ಲೋಕದರ್ಶನ ವರದಿ
ಹೊನ್ನಾವರ: ತಾಲೂಕಿನ ಮಂಕಿಯ ಕೊಪ್ಪದಮಕ್ಕಿ ಅರಬ್ಬಿ ಸಮುದ್ರದ ತೀರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಅಪರಿಚಿತ ಮಹಿಳೆ ಮತ್ತು ಮಕ್ಕಳ ಶವ ಪತ್ತೆಯಾಗಿದೆ. ಬೆಳ್ಳಂ ಬೆಳಿಗ್ಗೆ ಮಹಿಳೆ ಮತ್ತು ಮಕ್ಕಳು ಶವವಾಗಿ ಪತ್ತೆಯಾಗಿರುವುದನ್ನು ನೋಡಿ ಸ್ಥಳಿಯ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಕೊಪ್ಪದಮಕ್ಕಿ ಅರಬ್ಬಿ ಸಮುದ್ರದ ತೀರದಲ್ಲಿ ಒರ್ವ ಮಹಿಳೆ ಹಾಗೂ ಇರ್ವರು ಹೆಣ್ಣುಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂಬಂತಾದರು ಶಂಕಾಸ್ಪದ ರೀತಿಯಲ್ಲಿ ಶವಪತ್ತೆಯಾಗಿರುವುದು ಹಲವು ರೀತಿಯ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮೃತಪಟ್ಟವರ ಗುರುತು ಇದುವರೆಗು ಪತ್ತೆಯಾಗಿಲ್ಲ. ಹೊರರಾಜ್ಯದವರಾಗಿರಬಹುದು ಎಂದು ಊಹಿಸಲಾಗಿದೆ. ಬೆಳಿಗ್ಗೆ ಕೊಪ್ಪದಮಕ್ಕಿಯ ಸುರೇಶ್ ಮೊಗೇರ್ ಎನ್ನುವವರು ಸಮುದ್ರ ತೀರದಲ್ಲಿ ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು.
ಒರ್ವ ಮಹಿಳೆಯ ವಯಸ್ಸು ಅಂದಾಜು 30ರಿಂದ35 ವರ್ಷ ವಯಸ್ಸಿನ 5.3 ಅಡಿ ಎತ್ತರ ಉದ್ದನೆಯ ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟಿನ ಚಹರೆಯಲ್ಲಿದ್ದಾರೆ. ಕೆಂಪು ಮತ್ತು ಹಳದಿ ಬಣ್ಣ ಮಿಶ್ರಿತ ಚೂಡಿದಾರ ಟಾಫ್ ಹಾಗೂ ಕೆಂಪು ಬಣ್ಣದ ಲಗಿನ್ಸ್ ಪ್ಯಾಂಟ್ ಉಡುಪು ಧರಿಸಿದ್ದಾರೆ.
ಪತ್ತೆಯಾದ ಇರ್ವರು ಹೆಣ್ಣುಮಕ್ಕಳಲ್ಲಿ ಒರ್ವಳು ಸುಮಾರು ಅಂದಾಜು 9ರಿಂದ 10ವರ್ಷ ವಯಸ್ಸಿನ ಬಾಲಕಿ 4.5 ಅಡಿ ಎತ್ತರ, ಉದ್ದನೆಯ ಮುಖ ಗೋಧಿ ಮೈಬಣ್ಣ ಚಹರೆ ಹೊಂದಿದ್ದಾರೆ. ಇನ್ನೊರ್ವ ಬಾಲಕಿ 6ರಿಂದ 7 ವರ್ಷ 3.8 ಅಡಿ ಎತ್ತರ, ಸ್ವಲ್ಪ ಗೋಲುಮುಖ, ಎಣ್ಣೆಗೆಂಪು ಮೈಬಣ್ಣ ಚಹರೆಯಿದೆ. ತಿಳಿ ಗುಲಾಬಿ,ತಿಳಿ ನೀಲಿಕಪ್ಪು, ಹಳದಿ ಮಿಶ್ರಿತ ಚಿತ್ತಾರ,ಗೆರೆಯುಳ್ಳ ಟಾಫ್ ಧರಿಸಿರುತ್ತಾರೆ.