ಲೋಕದರ್ಶನ ವರದಿ
ಬೆಳಗಾವಿ : ಮಹಾರಾಷ್ಟ್ರದ ಮುಖಂಡ ಸಂಭಾಜಿ ಭಿಡೆ ಅವರಿಗೆ ಹೇರಿರುವ ರಾಜ್ಯ ಪ್ರವೇಶ ನಿಷೇಧ ಆದೇಶ ಹಿಂಪಡೆಯವಂತೆ ಒತ್ತಾಯಿಸಿ ಶ್ರೀ ಶಿವಪ್ರತಿಷ್ಠಾನ ಹಿಂದೂಸ್ತಾನ್ ಸಂಸ್ಥೆಯ ಬೆಳಗಾವಿಯ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಮಹಾರಾಷ್ಟ್ರದ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಮುಖಂಡ ಸಂಭಾಜಿ ಭಿಡೆ ಅವರಿಗೆ ಮಹಾರಾಷ್ಟ್ರ ಸಕರ್ಾರ ಕ್ಲೀನ್ ಚೀಟ್ ನೀಡಿದೆ. ಹೀಗಾಗಿ ಆದೇಶ ಹಿಂಪಡೆಯದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಸಂಘಟನೆ ಕಾರ್ಯಕರ್ತರು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಶ್ರೀ ಶಿವಪ್ರತಿಷ್ಠಾನ ಹಿಂದೂಸ್ತಾನ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದ ಸಂಭಾಜಿರಾವ್ ಭಿಡೆ 'ದಿ ಹಿಸ್ಟರಿ ಆಫ್ ರಾಯಘಡ ಸುವರ್ಣ ಸಿಂಹಾಸನ' ವಿಷಯದ ಕುರಿತು ಉಪನ್ಯಾಸ ನೀಡಲಿದ್ದರು.
ಆದರೆ ಪ್ರಚೋಧನಕಾರಿ ಭಾಷಣ ಮಾಡಿ ಜನರ ಭಾವನೆಯನ್ನು ಕೆರಳಿಸುವ ಆರೋಪದ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು ಜುಲೈ 22ರಿಂದ 11 ದಿನಗಳ ಕಾಲ ಭಿಡೆ ಅವರ ರಾಜ್ಯ ಪ್ರವೇಶಕ್ಕೆ ನಿಷೇಧ ಹೇರಿ ಆದೇಶ ಹೊರಡಿಸಿದ್ದರು.