ಸಿರುಗುಪ್ಪ: ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರೀಶೀಲನಾ ಸಭೆ

Siruguppa: Taluk Level Guarantee Schemes Progress Review Meeting


ಸಿರುಗುಪ್ಪ: ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರೀಶೀಲನಾ ಸಭೆ 

ಬಳ್ಳಾರಿ 03: ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ ಅವರು ಹೇಳಿದರು. 

ಸಿರುಗುಪ್ಪ ತಾಲ್ಲೂಕು ಪಂಚಾಯತ್ ವತಿಯಿಂದ ಸಿರುಗುಪ್ಪ ಪಟ್ಟಣದ ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ ಸೋಮವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರೀಶೀಲನೆ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. 

ತಾಲ್ಲೂಕಿನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರುಗಳು ಸಹ ಗ್ಯಾರಂಟಿ ಯೋಜನೆಗಳ ಬಗ್ಗೆ ತಮ್ಮ-ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು. 

ಆಧಾರ್ ಕಾರ್ಡ್‌, ರೇಷನ್ ಕಾರ್ಡ್‌ ಮತ್ತು ಜಿಎಸ್‌ಟಿ ಇತರೆ ತಾಂತ್ರಿಕ ತೊಂದರೆಗಳಿಂದ ವಂಚಿತರಾಗಿರುವ ಅರ್ಹ ಫಲಾನುಭವಿಗಳನ್ನು ಗ್ಯಾರಂಟಿ ಯೋಜನಾ ಸಮಿತಿ ಸದಸ್ಯರುಗಳು ತಮ್ಮ ಕ್ಷೇತ್ರದಲ್ಲಿ ಗುರುತಿಸಿ ಯೋಜನೆಯ ಸೌಲಭ್ಯವನ್ನು ಒದಗಿಸಲು ಕಾರ್ಯಪ್ರವೃತರಾಗಬೇಕು ಎಂದು ನಿರ್ದೇಶನ ನೀಡಿದರು. 

ಬಳಿಕ ಶಾಸಕರು ಅನ್ನಭಾಗ್ಯ, ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ ಯೋಜನೆ ಮತ್ತು ಯುವನಿಧಿ ಸೇರಿದಂತೆ ಐದು ಗ್ಯಾರಂಟಿ ಯೋಜನೆಯ ಸದುಪಯೋಗ ಪಡೆದುಕೊಂಡ ಫಲಾನುಭವಿಗಳ ಅಂಕಿ-ಸಂಖ್ಯೆಗಳ  ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದರು. 

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳನ್ನು ಹಳ್ಳಿ ಮಟ್ಟದಲ್ಲಿಯೂ ತಲುಪಿಸುವಂತಾಗಲು ಹಾಗೂ ಫಲಾನುಭವಿಗಳು ವಂಚಿತರಾಗದಂತೆ ನೋಡಿಕೊಳ್ಳಬೇಕು. ಈ ಕುರಿತು ಸಾಕಷ್ಟು ಪ್ರಚಾರ ನೀಡಬೇಕು ಎಂದು ಅವರು ತಿಳಿಸಿದರು. 

ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಿರುಗುಪ್ಪ ತಾಲ್ಲೂಕು ಅಧ್ಯಕ್ಷ ಮಾರುತಿ ರೆಡ್ಡಿ ವರ​‍್ರಸಾದ್,  ಉಪಾಧ್ಯಕ್ಷ ಕರಿಬಸಪ್ಪ,  ಸದಸ್ಯರುಗಳಾದ  ಎಸ್‌.ಎಂ.ನಾಗರಾಜ ಸ್ವಾಮಿ, ಪಾಲಾಕ್ಷಗೌಡ, ವೆಂಕಟರೆಡ್ಡಿ, ಚನ್ನಬಸವ, ಕೆ.ವೀರೇಶ್ ನಾಯ್ಕ್‌, ಜಿ.ಬಸವನಗೌಡ, ಬಿ.ಎಂ.ಅಪ್ಪಾಜಿ ನಾಯಕ, ಬಿ.ಕೆ.ಹಸೇನ್, ಡಿ.ದಾನೇಶ್ವರಿ, ಅಗ್ರಹಾರ ಗೋವಿಂದ, ಎಸ್‌.ಶ್ಯಾಂ ಸುಂದರ್, ಬಿ.ದೊಡ್ಡ ಪರಮೇಶ್ವರ​‍್ಪ, ಸಿರುಗುಪ್ಪ ತಾಪಾಂ ಇಒ ಪವನ ಕುಮಾರ್ ಎಸ್ ದಂಡಪ್ಪನವರ, ಗ್ರೇಡ್‌-2 ತಹಶೀಲ್ದಾರರಾದ  ಸತ್ಯಮ್ಮ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು, ಉದ್ಯೋಗ ವಿನಿಮಯ ಕೇಂದ್ರ, ಜೆಸ್ಕಾಂ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ, ಸಿರುಗುಪ್ಪ ವಿಭಾಗ ಸಿಬ್ಬಂದಿ, ಆಹಾರ ಶಿರಸ್ತೇದಾರರು ಸೇರಿದಂತೆ ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.