ಹೆಪಟೈಟೀಸ್‌-ಬಿ ಸೋಂಕಿನ ಲಕ್ಷಣಗಳಿಗೆ ಚಿಕಿತ್ಸೆಯಿದ್ದು, ನಿರ್ಲಕ್ಷಿಸಬೇಡಿ: ಡಾ.ಶಕೀಲಾ

There is treatment for the symptoms of Hepatitis-B infection, do not ignore it: Dr. Shakeela

ಹೆಪಟೈಟೀಸ್‌-ಬಿ ಸೋಂಕಿನ ಲಕ್ಷಣಗಳಿಗೆ ಚಿಕಿತ್ಸೆಯಿದ್ದು, ನಿರ್ಲಕ್ಷಿಸಬೇಡಿ: ಡಾ.ಶಕೀಲಾ 

ಬಳ್ಳಾರಿ 07: ಯಕೃತ್ತಿನ ಮೇಲೆ ಪರಿಣಾಮ ಬೀರುವ ಹೆಪಟೈಟೀಸ್‌-ಬಿ ಒಂದು ವೈರಸ್ ಸೋಂಕಾಗಿದ್ದು, ಗಾಢವಾದ ಮೂತ್ರದ ಬಣ್ಣದಲ್ಲಿ ಬದಲಾವಣೆ, ವಾಕರಿಕೆ ಮುಂತಾದವುಗಳು ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಆರಂಭದಲ್ಲಿಯೇ ರೋಗ ನಿಯಂತ್ರಣಕ್ಕೆ ಸಹಕರಿಸಿ ಎಂದು ರಾಷ್ಟ್ರೀಯ ವೈರಲ್ ಹೈಪಟೈಟೀಸ್ ನಿಯಂತ್ರಣ ಕಾರ್ಯಕ್ರಮದ ಉಪನಿರ್ದೇಶಕರಾದ ಡಾ.ಶಕೀಲಾ.ಎನ್ ಅವರು ಹೇಳಿದರು. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ನಿರ್ದೇಶನಾಲಯದಡಿ ರಾಷ್ಟ್ರೀಯ ವೈರಲ್ ಹೆಪಟೈಟೀಸ್ ನಿಯಂತ್ರಣ ಕಾರ್ಯಕ್ರಮದ ಮೂಲಕ ಕಲಬುರಗಿ ವಿಭಾಗದ ಎಲ್ಲ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳು, ಫಿಜಿಷಿಯನ್, ತಜ್ಞ ವೈದ್ಯರುಗಳಿಗೆ ಬಳ್ಳಾರಿ ನಗರದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಸಾಮಾನ್ಯವಾಗಿ ಕಾಮಾಲೆ ಎಂದು ಕರೆಸಿಕೊಳ್ಳುವ ಹೆಪಟೈಟೀಸ್‌-ಬಿ ಸೋಂಕು ಆರಂಭದಲ್ಲಿ ಚಿಹ್ನೆಗಳನ್ನು ಗುರ್ತಿಸಲು ಸಾಧ್ಯವಾಗುವುದಿಲ್ಲ. ಕ್ರಮೇಣ ಚರ್ಮ ಮತ್ತು ಕಣ್ಣುಗಳ ಹಳದಿ, ಗಾಢ ಮೂತ್ರ, ತೀವ್ರ ಆಯಾಸ, ವಾಕರಿಕೆ, ವಾಂತಿ ಸ್ನಾಯು ಮತ್ತು ಕೀಲು ನೋವು, ಹಸಿವಾಗದಿರುವಿಕೆ, ಹೊಟ್ಟೆ ಬಲಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದು, ಈ ಹಂತದಲ್ಲಿಯೂ ನಿರ್ಲಕ್ಷಿಸಿದರೆ ಗಂಭೀರ ಸ್ಥಿತಿಗೆ ರೋಗಿಯ ಆರೋಗ್ಯ ಬದಲಾಗಬಹುದು. ಇದಕ್ಕಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ತಪಾಸಣೆ ಮತ್ತು ಪರೀಕ್ಷೆ ಕೈಗೊಳ್ಳಲಾಗುತ್ತಿದ್ದು, 2030 ರ ವೇಳೆಗೆ ಹೆಪಟೈಟೀಸ್ ಮುಕ್ತ ದೇಶವನ್ನಾಗಿಸುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಿ ಕರ್ತವ್ಯ ನಿರ್ವಹಿಸಬೇಕು ಎಂದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಮಾತನಾಡಿ, ಸಾಮಾನ್ಯವಾಗಿ ಹೆಪಟೈಟೀಸ್‌-ಬಿ ಸೋಂಕು ಹೊಂದಿದ ವ್ಯಕ್ತಿಯ ರಕ್ತ ಮತ್ತು ಇತರ ದೈಹಿಕ ದ್ರವಗಳು ಇನ್ನೊಬ್ಬ ವ್ಯಕ್ತಿಯ ದೇಹದಲ್ಲಿ ಸೇರಿದ ಸಂದರ್ಭದಲ್ಲಿ ರೋಗ ಹರಡುವ ಸಾಧ್ಯತೆ ಇದ್ದು, ಶುದ್ದೀಕರಿಸದ ಸೂಜಿ, ಸಿರಂಜ್‌ಗಳು ಹಲ್ಲು ಉಜ್ಜುವ ಬ್ರಶ್, ಉಗುರು-ಕತ್ತರಿಗಳು, ಹಚ್ಚೆ ಹಾಕಿಸಿಕೊಳ್ಳುವುದು, ಸೋಂಕಿತ ವ್ಯಕ್ತಿಯ ನಿರಂತರ ಸಂಪರ್ಕವಿರುವ ಕುಟುಂಬದ ಸದಸ್ಯರು ಸೋಂಕಿಗೆ ತುತ್ತಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು. 

