ಯುವಪೀಳಿಗೆಗೆ ಕನ್ನಡ ಭಾಷೆಯ ಅಂತಃಸತ್ವದ ಪರಿಚಯವಾಗಬೇಕು : ವಿಜಯ್ ಪೂಣಚ್ಚ ತಂಬಂಡ

The younger generation should be introduced to the essence of the Kannada language: Vijay Poonacha

ಯುವಪೀಳಿಗೆಗೆ ಕನ್ನಡ ಭಾಷೆಯ ಅಂತಃಸತ್ವದ ಪರಿಚಯವಾಗಬೇಕು : ವಿಜಯ್ ಪೂಣಚ್ಚ ತಂಬಂಡ 

ವಿಜಯನಗರ 16: ಇಂದಿನ ಯುವಜನಾಂಗಕ್ಕೆ ಕನ್ನಡ ಭಾಷೆಯ ಅಂತಃಸತ್ವದ ಪರಿಚಯವಾಗಬೇಕು. ಸರ್ಕಾರ ಮತ್ತು ಸಮಾಜ ವರ್ತಮಾನದಲ್ಲಿ ಕನ್ನಡ ಭಾಷೆಯ ಸಮಸ್ಯೆ-ಸವಾಲುಗಳನ್ನು ಅರಿತುಕೊಂಡು ಕನ್ನಡವನ್ನು ಕಟ್ಟುವ ಕಾರ್ಯದಲ್ಲಿ ನಿರತವಾಗಬೇಕು ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ವಿಜಯ ಪೂಣಚ್ಚ ತಂಬಂಡ ಅವರು ಅಭಿಪ್ರಾಯಪಟ್ಟರು.ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಮೈಕೊ ಕನ್ನಡ ಬಳಗ ಮತ್ತು ಕನ್ನಡ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರೋತ್ಸಾಹಧನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಂದುವರೆದು ಮಾತನಾಡುತ್ತ ಮೈಕೊ ಕನ್ನಡ ಬಳಗ ಯಾವುದೇ ಸರ್ಕಾರದ ಅರ್ಥಿಕತೆಯಿಲ್ಲದೆ ಸ್ವತಃ ಸಂಸ್ಥೆಯು ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ವಿತರಿಸುತ್ತಿರುವುದು ಶ್ಲಾಘನೀಯ ಕಾರ್ಯ. ಕನ್ನಡ ಮಾಧ್ಯಮದ ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವ ಮೂಲಕ ಕನ್ನಡವನ್ನು ಉಳಿಸುವ ಮತ್ತು ಬೆಳೆಸುವ ಕಾರ್ಯದಲ್ಲಿ ನಿರತವಾಗಿದೆ ಹೀಗೆ ಮೈಕೋ ಕನ್ನಡ ಬಳಗ ಸಂಸ್ಥೆಯು ಇನ್ನೂ ಹೆಚ್ಚಾಗಿ ಬೆಳೆಯಬೇಕು ಕನ್ನಡ ವಿದ್ಯಾರ್ಥಿಗಳನ್ನು ಬೆಳೆಸಬೇಕು ಎಂದರು. ಮೈಕೋ ಕನ್ನಡ ಬಳಗದ ಅಧ್ಯಕ್ಷರಾದ ರಾಮತೀರ್ಥ ಕೆ.ಎಸ್‌. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತ ಕನ್ನಡಕ್ಕಾಗಿ ಇರುವ ಏಕೈಕ ವಿಶ್ವವಿದ್ಯಾಲಯ ಅದು ಕನ್ನಡ ವಿಶ್ವವಿದ್ಯಾಲಯ. ಈ ವಿಶ್ವವಿದ್ಯಾಲಯ ಉತ್ತಮವಾಗಿ ನಡೆದುಕೊಂಡು ಸಾಗುತ್ತಿದೆ. ಇಲ್ಲಿರುವ ವಿದ್ಯಾರ್ಥಿಗಳ ಬೆಳೆದರೆ ಕನ್ನಡ ಬೆಳೆಯುತ್ತದೆ. ಈ ವಿಶ್ವವಿದ್ಯಾಲಯ ಬೆಳಯಬೇಕೆಂಬುದು ಮೈಕೊ ಕನ್ನಡ ಬಳಗದ ಆಶಯ. ಕನ್ನಡವನ್ನು ಉಳಿಸಿ, ಬೆಳೆಸಿ. ಕನ್ನಡ ಬೆಳೆಸಬೇಕಾದರೆ ವಿದ್ಯಾರ್ಥಿಗಳು ಬೆಳೆಯಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಮೈಕೋ ಕನ್ನಡ ಬಳಗದ ಸಹ ಕಾರ್ಯದರ್ಶಿಗಳಾದ ಗುರುಪ್ರಸಾದ್ ಅವರು ಮಾತನಾಡುತ್ತ ಸಾಹಿತಿ ಪ್ರೊ. ವೆಂಕಟಸುಬ್ಬಯ್ಯನವನರು ಕನ್ನಡ ವಿಶ್ವವಿದ್ಯಾಲಯಕ್ಕೆ ನೀಡಿದ್ದ ದೇಣಿಗೆಯು ಇಂದು ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವಾಗಿ ವಿತರಣೆಯಾಗುತ್ತಿರುವುದು ಸಂತೋಷದ ಸಂಗತಿ ಎಂದರು. ಈ ಸಮಾರಂಭದಲ್ಲಿ 12 ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮೈಕೊ ಕನ್ನಡ ಬಳಗದ ಪ್ರಧಾನ ಕಾರ್ಯದರ್ಶಿಗಳಾದ ಕೆ.ಬಸವರಾಜು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಕ್ಷಣಿಕ ವಿಭಾಗದ ನಿರ್ದೇಶಕರು ಪ್ರೊ.ಎಸ್‌.ವೈ ಸೋಮಶೇಖರ್ ಅವರು ಸ್ವಾಗತಿಸಿದರು. ಅಧ್ಯಯನಂಗದ ನಿರ್ದೇಶಕರಾದ ಡಾ. ಅಮರೇಶ ಯತಗಲ್, ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಶೈಲಜ ಇಂ. ಹಿರೇಮಠ, ಅಭಿವೃದ್ಧಿ ಅಧಯನ ವಿಭಾಗದ ಪ್ರೊ.ಜನಾರ್ಧನ ಹಾಗೂ ಬೋಧಕೇತರ ಸಿಬ್ಬಂದಿಗಳು, ಮೈಕೋ ಕನ್ನಡ ಬಳಗದ ಪದಾಧಿಕಾರಿಗಳು ಮತ್ತು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.