ಬಿಸಿಲಿನ ಬೇಗೆ: ಜನ, ಜಾನುವಾರುಗಳಿಗೆ ಮರಗಳೇ ಆಶ್ರಯ

ಬಿಸಿಲಿನ ಪ್ರಮಾಣ ಹೆಚ್ಚಾದ ನಂತರ ಮನುಷ್ಯರ ಜೊತೆ ಜಾನುವಾರುಗಳ ಸಹ ಮರದ ನೆರಳಿಗೆ ವಿಶ್ರಾಂತಿ ಪಡೆಯುತ್ತವೆ.

ಸಂಬರಗಿ 23: ಗಡಿ ಗ್ರಾಮಗಳಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಹೆಚ್ಚಾಗಿ ಜನರಿಗೆ ಹಾಗೂ ಜಾನುವಾರುಗಳಿಗೆ ಬಿಸಿಲಿನ ಬೇಗೆ ತಡೆಯಲಾರದಾಗಿದೆ. ಮುಂಜಾನೆ 11ರಿಂದ ಸಾಯಂಕಾಲ 5ಗಂಟೆಯವರೆಗೆ ಬಿಸಿಲಿನಿಂದ ಮನುಷ್ಯರ ಜೊತೆ ಜಾನುವಾರುಗಳು ಸಹ ಗಿಡ ಮರಗಳ ಆಶ್ರಯ ಪಡೆಯುತ್ತಿದ್ದಾರೆ. ಸುಮಾರು 5ಗಂಟೆಗಳ ಕಾಲ ಬಿಸಿಲಿನ ಸಲುವಾಗಿ ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸುತ್ತಾರೆ. 

ಕಳೆದ ಒಂದು ತಿಂಗಳಿನಿಂದ ನೀರಿಲ್ಲದೆ ಬತ್ತಿರುವ ಹಿಂಗಾರಿ ಬೆಳೆಗಳಾದ ಜೋಳ, ಕಡಲೆ, ಗೋಧಿ ಸೇರಿದಂತೆ ಅನೇಕ ಬೆಳೆಗಳನ್ನು ಕೊಯ್ಲು ಮಾಡಿದ ನಂತರ ಸಂಪೂರ್ಣ ಜಮೀನು ಬರಡು ಕಾಣುತ್ತಿದೆ. ಜಾನುವಾರುಗಳಿಗೆ ಮೇವಿಲ್ಲ, ರೈತರಿಗೆ ಕುಡಿಯಲು ನೀರಿಲ್ಲ ಇಂತಹ ಸ್ಥಿತಿ ಎದುರಿಸಬೇಕಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ಮಾಡಿದ ಕೂಲಿಗಾರರಿಗೆ ಕಳೆದ ಮೂರು ತಿಂಗಳಿನಿಂದ ವೇತನ ಪಾವತಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಗಡಿ ಭಾಗದ ಜನರು ಸಿಕ್ಕುಹಾಕಿಕೊಂಡು ಬಳಲುತ್ತಿದ್ದಾರೆ. ರೈತರು ಬೆಳಗಿನ ಜಾವ ತಮ್ಮ ಜಾನುವಾರುಗಳನ್ನು ಮೇಯಲು ಬಿಡುತ್ತಾರೆ. 11 ಗಂಟೆ ಆದನಂತರ ಜಾನುವಾರುಗಳು ಬಿಸಿಲಿನಿಂದ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತವೆ. 

ಸಂಬರಗಿ ಶಿರೂರ, ಪಾಂಡೇಗಾಂವ, ಖಿಳೇಗಾಂವ, ಅರಳಿಹಟ್ಟಿ, ಮಲಾಬಾದ, ಜಂಬಗಿ, ಮದಬಾವಿ ಸೇರಿದಂತೆ ಈ ಭಾಗದ ಎಲ್ಲಾ ಗ್ರಾಮಗಳಲ್ಲಿ ಜಮೀನುಗಳು ಖಾಲಿ ಖಾಲಿ ಕಾಣುತ್ತಿವೆ. ಬಿಸಿಲಿನ ಪ್ರಮಾಣ ಹೆಚ್ಚು ಕಾಣುತ್ತಿದೆ. ತಾಪಕ್ಕೆ ವಯೋವೃದ್ಧರಿಗೆ, ಚಿಕ್ಕ ಮಕ್ಕಳಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಒಟ್ಟಿನಲ್ಲಿ ಗಿಡಮರಗಳು ಮಾನವನಿಗಷ್ಟೇ ಅಲ್ಲ, ಪ್ರಾಣಿ ಪಕ್ಷಿಗಳಿಗೂ ಆಶ್ರಯ ಆಧಾರ. ಅವುಗಳ ಮಹತ್ವವನ್ನರಿತು ಮಾನವ ಪರಿಸರ, ಗಿಡಮರ ರಕ್ಷಣೆಗೆ ಮುಂದಾಗಬೇಕಿದೆ. ಭೂಮಿಯಲ್ಲಿ ತಂಪು ಹಿಡಿದಿಡುವ ಮರ, ಕೆರೆ ಬಾವಿಗಳ ರಕ್ಷಣೆಗೆ ಮುಂದಾಗಬೇಕಿದೆ.