ಸಿಂದಗಿ: ಶಾಲೆ ಅನುಮತಿ ಪತ್ರ ಮಾರಾಟದ ವಸ್ತುವಾಗದಿರಲಿ: ವಿಜಯಕುಮಾರ ಪತ್ತಾರ ವಿಶೇಷ ವರದಿ

ವಿಜಯಕುಮಾರ ಪತ್ತಾರ

ಸಿಂದಗಿ 16: ಮಕ್ಕಳ ಹಕ್ಕುಗಳು ಪ್ರಚಲಿತದಲ್ಲಿ ಬರಲು ಶಿಕ್ಷಣ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳ ಹಕ್ಕುಗಳಲ್ಲಿ ಶಿಕ್ಷಣವು ಒಂದಾಗಿದೆ. ಶಿಕ್ಷಣ ನೀಡುವಲ್ಲಿ ಸರಕಾರದಷ್ಟೇ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದದಾಗಿದೆ.

ಖಾಸಗಿ ಸಂಘ ಸಂಸ್ಥೆಗಳು ಅನುದಾನರಹಿತವಾಗಿ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನ ಅನುಮತಿ ಪಡೆಯಲು ಮೊದಲು ಸರಳರೀತಿಯಾಗಿತ್ತು. ಮಕ್ಕಳ ಹಕ್ಕುಗಳು ಜಾರಿಗೆ ಬಂದ ಮೇಲೆ ಶಾಲೆಗಳ ಅನುಮತಿ ಪಡೆಯಲು ಕಠಿಣವಾಗಿದೆ.

ಪೂರ್ವಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಪ್ರಾರಂಭಿಸಲು ಮೂಲಭೂತ ಸೌಕರ್ಯಗಳೊಂದಿಗೆ ಸುಸಜ್ಜಿತ ಕಟ್ಟಡವಿರಬೇಕು. ಆಗ ಮಾತ್ರ ಅನುಮತಿ ಪಡೆಯಲು ಸಾಧ್ಯ. ಆದರೆ ಇಂದು ಕೆಲವೊಂದುಕಡೆಗೆ ನಿಯಮಗಳನ್ನು ಗಾಳಿಗೆ ತೂರಿ ಶಾಲೆ ನಡೆಸಲು ಅನುಮತಿ ನೀಡಲಾಗುತ್ತಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ ಮೂಲಭೂತ ಸೌಕರ್ಯಗಳಿಲ್ಲದ ಶಾಲೆಗಳಿಗೆ ಪೂರ್ವಪ್ರಾಥಮಿಕ,  ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ನಡೆಸಲು ಅನುಮತಿ ನೀಡಿದೆ ಎಂದು ಜಿಲ್ಲಾ ಪಂಚಾಯತಿ ಸದಸ್ಯರು ಸಾಮಾನ್ಯ ಸಭೆಯಲ್ಲಿ ಆರೋಪಮಾಡಿದ್ದರು. 

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸಿಂದಗಿ ತಾಲೂಕಿನಲ್ಲಿ ಅನುದಾನ ರಹಿತವಾಗಿ ಪೂರ್ವಪ್ರಾಥಮಿಕ ಶಾಲೆ ಪ್ರಾರಂಭಿಸಲು 7, ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಲು 16 ಹಾಗೂ  ಪ್ರೌಢಶಾಲೆಗಳು ಅನುಮತಿ ಪಡೆಯಲು 3 ಪ್ರಸ್ತಾವನೆಗಳನ್ನು ಸಂಘ-ಸಂಸ್ಥೆಯ ಮುಖ್ಯಸ್ಥರು ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಿಂದಗಿ ಈ ಕಚೇರಿಯಲ್ಲಿ ಸಲ್ಲಿಸಿದ್ದಾರೆ. 

ವಿದ್ಯಾರ್ಥಿಗಳಿಗೆ ಪ್ರತ್ಯೆಕ ಸೌಚಾಲಯ, ಕುಡಿಯುವ ನೀರು, ಆಟದ ಮೈದಾನ, ಸುಸಜ್ಜಿತ ಕಟ್ಟಡ ಸೇರಿದಂತೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಸಂಸ್ಥೆಗಳಿಗೆ ಮಾತ್ರ ಶಾಲೆ ನಡೆಸಲು ಅನುಮತಿ ನೀಡಬೇಕು ಎಂದು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಬೇಕು ಎಂಬುದು ಶೈಕ್ಷಣಿಕ ಹಿತಾಶಕ್ತಯುಳ್ಳವರ ಒತ್ತಾಶೆಯಾಗಿದೆ.

ಸಿಂದಗಿ ತಾಲೂಕಿನಲ್ಲಿ ಅನಧಿಕೃತ ವಸತಿ ಶಾಲೆ ಮತ್ತು ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ನಡೆಯುತ್ತಿವೆ. ಕೋಚಿಂಗ್ ಹೆಸರಿನಲ್ಲಿ ನಡೆಯುತ್ತಿರುವ ಇಂಥ ಶಾಲೆಗಳನ್ನು ಕ್ಷೇತ್ರಶಿಕ್ಷಣಾಧಿಕಾರಿಗಳು ಬಂದ ಮಾಡಬೇಕು. ಅಂಥವರ ಮೇಲೆ ಕಠಿಣ ಕ್ರಮಕೈಕೊಳ್ಳಿ. ಶಿಕ್ಷಣ ನೀತಿ ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಬೇಕು ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.