ಗಣತಂತ್ರ ವ್ಯವಸ್ಥೆ ಭಾರತೀಯರಿಗೆ ಸಾರ್ವಭೌಮಾಧಿಕಾರ ಕಲ್ಪಿಸಿಕೊಟ್ಟ ದಿನ: ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ 26: ಭಾರತ ರಾಷ್ಟ್ರವು ಗಣರಾಜ್ಯವೆಂದು 1950ರ ಜನವರಿ 26ರಂದು ಘೋಷಿಸಿಕೊಂಡಿತು. ಈ ದಿನವು ದೇಶದ ನಾಗರಿಕರಿಗೆ ರಾಷ್ಟ್ರದ ಜವಾಬ್ದಾರಿಯನ್ನು ನೀಡಿದ ದಿನವಾಗಿದೆ. ನಮ್ಮ ಸಂವಿಧಾನವನ್ನು ಒಪ್ಪಿಕೊಂಡ ದಿನವಿದು. ಗಣತಂತ್ರ ವ್ಯವಸ್ಥೆಯು ಭಾರತೀಯರಿಗೆ ಸಾರ್ವಭೌಮಾಧಿಕಾರವನ್ನು ಕಲ್ಪಿಸಿಕೊಟ್ಟ ದಿನವಾಗಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಭಾರತ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ರವಿವಾರ (ಜ.26) ನಗರದ ಜಿಲ್ಲಾ ಕ್ರೀಡಾಂಣದಲ್ಲಿ ಧ್ವಜಾರೋಹಣ ನೇರವೆರಿಸಿ ಸಚಿವರು ಸಂದೇಶ ನೀಡಿದರು.
ಬೆಳಗಾವಿಯ ಈ ನೆಲವು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ, ಸಂವಿಧಾನಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಂತಹ ಮಹಾತ್ಮರು ನಡೆದಾಡಿದ ನೆಲವಾಗಿದೆ ಎಂದರು.
ಡಾ. ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿ, ಚಿಂತನೆಯ ಫಲವಾಗಿ ನಾವಿಂದು ಜಗತ್ತಿಗೆ ಮಾದರಿಯಾದ ಸಂವಿಧಾನದ ವಾರಸುದಾರರಾಗಿದ್ದೇವೆ. ಬ್ರಿಟೀಷರ ದಾಸ್ಯದಿಂದ ಮುಕ್ತಿ ಪಡೆದುಕೊಂಡ ಬಳಿಕ ಕೇವಲ 76 ವರ್ಷಗಳಲ್ಲಿ ಜಗತ್ತಿನ ಅತ್ಯಂತ ಬಲಿಷ್ಠ ಪ್ರಜಾತಂತ್ರ ರಾಷ್ಟ್ರವಾಗಿ ಹೊರಹೊಮ್ಮಲು ಈ ಸಂವಿಧಾನವೇ ಬುನಾದಿಯಾಗಿದೆ.
ಸಾಮಾಜಿಕ ನ್ಯಾಯ, ಸರ್ವರಿಗೂ ಸಮಾನತೆ, ವ್ಯಕ್ತಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮ ಸಂವಿಧಾನ ನಮಗೆ ಕಲ್ಪಿಸಿಕೊಟ್ಟ ಬಹುದೊಡ್ಡ ಕೊಡುಗೆಗಳಾಗಿವೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.
ಆಕರ್ಷಕ ಪಥಸಂಚಲನ: ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರ (ಜ.26) ಜರುಗಿದ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಆರ್.ಪಿ.ಐ ಶಿವಾನಂದ ಗುಣದಾಳ ಅವರ ನೇತೃತ್ವದ ತಂಡಗಳು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರಿಗೆ ಗೌರವ ವಂದನೆ ಸಲ್ಲಿಸಿದವು.
