ಸಾಮರಸ್ಯದಿಂದ ಸಮಾಜದ ಉನ್ನತಿ: ಟಂಕಸಾಲಿ

ಲೋಕದರ್ಶನ ವರದಿ

ಮಹಾಲಿಂಗಪುರ 24 : ಸಾಮರಸ್ಯ ಮತ್ತು ಸದಾಚಾರದಿಂದ ಸಮಾಜದ ಉನ್ನತಿಯಾಗುಯಾಗುತ್ತದೆ. ಈ ನಿಟ್ಟಿನಲ್ಲಿ ಸಮಾಜಕ್ಕೆ ವಿಶ್ವಕರ್ಮ ಜನಾಂಗದವರ ಕೊಡುಗೆ ಅಪಾರ. ಇವರು ಸಂಸ್ಕೃತಿಯ ರಾಯಭಾರಿಗಳು. ವಿಶ್ವಕರ್ಮರು ಸಮಾಜದ ಪ್ರತಿಯೊಬ್ಬರ ಜೀವನದ ತೊಟ್ಟಿಲಿನಿಂದ ಚಟ್ಟದವರೆಗೆ ಅವಶ್ಯಕ. ಎಲ್ಲ ಸಮುದಾಯವನ್ನು ಬೆಸೆಯುವ ಕೊಂಡಿ. ಆದರೆ ಅವರು ಸೌಲಭ್ಯಗಳಿಂದ ವಂಚಿತರಾಗಿ ನಿಕೃಷ್ಟರಾಗಿ ಬದುಕುತ್ತಿದ್ದಾರೆ. ಉತೃಷ್ಟ ಬದುಕಿಗಾಗಿ ವಿಶ್ವಕರ್ಮರು ಒಗ್ಗಟ್ಟಾಗಬೇಕು ಎಂದು ವಿಶ್ವಕರ್ಮ ಸಮಾಜದ ಮುಖಂಡ ರಾಜೇಂದ್ರ ಟಂಕಸಾಲಿ ನುಡಿದರು.

ಸಮೀಪದ ರನ್ನಬೆಳಗಲಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಾಗಲಕೋಟೆ ಹಾಗೂ ವಿಶ್ವಕರ್ಮ ಸಮಾಜ ಸೇವಾ ಸಂಸ್ಥೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಗದ್ಗುರು ಶ್ರೀ ಮೌನೇಶ್ವರ ಜಯಂತ್ಯುತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಸ್ಥಳೀಯ ಶ್ರೀರಾಮ ಸೇನೆಯ ಅಧ್ಯಕ್ಷ ಮಹಾಲಿಂಗಪ್ಪ ಗುಂಜಿಗಾವಿ ಮಾತನಾಡಿ ಧರ್ಮದ ಉನ್ನತಿಗಾಗಿ ಶ್ರಮಿಸುತ್ತಿರುವ ವಿಶ್ವಕರ್ಮರಿಗೆ ಒಂದೆಡೆ ಸೇರಲು ನೆಲೆಯಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಆ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿದರು.

ಸಾನಿಧ್ಯ ವಹಿಸಿದ್ದ ಚಿಕ್ಕಯ್ಯ ಸ್ವಾಮಿಗಳು ಆಶೀರ್ವಚನ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಬಸವರಾಜ ಮೋ. ಕಂಬಾರ ವಹಿಸಿದ್ದರು. ಸ್ಥಳೀಯ ಪಟ್ಟಣ ಪಂಚಾಯತಿ ಅಧ್ಯಕ್ಷ ಲಕ್ಷ್ಮಣ ಕಲ್ಲೊಳ್ಳೆಪ್ಪಗೋಳ, ಸ್ಥಾಯಿ ಅಮಿತಿ ಛೇರ್ಮನ್ ಸಿದ್ದುಗೌಡ ರಾ. ಪಾಟೀಲ, ಧರೆಪ್ಪ ಸಾಂಗ್ಲಿಕರ, ಮಹಾಲಿಂಗಪ್ಪ ಪುರಾಣಿಕ, ರಂಗಪ್ಪ ಒಂಟಗೋಡಿ, ಚಿಕ್ಕಪ್ಪ ನಾಯಕ, ಲಕ್ಕಪ್ಪ ಹಾರೂಗೇರಿ, ರಾಮನಗೌಡ ಪಾಟೀಲ, ಸದಪ್ಪ ಅಮಾತಿ, ಗುರುನಾಥ ಹಿಪ್ಪರಗಿ, ಮುಂತಾದವರು ಉಪಸ್ಥಿತರಿದ್ದರು. 

ಇದಕ್ಕೂ ಮುನ್ನ ಬೆಳಿಗ್ಗೆ 8 ರಿಂದ ಶ್ರೀ ರಾಮಲಿಂಗೇಶ್ವರ ಭಜನಾ ಮಂಡಳಿ ಇವರಿಂದ ಭಜನೆ, ಅಕ್ಕನ ಬಳಗದವರಿಂದ ನಾಮಕರಣ, 9 ರಿಂದ ಪಲ್ಲಕ್ಕಿ ಉತ್ಸವ, ಹಾಗೂ ಪುರವಂತರ ಸೇವೆ ಪಟ್ಟಣದ ರಥಬೀದಿಯಲ್ಲಿ ವಿಜೃಂಭಣೆಯಿಂದ ಜರುಗಿತು. ತದನಂತರ ಅನ್ನಸಂತರ್ಪಣೆ ನಡೆಯಿತು. ಭಾಗವಹಿಸಿ ಸೇವೆ ಸಲ್ಲಿಸಿದ ಪ್ರತಿಯೊಬ್ಬ ಕಲಾವಿರಿಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.