ತಹಸೀಲ್ದಾರ್ ಅಜಯ ನೇತೃತ್ವದ ತಂಡ ಬಹಿಷ್ಕಾರಕ್ಕೊಳಗಾದ ಕುಟುಂಬಗಳ ಮನೆಗೆ ಭೇಟಿ

ಲೋಕದರ್ಶನ ವರದಿ

ಕುಮಟಾ,18 : ತಾಲೂಕಿನ ಅಳಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಉಪ್ಪಿನಪಟ್ಟಣ ಗ್ರಾಮದಲ್ಲಿ ಅಂಬಿಗ ಸಮಾಜದ 9 ಕುಟುಂಬಗಳು ಸಾಮೂಹಿಕ ಬಹಿಷ್ಕಾರಕ್ಕೊಳಗಾಗಿವೆ ಎಂಬ ವರದಿ ಪತ್ರಿಕೆಗೆ ಬಿತ್ತರವಾಗಿದ್ದು, ಈ ಬಗ್ಗೆ ಮಾಹಿತಿ ಪಡೆದ ತಾಲೂಕು ಆಡಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಹಿನ್ನೆಲೆಯಲ್ಲಿ  ತಹಸೀಲ್ದಾರ್ ಅಜಯ ನೇತೃತ್ವದ ತಂಡವು ಶುಕ್ರವಾರ ಬಹಿಷ್ಕಾರಕ್ಕೊಳಗಾದ ಕುಟುಂಬಗಳ ಮನೆ ಮನೆಗೆ ಭೇಟಿ ನೀಡಿ, ಸಮಂಗ್ರ ಮಾಹಿತಿ ಕಲೆ ಹಾಕಿದರು. 

ಅಳಕೋಡ ಗ್ರಾಪಂ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ ತಹಸೀಲ್ದಾರ್ ಅಜಯ ಅವರು, ಸಾಮೂಹಿಕ ಬಹಿಷ್ಕಾರಕ್ಕೊಳಗಾದ ಕುಟುಂಬಗಳಿಂದ ವಿವರಣೆ ಪಡೆದು ಮಾತನಾಡಿ, ಸಾಮೂಹಿಕ ಬಹಿಷ್ಕಾರ ಎನ್ನುವುದು ಸಂವಿಧಾನದ ವಿರುದ್ಧವಾಗಿದ್ದು, ಕಾನೂನಿನಾತ್ಮಕ ಅಪರಾಧ ಎನಿಸಿಕೊಳ್ಳುತ್ತದೆ. ಯಾರೇ ತಪ್ಪು ಕೆಲಸ ಮಾಡಿದರೂ ಅವರಿಗೆ ಶಿಕ್ಷೆ ವಿಧಿಸಲು ಕಾನೂನು ವ್ಯವಸ್ಥೆ ಇದೆ. ಹಾಗಾಗಿ ಬಹಿಷ್ಕಾರದ ಕುರಿತು ಸಮಗ್ರ ತನಿಖೆ ನಡೆಸಲು ಪ್ರತ್ಯೇಕ ತಂಡ ರಚಿಸಿದ್ದೇವೆ. ಕೆಲವೆ ದಿನಗಳಲ್ಲಿ ಈ ತಂಡ ಎರಡು ತಂಡದವರಿಂದ ವಿವರಣೆ ಪಡೆದು, ಅಂತೀಮ ವರದಿ ನೀಡಲಿದೆ. ಈ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುದು. ಈ ಸಭೆಗೆ ಅಂಬಿಗ ಸಮಾಜದ ಪ್ರಮುಖರು ಯಾರೂ ಭಾಗವಹಿಸದ ಕಾರಣ ಸಮಾಜದ ಪ್ರಮುಖರಿಂದಲೂ ವಿವರಣೆ ಪಡೆಯಲಾಗುವುದು. ಅಲ್ಲದೇ ಬಹಿಷ್ಕಾರಕ್ಕೊಳಗಾದ ಕುಟುಂಬಗಳಿಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದರು.