ತದನಂತರ ಸಾರೇ ಜಹಾ ಚೇ ಅಚ್ಛಾ ಪೋಲಿಸ್ ಬ್ಯಾಂಡಿನ ಹಿಮ್ಮೇಳದೊಂದಿಗೆ ಜರುಗಿದ ಆಕರ್ಷಕ ಪಥಸಂಚಲನದಲ್ಲಿ ಡಿ.ಎ.ಆರ್. ಬೆಳಗಾವಿ, ಮಹಿಳಾ ಹಾಗೂ ಪುರುಷರ ನಾಗರೀಕ ಪೋಲಿಸ್ ತುಕುಡಿ, ಸಿ.ಎ.ಆರ್. ಬೆಳಗಾವಿ, ಕೆ.ಎಸ್.ಆರ್.ಪಿ ಮಹಿಳಾ, ಪುರುಷರ ತುಕುಡಿ, ಗೃಹ ರಕ್ಷಕ ದಳ, ಕರ್ನಾಟಕ ಅಬಕಾರಿ, ಅಗ್ನಿಶಾಮಕ ದಳ, ಎನ್.ಸಿ.ಸಿ. ಸಿನಿಯರ ಬಾಯ್ಸ ಮತ್ತು ಗಲ್ಸ್, ಅಗಸಗಾದ ಎಸ್.ಎಲ್.ವಿ.ಕೆ. ಪ್ರೌಢಶಾಲೆ, ಸಿದ್ಧರಾಮೇಶ್ವರ ಪ್ರೌಢ ಶಾಲೆಯ ಭಾರತ ಸೇವಾದಳ, ಗಾಂಧೀ ನಗರದ ನವೋದಯ ಶಾಲೆಯ ಸ್ಕೌಟ್ಸ್, ಲಿಟಲ್ ಸ್ಕಾಲರ್ಸ ಶಾಲೆಯ ಗೈಡ್ಸ್, ಸೇಂಟ್ಸ್ ಪೌಲ್ಸ್ ಪ್ರೌಢಶಾಲೆ, ವನಿತಾ ಕನ್ನಡ ಮಾಧ್ಯಮ ಪ್ರೌಢಶಾಲೆ, ಆರ್ಮಿ ಪಬ್ಲಿಕ ಸ್ಕೂಲ್, ಮಹಾಂತೇಶ ನಗರದ ಲವ ಡೆಲ್ ಸೆಂಟ್ರಲ್ ಶಾಲೆ, ಶಹಾಪುರ ಸರಸ್ವತಿ ಸರ್ಕಾರಿ ಪ್ರೌಢ ಶಾಲೆ, ಬೆಳಗಾವಿ ಪಬ್ಲಿಕ್ ಸ್ಕೂಲ, ಜಿ.ಎ. ಪ್ರೌಢ ಶಾಲೆ, ಮಹೇಶ್ವರಿ ಅಂಧ ಮಕ್ಕಳ ಶಾಲಾ ಮಕ್ಕಳು ಶಿಸ್ತು ಬದ್ಧವಾಗಿ ಪಥ ಸಂಚಲನದಲ್ಲಿ ಸಾಗಿದವು.
ಸನ್ಮಾನ: ಅಂತರಾಷ್ಟ್ರೀಯ ಪ್ಯಾರಾ ಥ್ರೋ ಬಾಲ್/ಬಾಸ್ಕೆಟಬಾಲ್‌ನಲ್ಲಿ ಚಿನ್ನದ ಪದಕ ಪಡೆದ ಸೂರಜ ಧಾಮಣೇಕರ, ಈರಣ್ಣ ಹೊಂಡಪ್ಪನವರ, ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಪಡೆದ ಅಮನ ಸುನಗಾರ, ರಾಷ್ಟ್ರ ಮಟ್ಟದ ಸಾಹಸ ಕ್ರೀಡೆಯಲ್ಲಿ ಪದಕ ಪಡೆದ ಪೃಕೃತಿ ಅಲಗೂಡೇಕರ, ಅಂತರಾಷ್ಟ್ರೀಯ ಮಟ್ಟದ ಮ್ಯಾರಾಥಾನ್/ಈಜು/ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ಡಾ. ಸತೀಶ ಚೌಲಿಗೇರ, ಅಂಗಾಂಗ ದಾನ ಮಾಡಿದ ಫಕೀರಗೌಡ ಪಾಟೀಲ ಅಭಿಷೇಕ ವಾಲಿಶೆಟ್ಟಿ ಅವರ ಕುಟುಂಬಸ್ಥರಿಗೆ ಇದೇ ಸಂದರ್ಭದಲ್ಲಿ ಸಚಿವರು ಹಾಗೂ ಗಣ್ಯರು ಸನ್ಮಾನಿಸಿದರು.
ಉಪಸ್ಥಿತಿ: ಕಾರ್ಯಕ್ರಮದಲ್ಲಿ ಬೆಳಗಾವಿ ಉತ್ತರ ಶಾಸಕರಾದ ರಾಜು (ಆಸಿಫ್) ಸೇಠ, ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ನಗರಸೇವರಕು, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೋಲಿಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾ ಶಂಕರ ಗುಳೇದ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ಕಾಲೇಜು ವಿಧ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.