ಲೋಕದರ್ಶನ ವರದಿ
ಶಿರಹಟ್ಟಿ 19: ಕೋಮು ಸೌಹಾರ್ದತೆಯ ಹರಿಕಾರ ಕತರ್ೃ ಜಗದ್ಗುರು ಫಕ್ಕೀರೇಶ್ವರ ಜಾತ್ರಾ ಮಹೋತ್ಸವದ ಎರಡನೇ ದಿನವಾದ ರವಿವಾರ ಸಂಜೆ 5.30 ಗಂಟೆಗೆ ಕಡುಬಿನ ಕಾಳಗವು ಗಜರಾಜನ ಸ್ವಾಗತ, ಒಂಟೆಯ ಪಥಸಂಚಲನ, ನಗಾರಿಯ ನಿನಾದ, ನಂದಿಕೋಲಿನ ಮೆರವಣಿಗೆ, ಡೊಳ್ಳು ಕುಣಿತ ಸೇರಿದಂತೆ ಮುಂತಾದ ಸಪ್ತ ಸ್ವರಗಳ ನಿನಾದದೊಂದಿಗೆ ಜ. ಫಕ್ಕೀರ ಸಿದ್ದರಾಮ ಶ್ರೀಗಳು ಅಶ್ವರೋಢರಾಗಿ ಬೆಲ್ಲದ ಚೂರುಗಳನ್ನು ಭಕ್ತರ ಕಡೆಗೆ ಎಸೆಯುವುದರ ಮೂಲಕ ಸಂಭ್ರಮದಿಂದ ಜರುಗಿತು.
ಶ್ರೀಗಳು ಎಸೆದ ಬೆಲ್ಲದ ಚೂರುಗಳನ್ನು ಭಕ್ತರು ಪ್ರಸಾದ ರೂಪದಲ್ಲಿ ಸ್ವೀಕರಿಸಿದರು. ಶ್ರೀಗಳ ಪೀಠದ ಪರಂಪರೆಯಂತೆ ಮಠದ ಆವರಣದಲ್ಲಿ ಮೂರು ಸುತ್ತು ಗದ್ದುಗೆಗಳ ಪ್ರದಕ್ಷಿಣೆ ಹಾಗೂ ಕೊನೆಯ ಎರಡು ಸುತ್ತುಗಳ ಮಠದ ಹೊರಗಡೆಯ ರಥದ ಬೀದಿಯಲ್ಲಿರುವ ಭಕ್ತರ ಕಡೆಗೆ ಬೆಲ್ಲದ ಚೂರುಗಳನ್ನು ಎಸೆದು ಸಂಭ್ರಸಿದರು.
ಕೊನೆಯ ಪರಂಪರೆಯಂತೆ ಮುಸ್ಲಿಂ ಕುಟುಂಬದ ಅತ್ತಾರ ಮನೆತನದವರು ಶ್ರೀಗಳಿಗೆ ಗುಲಾಲ ಎರಚುತ್ತಿದ್ದಂತೆ ಕಡುಬಿನ ಕಾಳಗಕ್ಕೆ ತೆರೆಬಿದ್ದಿತು. ಅಲ್ಲದೇ ಜಾತ್ರೆಯ ನಿಮಿತ್ಯ ಜನರ ಮನರಂಜನೆಗಾಗಿ ದೊಡ್ಡ ಪ್ರಮಾಣದ ಜೋಕಾಲಿಗಳು, ರೈಲು ಬಂಡಿಗಳು, ಜಾರು ಬಂಡಿಗಳು ಸೇರಿದಂತೆ ಅನೇಕ ಮನರಂಜನೆ ಕಾರ್ಯಗಳು ಜರುಗಿದವು.