ಬಹಿಷ್ಕಾರಕ್ಕೊಳಗಾದ ಶಿವು ಅಂಬಿಗ ಮಾತನಾಡಿ, ನಮ್ಮ ಸಂಬಂಧಿ ಗಣಪತಿ ಅಂಬಿಗ ಅವರ ವಿವಾಹಕ್ಕೆ ನಾವೆಲ್ಲ ಮುಂದಾಗಿದ್ದೇವೆಂಬ ಕಾರಣಕ್ಕೆ ಸಮಾಜದ ಯಜಮಾನರು 9 ಕುಟುಂಬಗಳಿಗೆ ಬಹಿಷ್ಕಾರ ಹಾಕಿದ್ದಾರೆ. ಸಮಾಜದಿಂದ ಸಂಪೂರ್ಣ ಅಸಹಕಾರದ ಜೊತೆಗೆ ಕಿರುಕುಳ ನೀಡುತ್ತಿದ್ದಾರೆ. ಈ ಅನಿಷ್ಠ ಪದ್ದತಿ ಇಂದೇ ಕೊನೆಯಾಗಬೇಕು. ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ವಿನಂತಿಸಿದರು.

ನಂತರ ಬಹಿಷ್ಕಾರಕ್ಕೊಳಗಾದ ಮನೆಗಳಿಗೆ ಭೇಟಿ ನೀಡಿದಾಗ ನೆರೆಹೊರೆಯವರು ಆಯಾ ಮನೆಗಳನ್ನು ಅಧಿಕಾರಿಗಳಿಗೆ ತೋರಿಸಿ ಕೊಟ್ಟರು. ನೀವೆಲ್ಲ ಯಾಕೆ ಅವರ ಮನೆಗೆ ಹೋಗುವುದಿಲ್ಲ ಎಂದು ಸ್ಥಳೀಯ ಮಹಿಳೆಯರನ್ನು ವಿಚಾರಿಸಿದಾಗ, ಸಮಾಜದ ಯಜಮಾನರು ಈ ಕುಟುಂಬಗಳಿಗೆ ಬಹಿಷ್ಕಾರ ಹಾಕಿದ್ದಾರೆ. ಅವರೊಂದಿಗೆ ಮಾತನಾಡಿದರೆ ನಮಗೂ ಬಹಿಷ್ಕಾರ ಹಾಕುವ ಎಚ್ಚರಿಕೆ ನೀಡಿದ್ದಾರೆ. ನಾವೆಲ್ಲ ನೆರೆಹೊರೆಯವರು ಪ್ರೀತಿ-ವಿಶ್ವಾಸದಿಂದಿರಬೇಕೆಂಬ ಮನಸ್ಸಿದ್ದರೂ ಸಮಾಜದ ಪ್ರಮುಖರ ಸೂಚನೆಯನ್ನು ಪಾಲಿಸಬೇಕಾದ ಅನಿವಾರ್ಯತೆ ಇದೆ ಎಂದು ತಹಸೀಲ್ದಾರ್ ಬಳಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. 

ನಂತರ ತಹಸೀಲ್ದಾರ್ ಅವರು ಪಿಎಸ್ಐ ಸಂಪತ್ ಅವರೊಂದಿಗೆ ಚಚರ್ಿಸಿ, ಈ ಭಾಗದಲ್ಲಿ ಬಿಟ್ ವ್ಯವಸ್ಥೆಯ ಜತೆಗೆ ಪೊಲೀಸ್ ಪರೇಡ್ ನಡೆಸುವ ಮೂಲಕ ಸಾರ್ವಜನಿಕರಲ್ಲಿರುವ ಭಯದ ವಾತಾವರಣವನ್ನು ದೂರ ಮಾಡುವಂತೆ ಸೂಚಿಸಿದರು. 

ಈ ಸಂದರ್ಭದಲ್ಲಿ ಕತಗಾಲ ಪ್ರಭಾರೆ ಉಪ ತಹಸೀಲ್ದಾರ್ ಕೆ ಎಸ್ ಅಶ್ರಫ್, ಅಳಕೋಡ್ ಗ್ರಾಪಂ ಅಧ್ಯಕ್ಷ ಕೃಷ್ಣಾನಂದ ವೆಣರ್ೆಕರ್, ಉಪಾಧ್ಯಕ್ಷೆ ಲಲಿತಾ ಲೋಪಿಸ್, ಸದಸ್ಯರಾದ ದೀಪಕ ನಾಯ್ಕ, ರೇಖಾ ಭಟ್, ಭೈರವ್ ಭಟ್, ದತ್ತಾತ್ರಯ ದೇಶಭಂಡಾರಿ, ಡಾ ಚೈತ್ರಪ್ರಭಾ ನಾಯಕ ಹಾಗೂ ಇತರರು ಉಪಸ್ಥಿತರಿದ್ದರು.