ಶ್ರೀಜಗದ್ಗುರು ರೇಣುಕಾಚಾರ್ಯರ ಜಯಂತಿ ಉತ್ಸವ

Sri Jagadguru Renukacharya's birth anniversary festival

ಶ್ರೀಜಗದ್ಗುರು ರೇಣುಕಾಚಾರ್ಯರ ಜಯಂತಿ ಉತ್ಸವ 

ಬೀಳಗಿ, 17; ಭಾವೈಕ್ಯತೆ ಮತ್ತು ಆಧ್ಯಾತ್ಮ ಮನುಕೂಲದ ಜೀವಾಳ. ಸಾತ್ವಿಕ ತಾತ್ವಿಕ ಹಿತಚಿಂತನಗಳನ್ನು ಬೆಳೆಸುವುದರ ಮೂಲಕ ಭಾವೈಕ್ಯತೆಯ ಸೇತುವೆಯನ್ನು ಕಟ್ಟಿದ ಕೀರ್ತಿಯು ಶ್ರೀಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಶಾಸಕ ಎಚ್ ಆರ್‌.ನಿರಾಣಿ ಹೇಳಿದರು. 

     ಸ್ಥಳೀಯ ಕಲ್ಮಠದಲ್ಲಿ ಅಖಿಲ ಭಾರತ ಜಂಗಮ ಕ್ಷೇಮಾಭಿವೃದ್ಧಿ ಸಂಸ್ಥೆ ಬೀಳಗಿ  ಆಯೋಜಿಸಿದ ಶ್ರೀಜಗದ್ಗುರು ರೇಣುಕಾಚಾರ್ಯರ ಜಯಂತಿ ಉತ್ಸವ ಕಾರ್ಯಕ್ರಮದ ಭಾವೈಕ್ಯ ಸಂಗಮ್ -2025 ಕಾರ್ಯಕ್ರಮ ಉದ್ಧೇಶಿಸಿ ಅವರು ಮಾತನಾಡಿದರು. 

     ಸಮಾಜದಲ್ಲಿ ಶಾಂತಿ ನೆಮ್ಮದಿಯ ಬದುಕು ತಂದು ಕೊಡುವಲ್ಲಿ ಶ್ರೀರೇಣುಕಾಚಾರ್ಯರು ಕೊಟ್ಟ ಕೊಡುಗೆ ಅಪಾರ. ಇವರ ಆಚಾರ-ವಿಚಾರ ತತ್ವಗಳನ್ನು ತಿಳಿದುಕೊಳ್ಳಬೇಕಾಗಿದೆ. ರೇಣುಕಾಚಾರ್ಯರು ದೊಡ್ಡ ವ್ಯಕ್ತಿತ್ವವನ್ನು ಮೆರೆದವರು. ಮಾನವ ಜನಾಂಗಕ್ಕೆ ಒಳ್ಳೆಯದನ್ನು ಬಯಸಿದವರು, ಇಂದಿನ ವೀರಶೈವ ಲಿಂಗಾಯತ ಸಮಾಜಕ್ಕೆ ಭದ್ರ ಬುನಾದಿಯನ್ನು ಹಾಕಿ ಕೊಟ್ಟವರು ಅವರ ತತ್ವ ಸಿದ್ಧಾಂತಗಳು ಪ್ರತಿಯೊಬ್ಬರಲ್ಲಿ ಮನ ಮುಟ್ಟುವಂತೆ ಮಾಡಬೇಕಾಗಿದೆ ಎಂದರು. 

