ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಕಮಕೇರಿಯಲ್ಲಿ ಗ್ರಾಮ ವಾಸ್ತವ್ಯ ನೀರಾವರಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಗೆ ಗ್ರಾಮಸ್ಥರ ಬೇಸರ

ಲೋಕದರ್ಶನ ವರದಿ

ರಾಮದುರ್ಗ, 5: ಘಟಪ್ರಭಾ ಬಲದಂಡೆ ಕಾಲುವೆ ನೀರು ಕೊನೆಯ ಹಂತದ ಜಮೀನುಗಳಿಗೆ ತಲುಪದೇ ರೈತರು ಸಂಕಷ್ಟದಲ್ಲಿರುವುದು ಒಂದೆಡೆಯಾದರೆ ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ಸಮರ್ಪಕ ವಿದ್ಯುತ್ ಅಸಮರ್ಪಕ ವ್ಯತ್ಯಯ ಸರಿಪಡಿಸುವ ವೇಳೆಯಲ್ಲಿ ಲೈನಮನ್ ಮೃತಪಡುವಂತಾಯಿತು ಎಂದು ಗ್ರಾಮಸ್ಥರು ಹೆಸ್ಕಾಂ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ ಘಟನೆ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಕಮಕೇರಿ ಗ್ರಾಮದಲ್ಲಿ ಮಂಗಳವಾರ ನಡೆದ ಗ್ರಾಮ ವ್ಯಾಸ್ತವ್ಯದ ಸಂದರ್ಭದಲ್ಲಿ ನಡೆಯಿತು.

ಘಟಪ್ರಭಾ ಬಲದಂಡೆ ಕಾಲುವೆಯಿಂದ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. 2008ರಲ್ಲಿ ಕಾಲುವೆಯ ಕಾಮಗಾರಿ ಮುಗಿದು ಕಮಕೇರಿ ಮೈನರ್ ಕಾಲುವೆ ಸೇರಿದಂತೆ ಮೂರು ಹಂತದ ಕಾಲುವೆ ನಿಮರ್ಿಸಿ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಕಾಲುವೆಗೆ ನೀರು ಹರಿದು 10 ವರ್ಷಗಳಾದರೂ ಕಾಲುವೆಯ ಕೊನೆಯ ಹಂತದ  ರೈತರ ಜಮೀನುಗಳಿಗೆ ನೀರು ಹರಿಯದೇ ನೀರಾವರಿ ಸೌಲಭ್ಯದಿಂದ ವಂಚಿತರಾಗುವಂತಾಗಿದೆ. ಕಮಕೇರಿ ಗ್ರಾಮದ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಲೋಕಾಪೂರದ ನೀರಾವರಿ ಇಲಾಖೆಗೆ ಅಲೆದು ಸಾಕಾಗಿದೆ. ಅಧಿಕಾರಿಗಳು ಮಾಡುತ್ತಿರುವ ಕೆಲಸವಾದರೂ ಏನೆಂದು ಮಾಹಿತಿ ನೀಡುವಂತೆ ಗ್ರಾಮಸ್ಥರು ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ಸಭೆಗೆ ಸಮರ್ಪಕ ಮಾಹಿತಿ ನೀಡದೇ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಠಿಯಾಗಿ ಪರಸ್ಥಿತಿ ವಿಕೋಪಕ್ಕೆ ತೆರಳುವುದೆಂದು ಅರಿತ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಹಾಗೂ ಶಾಸಕ ಮಹಾದೇವಪ್ಪ ಯಾದವಾಡ ಮಧ್ಯ ಪ್ರವೇಶಿಸಿ ಗೊಂದಲ ಬಗೆಹರಿಸಲು ಪ್ರಯತ್ನಿಸುತ್ತಿದ್ದಂತೆ ನೀರಾವರಿ ಇಲಾಖೆಯ ಪ್ರಭಾರಿ ಎಇಇ ದೊಡಮನಿ ಘಟನೆಗೆ ತನಗು ಸಂಬಂಧವೇ ಇಲ್ಲ ಎನ್ನುವಂತೆ ಇರುವುದು ಸಾರ್ವಜನಿಕರಲ್ಲಿ ಆಕ್ರೋಶವನ್ನುಂಟು ಮಾಡಿತು.

ನಂತರ ಮಾತನಾಡಿದ ಶಾಸಕ ಮಹಾದೇವಪ್ಪ ಯಾದವಾಡ ವಾಸ್ತವ್ಯದ ಹಿನ್ನಲೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಆಗಮಿಸಿದ್ದು, ಗ್ರಾಮದ ಸರ್ವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದರು.

ಜಿ.ಪಂ ಸದಸ್ಯ ರಮೇಶ ದೇಶಪಾಂಡೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆಗಳು ಉದ್ಭವವಾಗುತ್ತವೆ. ಅವುಗಳ ನಿವಾರಣೆಗೆ ಮೇಲಿಂದ ಮೇಲೆ ಅಧಿಕಾರಿಗಳು ಮುತವಜರ್ಿ ವಹಿಸಿ ಶ್ರಮಿಸಬೇಕೆಂದರು.

ಬೈಲಹೊಂಗಲ ಉಪವಿಭಾಧಿಕಾರಿ ಶಿವಾನಂದ ಭಜಂತ್ರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ತಾ.ಪಂ ಸದಸ್ಯೆ ರಾಜೇಶ್ವರಿ ನಾಡಗೌಡ್ರ, ಗ್ರಾ.ಪಂ ಅಧ್ಯಕ್ಷ ಆರ್. ಎಸ್. ಮುರಗೋಡ, ತಹಶೀಲ್ದಾರ ಆರ್. ವಿ. ಕಟ್ಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ಬೈಲಹೊಂಗಲ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ನಡೆದ ಗ್ರಾಮ ವಾಸ್ತವ್ಯದ ಸಭೆಯಲ್ಲಿ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿದರು.