲ ಸಮುದಾಯದವರಿಗೂ ಅವರದ್ದೇ ಆದ ಹಬ್ಬ, ಆಚರಣೆ, ಪೂಜೆ, ನಮಾಜ್ ಮಾಡುವ ಧಾರ್ಮಿಕ ಹಕ್ಕನ್ನು ನೀಡಿದೆ. ಆದರೆ ಕೇಂದ್ರ ಸರ್ಕಾರ ಸಮಾಜದಲ್ಲಿ ಶಾಂತಿ ಭಂಗ ಮಾಡುವಂತಹ, ಜನ ವಿರೋಧಿ ಕಾನೂನುಗಳನ್ನು ರೂಪಿಸಲು ಮುಂದಾಗಿರುವುದು ಖಂಡನೀಯ ಎಂದರು. ಪ್ರಧಾನಮಂತ್ರಿ ದೇಶದ ಸಂಪತ್ತನ್ನು ಒಂದೊಂದಾಗಿ ಮಾರುತ್ತಿದ್ದಾರೆ. ಈಗ ಮುಸಲ್ಮಾನರ ಸಂಪತ್ತಿನ ಮೇಲೆ ಕಣ್ಣು ಹಾಕಿದ್ದಾರೆ. ವಕ್ಫ್‌ ತಿದ್ದುಪಡಿ ಮಸೂದೆಯಲ್ಲಿ ವಕ್ಫ್‌ ಆಸ್ತಿ ಮತ್ತು ದೇಶದ ಭವಿಷ್ಯಕ್ಕೆ ಅಪಾಯವನ್ನುಂಟು ಮಾಡುವ ತಿದ್ದುಪಡಿಗಳಿದ್ದು ಕೂಡಲೇ  ಮಸೂದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. 

ಅಂಜುಮನ್ ಇಸ್ಲಾಂ ಕಮೀಟಿ ಮಾಜಿ ಚೇರಮನ್ನ ಎ.ಡಿ.ಕೋಲಕಾರ ಮಾತನಾಡಿ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಒಕ್ಕೂಟ ವ್ಯವಸ್ಥೆ ಮೇಲಿನ ದಾಳಿಯಾಗಿದ್ದು ವಕ್ಫ್‌ ಮಸೂದೆ ಮುಸ್ಲಿಂ ಸಮುದಾಯದ ಹಿತಾಸಕ್ತಿಗೆ ಹಾನಿ ಮಾಡುತ್ತದೆ. ಮಸೂದೆಯನ್ನು ಹಿಂಪಡೆಯಲು ರಾಷ್ಟಪತಿಗಳು ಮಧ್ಯಸ್ಥಿಕೆ ವಹಿಸಿ ಕೋಟ್ಯಾಂತರ ಅಲ್ಪಸಂಖ್ಯಾತರ ರಕ್ಷಣೆಗೆ ಮುಂದಾಗುವಂತೆ ಒತ್ತಾಯಿಸಿದರು. 

ಪುರಸಭೆ ಸದಸ್ಯ ರಾಜು ಸಂಗ್ಲೀಕಾರ ಮಾತನಾಡಿ ವಕ್ಪ್‌ ತಿದ್ದುಪಡಿ ಮಸೂದೆ ದ್ವೇಷಪೂರಿತ. ಅಲ್ಪಸಂಖ್ಯಾತರ ಹಕ್ಕುಗಳನ್ನು ಹತ್ತಿಕ್ಕುವ ಎಲ್ಲ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಂತ ಹಂತವಾಗಿ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಆಕ್ರೊಶ ವ್ಯಕ್ತಪಡಿಸಿದರು. 

ತಹಶೀಲ್ದಾರ ಕಿರಣಕುಮಾರ ಕುಲಕರ್ಣಿಯವರು ಮನವಿ ಸ್ವೀಕರಿಸಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಅಂಜುಮನ್ ಇಸ್ಲಾಂ ಕಮೀಟಿ ಚೇರಮನ್ನ ಹಸನಸಾಬ ತಟಗಾರ, ಎಸ್‌.ಎಂ ಆರಗಿದ್ದಿ, ನಾಸೀರ್ ಸುರಪುರ, ಮಾಸುಮಲಿ ಮದಗಾರ, ದಾದೇಸಾಬ ಹಣಗಿ, ಉಪಾಧ್ಯಕ್ಷ ಹಾಸೀಂ ಹಿರೇಹಾಳ, ಆರೀಫ್ ಮನಿಯಾರ, ಆಸೀಫ್ ಮೋಮಿನ್,  ಭಾಷು ಮುದಗಲ್ಲ, ಇಮ್ರಾನ್ ಅತ್ತಾರ, ಪತ್ತೇಸಾಬ ತಹಶಿಲ್ದಾರ, ಖಾಸಿಂಸಾಬ ಮುಚ್ಚಾಲಿ, ಮೆಹಬೂಬ್ ಮುದಗಲ್ಲ, ಸೇರಿದಂತೆ ಇತರರು ಇದ್ದರು.