     ಗಿರಿಸಾಗರ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಜೀ ಮಾತನಾಡಿ ಶ್ರೀರೇಣುಕಾಚಾರ್ಯರು ಲಿಂಗಾಯತ ಧರ್ಮದ ಮೂಲತಃ ಸಿದ್ಧಾಂತಗಳನ್ನು ಪ್ರತಿಪಾದಿಸಲು ಮತ್ತು ಶೈವ ಪರಂಪರೆಯನ್ನು ಬಲಪಡಿಸಲು ತಮ್ಮ ಜೀವನವನ್ನು ಮೀಸಲಾಗಿಟ್ಟಿದ್ದರು. ಬೀಳಗಿಯ ನೆಲದಲ್ಲಿ ಆಚಾರ್ಯ ಪರಂಪರೆಯ ಬಗ್ಗೆ ನಾನು ಪಟ್ಟಾಧಿಕಾರ ಆಗುವುದಕ್ಕಿಂತ ಮುಂಚೆ ಬೆರಳೆನಿಕೆಯಷ್ಟು ಜನಕ್ಕೆ ಗೊತ್ತಿತ್ತು. ಆದ್ದರಿಂದ ಅದರ ಮೂಲ ಯಾವುದು ಅಂತ ತಿಳಿದುಕೊಳ್ಳಬೇಕಾಗಿದೆ. ಒಂದು ಗಿಡಕ್ಕೆ ಮೂಲ ಅದರ ಬೇರು ಎಷ್ಟು ಮುಖ್ಯವಾಗಿದೇವೋ, ಅದೇ ರೀತಿಯಾಗಿ ವೀರಶೈವ ಲಿಂಗಾಯತ ಧರ್ಮದ ಮೂಲ ಬೇರು ಆದಿ ಜಗದ್ಗುರು ಶ್ರೀರೇಣುಕಾಚಾರ್ಯರು. ಅವರ ಪಾತ್ರವೂ ಅಷ್ಟೆ ಮುಖ್ಯವಾಗಿದೆ ಎಂದರು. 

       ನಮ್ಮ ದೇಶದ ಸಂಸ್ಕೃತಿ ಪರಂಪರೆಯಲ್ಲಿ ಎಲ್ಲ ಸಮುದಾಯದ ಜನರು ಜಂಗಮ ಸಮಾಜಕ್ಕೆ ಅಪಾರ ಗೌರವ ನೀಡಿದ್ದಾರೆ. ಅದನ್ನು ಉಳಿಸಿಕೊಂಡು ಹೋಗಬೇಕಾಗಿದೆ. ಜಂಗಮ ಸಮಾಜದ ಯುವಕರು ದುಶ್ಚಟಗಳಿಗೆ ಬಲಿಯಾಗದೆ ಸಮಾಜದಲ್ಲಿ ಆದರ್ಶರಾಗಬೇಕು. ನಮ್ಮ ದಿನ ನಿತ್ಯದ ದಾಸೋಹ ಪದ್ದತಿಯನ್ನು ಯಾರು ಮರೆಯಬೇಡಿ. ಸಮಾಜವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮುನ್ನೆಲೆಗೆ ಬರಬೇಕಾದರೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು. 

  ಸಿಂದಗಿಯ ಸಾರಗಮಠ, ಗಚ್ಚಿನಮಠದ ಉತ್ತಾರಾಧಿಕಾರಿಯಾಗಿ ನೇಮಕಗೊಂಡ ಪ್ರಯುಕ್ತ ಬೀಳಗಿ ಎಲ್ಲ ಶ್ರೀಗಳು ಮತ್ತು ಜಂಗಮ ಸಮಾಜ ಬಾಂಧವರಿಂದ ಕೊಣ್ಣೂರ ಹೊರಗಿನಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಗೌರವ ಅಭಿನಂದನಾ ಸನ್ಮಾನ ಮಾಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವ ಸನ್ಮಾನ ಮಾಡಲಾಯಿತು. 

     ಕಲ್ಮಠದ ಗುರುಪಾದ ಶಿವಾಚಾರ್ಯ ಶ್ರೀಗಳು, ಬೂದಿಹಾಳ ಪ್ರಭು ಮಹಾಸ್ವಾಮಿಜೀ, ಸೋಮಪ್ಪಯ್ಯನ ಮಠದ ಚನ್ನಬಸವ ಮಹಾಸ್ವಾಮಿಜೀ, ಕುಂದರಗಿ ಚರಂತಿಮಠದ ವೀರ ಸಂಗಮೇಶ್ವರ ಶಿವಾಚಾರ್ಯ ಶ್ರೀಗಳು, ಬಾಡಗಿ ಬಕ್ಕಪ್ಪಯ್ಯ ಮಹಾಸ್ವಾಮಿಜೀ,  ಪ.ಪಂ ಅಧ್ಯಕ್ಷ ಮುತ್ತು ಬೋರ್ಜಿ, ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ್ ಉಮಚಗಿಮಠ, ತಾಲೂಕಾ ಅಧ್ಯಕ್ಷ ಈರಯ್ಯ ಗೋಠೆ, ಗುರುಸಿದ್ದೇಶ್ವರ ಬ್ಯಾಂಕ್ ಅಧ್ಯಕ್ಷ   ಶ್ರೀಶೈಲ   ಯಂಕಂಚಿಮಠ, ಬಾಪೂಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮುತ್ತು ವಸ್ತದ  ಇತರರು ಇದ್ದರು.