ಶಿಕ್ಷಣ ಕ್ಷೇತ್ರದ ಕಡೆಗಣನೆ, ವಿದ್ಯಾರ್ಥಿ ವಿರೋಧಿ ಬಜೆಟ್ - ಎಸ್‌ಎಫ್‌ಐ ಆಕ್ರೋಶ
ರಾಣೇಬೆನ್ನೂರ 10: ಶಿಕ್ಷಣ ಕ್ಷೇತ್ರಕ್ಕೆ ಕೇವಲ 45,286 ಕೋಟಿ ರೂಪಾಯಿ 10ಅ ಹಣ ಮೀಸಲಿಟ್ಟಿದೆ. ಈ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿಲ್ಲ. ಕಾಂಗ್ರೆಸ್ ಸರ್ಕಾರ ಶಿಕ್ಷಣವನ್ನು ಗ್ಯಾರಂಟಿ ಪಟ್ಟಿಗೆ ಸೇರಿಸಬೇಕಿತ್ತು. ಶಿಕ್ಷಣ ವ್ಯವಸ್ಥೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಯಾವುದೇ ದೂರದೃಷ್ಟಿಕೋನ ಮತ್ತು ಅಭಿವೃದ್ಧಿ ಕಣ್ಣೋಟ ಇಲ್ಲ ಎಂಬುದು ಈ ಬಜೆಟ್ ನಲ್ಲಿ ಸಾಬೀತಾಗಿದೆ.
ವಸತಿ ನಿಲಯದ ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ಕನಿಷ್ಠ 3, 500 ರೂ ಗಳಿಗೆ ಹೆಚ್ಚಿಸಬೇಕೆಂದು ಬೇಡಿಕೆಯ ನೀರೀಕ್ಷೆ ಹುಸಿಯಾಗಿದ್ದು, ಸಮಾಜ ಕಲ್ಯಾಣ, ಬಿಸಿಎಮ್, ಅಲ್ಪಾ ಸಂಖ್ಯಾತರ ಕಲ್ಯಾಣ ಇಲಾಖೆಗಳಡಿ ಇರುವ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಾಸಿಕ ಬೋಜನ ವೆಚ್ಚವನ್ನು ಬೆಲೆ ಏರಿಕೆ ದಿನಗಳಲ್ಲೂ ಹೆಚ್ಚಳ ಮಾಡದಿರುವುದು ಖಂಡನೀಯ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಪೌಷ್ಠಿಕ ಆಹಾರ ಒದಗಿಸಲು ಅಸಾಧ್ಯವಾಗುತ್ತದೆ. ನೂತನವಾಗಿ 26 ಹೋಬಳಿಗಳಲ್ಲಿ ಎಸ್ಸಿ/ಎಸ್ಟಿ ಹೊಸ ವಸತಿ ಶಾಲೆಗಳ, ಎಸ್ಟಿ 20 ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು, ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳಿಗೆ 62 ವಸತಿ ನಿಲಯಗಳು, 34 ವಿದ್ಯಾರ್ಥಿನಿಲಯಗಳಿಗೆ 238 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 30 ಮೆಟ್ರಿಕ್-ನಂತರದ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣಕ್ಕೆ ಕ್ರಮ. ಅತ್ಯಂತ ಹಿಂದುಳಿದ 46 ಅಲೆಮಾರಿ ಅರೆಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗಾಗಿ ನಾಲ್ಕು ಕಂದಾಯ ವಿಭಾಗಗಳಲ್ಲಿ ತಲಾ ಒಂದರಂತೆ ಡಿ.ದೇವರಾಜ ಅರಸು ವಸತಿ ಶಾಲೆಗಳ ಪ್ರಾರಂಭ. ವಿದ್ಯಾರ್ಥಿ ನಿಲಯಗಳ ಕಟ್ಟಡಗಳ ರಿಪೇರಿ/ದುರಸ್ತಿ ಮಾಡಲು ?25 ಕೋಟಿ. ಘೋಷಣೆ ಮಾಡಿದ್ದು ಎಸ್‌ಎಫ್‌ಐ ಹೋರಾಟದ ಪ್ರತಿಫಲವಾಗಿದ್ದು ಸರ್ಕಾರಕ್ಕೆ ಅಭಿನಂದನೆಗಳು.
ಸರ್ಕಾರಿ ವಿಶ್ವವಿದ್ಯಾಲಯಗಳ ಸಮಗ್ರ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡಬೇಕಿತ್ತು ವಿಶೇಷವಾಗಿ ