ಶಿವಬಸವ ಸ್ವಾಮಿಗಳ 79 ನೇ ಮತ್ತು ಲಿಂ. ಶಿವಲಿಂಗ ಸ್ವಾಮಿಗಳ 16 ನೇ ಪುಣ್ಯ ಸ್ಮರಣೋತ್ಸವ

Shivbasava Swamigala 79th and Lim. 16th Punya Samranotsava of Shivlinga Swami

ಶಿವಬಸವ ಸ್ವಾಮಿಗಳ 79 ನೇ ಮತ್ತು ಲಿಂ. ಶಿವಲಿಂಗ ಸ್ವಾಮಿಗಳ 16 ನೇ ಪುಣ್ಯ ಸ್ಮರಣೋತ್ಸವ  

ಹಾವೇರಿ  07: ದೇಶದ ಎಲ್ಲ ಕಡೆ ಇರುವ ಜ್ಯೋರ್ತಿಲಿಂಗಗಳು ಕರ್ನಾಟಕದಲ್ಲಿ ಮಾತ್ರ ಇಲ್ಲ, ಆದರೆ ಕನ್ನಡ ನಾಡಿನ ಮಠಮಾನ್ಯಗಳು ಮಾಡುವ ಸಮಾಜೋಧಾರ್ಮಿಕ ಕಾರ್ಯವು, ಜ್ಯೋರ್ತಿಲಿಂಗಕ್ಕಿಂತ ಹಿರಿದಾಗಿದ್ದು, ಸರ್ವಸಮಾಜದ ಹಿತವನ್ನೇ ಬಯಸುವ ಕಾಮಧೇನುವಾಗಿವೆ ಎಂದು ಶಿರ್ಶಿ ಬಣ್ಣದಮಠದ ಅಟವಿ ಶಿವಲಿಂಗ ಸ್ವಾಮೀಜಿ ಹೇಳಿದರು. 

          ನಗರದ ಶಿವಬಸವೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಂಡಿರುವ ಹುಕ್ಕೇರಿಮಠದ ಲಿಂ. ಶಿವಬಸವ ಸ್ವಾಮಿಗಳ 79 ನೇ ಮತ್ತು ಲಿಂ. ಶಿವಲಿಂಗ ಸ್ವಾಮಿಗಳ 16 ನೇ ಪುಣ್ಯ ಸ್ಮರಣೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

        ಗುರು,ಲಿಂಗ, ಜಂಗಮಕ್ಕೆ ಸಾವಿಲ್ಲ. ಲಿಂಗಾಂಗ ಸಾಮರಸ್ಯಕ್ಕೆ ಷಟ್‌ಸ್ಥಳಗಳ ದಾರೀದೀಪ. ಆಧ್ಯಾತ್ಮಿಕ ಸಾಧನೆಯಲ್ಲಿ ಷಟ್ ಸ್ಥಳಗಳನ್ನು ಸಾಧಿಸಿ ಗುರುವಿನಲ್ಲಿ ಐಕ್ಯವಾಗುತ್ತಾನೆ.12 ನೇ ಶತಮಾನದ ಶರಣ ಶರಣೆಯರು ಈ ಸಾಧನೆಯನ್ನು ಮಾಡಿದ ಮಹಾನ್ ಮಾನವತಾವಾದಿಗಳು. ಈ ದಾರಿಯಲ್ಲಿಯೇ ನಮ್ಮ ಬದುಕನ್ನು ಸಾಗಿಸಿದವರು ಹುಕ್ಕೇರಿಮಠದ ಲಿಂ. ಶಿವಬಸವ ಮತ್ತು ಲಿಂ. ಶಿವಲಿಂಗ ಶ್ರೀಗಳು ಆಗಿದ್ದರು. ಅವರ ಬದುಕೇ ಸ್ವಾಮಿ ಪರಂಪರೆಗೆ ಆದರ್ಶವಾಗಿದೆ ಎಂದು ಹೇಳಿದರು. 

       ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಸವಿತಾ,ಮಡಿವಾಳ,ಅಲೆಮಾರಿ ಮತ್ತು ಅರೆಅಲೆಮಾರಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಮಠದ ಮಾತನಾಡಿ ಅನ್ನ, ಅಕ್ಷರ, ಅರಿವಿನ ದಾಸೋಹವನ್ನು ಬಹುಹಿಂದಿನಿಂದ ಕಾಲದಿಂದಲೇ ಮಾಡಿ, ಒಂದು ಸರ್ಕಾರವು ಮಾಡುವ ಬಹು ದೊಡ್ಡ ಕಾರ್ಯಗಳನ್ನು ಮಠಮಾನ್ಯಗಳು ಮಾಡಿವೆ. ಇಂಥಹ ಪರಂಪರೆಯ ಬಂದ ಪ್ರತಿಯೊಬ್ಬನೂ ಸಮಾಜದ ಋಣ ತೀರಿಸುವ ಜವಾಬ್ದಾರಿ  ನಮ್ಮ ಮೇಲಿದೆ. ಕಾಯಕವೇ ಕೈಲಾಸ ಎಂಬ ಉಕ್ತಿಯೂ ನಮ್ಮ ನುಡಿ ಹಾಗೂ ನಡೆಯಲ್ಲಿಯೂ ಇರಬೇಕು ಎಂದು ಹೇಳಿದರು. 

   ನಗರಸಭೆಯ ಅಧ್ಯಕ್ಷೆ ಶಶಿಕಲಾ ಮಾಳಗಿ ಮಾತನಾಡಿದರು.                                   ಇದೇ ಸಂದರ್ಭದಲ್ಲಿ ನೂತನ ಪೀಢಾಧಿಪತಿಗಳಾದ ಚಿಕ್ಕತೊಟ್ಟಲಕೆರೆಯ ಅಟವಿ ಮಲ್ಲಿಕಾರ್ಜುನ ಶ್ರೀಗಳನ್ನು, ಮತ್ತು ಗುಬ್ಬಿ ತೊರೆಮಠದ ಚಂದ್ರಶೇಖರ ದೇಶಿಕೇಂದ್ರ ಇವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಹೂವಿನಶಿಗ್ಲಿಯ ವಿರಕ್ತಮಠದ ಗುರುಕುಲದ ವಿದ್ಯಾರ್ಥಿಗಳು ಮಲ್ಲಕಂಬ ಪ್ರದರ್ಶನವನ್ನು ನೀಡಿದರು. ಹಲವಾರು ಪಿರಮಿಡ್ ಮಾದರಿಯ ಆಸನಗಳನ್ನು ಪ್ರದರ್ಶಿಸಿ, ನೆರೆದ ಜನರ ಮನ ಸೂರೆಗೊಂಡರು. 

        ಸಮಾರಂಭದಲ್ಲಿ ಹುಕ್ಕೇರಿಮಠದ ಮಠಾಧ್ಯಕ್ಷರಾದ ಸದಾಶಿವ ಸ್ವಾಮೀಜಿ,ಅನ್ನಪೂರ್ಣ ಕೂಲಕೂರ, ಶಿವಯೋಗಿ ಮಾಮಲೇಪಟ್ಟಣಶೆಟ್ಟರ, ಪರಶುರಾಮ ಹರ್ಲಾಪುರ, ಡಾ. ತ್ತಿವೇಣಿ ಹೆಗ್ಗೇರಿ, ಶರಣಬಸವ ಅಂಗಡಿ,ಶಿವಪುತ್ರ​‍್ಪ ತುಪ್ಪದ, ಲಕ್ಷ್ಮೀ ಗಾಮನಗಟ್ಟಿ, ಅಶೋಕ ಮಾಗನೂರ,  ತೆಲಂಗಾಣದ ವಿರೂಪಾಕ್ಷ ದೇವರು, ಮಾಂತಣ್ಣ ಸುರಳಿಹಳ್ಳಿ, ಲಲಿತಕ್ಕ ಹೊರಡಿ, ಅಮೃತ್ಮಮ್ಮ ಶೀಲವಂತರ.ಗಣೇಶ ಮುಷ್ಠಿ, ಗಂಗಣ್ಣ ಮಳಗಿ ಮತ್ತಿತರರು ಉಪಸ್ಥಿತರಿದ್ದರು.   

             ಶಿವರುದ್ರಯ್ಯ ಗೌಡಗಾಂವ್ ಪ್ರಾರ್ಥಿಸಿದರು. ತಮ್ಮಣ್ಣ ಮುದ್ದಿ  ಸ್ವಾಗತಿಸಿದರು. ಶಿವಬಸವ ಮರಳಿಹಳ್ಳಿ ಮತ್ತು ಎಚ್‌.ಕೆ. ಆಡಿನ ನಿರೂಪಿಸಿದರು. ಕೊನೆಯಲ್ಲಿ ಬಿ. ಬಸವರಾಜ  ವಂದಿಸಿದರು.