ಈ ನಿಟ್ಟಿನಲ್ಲಿ ಎಲ್ಲಾ ಗರ್ಭಿಣಿಯರಿಗೆ ಕಡ್ಡಾಯ ಹೆಪಟೈಟೀಸ್‌-ಬಿ ತಪಾಸಣೆ, ನವಜಾತ ಶಿಶು ಮತ್ತು 1 ವರ್ಷದ ಮಕ್ಕಳಿಗೆ ಲಸಿಕೆ ಹಾಕಿಸುವುದು, ಹೆಚ್ಚು ಅಪಾಯಕಾರಿ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುವ ಆರೋಗ್ಯ ಕಾರ್ಯಕರ್ತೆಯರು ತಪ್ಪದೇ ಲಸಿಕೆ ಪಡೆಯಬೇಕು ಎಂದು ಸೂಚಿಸಿದರು. 

ನಾವು ಬಳಸುವ ಶೌಚಾಲಯ, ಕುಡಿಯುವ ನೀರು ಮುಂತಾದವುಗಳ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ರಕ್ತ ಮತ್ತು ಅದರ ಉತ್ಪನ್ನ ಪಡೆಯುವಾಗ ಸುರಕ್ಷತೆಯನ್ನು ಪರೀಶೀಲಿಸಿಕೊಳ್ಳಬೇಕು. ಇದರಿಂದ ನಮ್ಮ ಜೀವನ ಶೈಲಿ ಹಾಗೂ ಬದಲಾವಣೆಗಳ ಮೂಲಕ ಹೆಪಟೈಟೀಸ್ ಕಾಯಿಲೆಯನ್ನು ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು. 

ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ..ಇಂದ್ರಾಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಬಿಮ್ಸ್‌ ನಿರ್ದೇಶಕ ಡಾ.ಬಿ.ಗಂಗಾಧರ ಗೌಡ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್ ಬಸರೆಡ್ಡಿ, ಎನ್‌.ವಿ.ಹೆಚ್‌.ಸಿ.ಪಿ ಸಲಹೆಗಾರರಾದ ಡಾ.ಹರ್ಷಿತಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಡಿಪಿಸಿ ಅರ್ಚನಾ, ಡ್ಯಾಪ್ಕೋ ಮೇಲ್ವಿಚಾರಕ ಗೀರೀಶ್, ಪಿಪಿಸಿ ಅನಿಲ್ ಕುಮಾರ್, ಆರೋಗ್ಯ ನೀರೀಕ್ಷಣಾಧಿಕಾರಿ ಪಂಪಾಪತಿ ಸೇರಿದಂತೆ 7 ಜಿಲ್ಲೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.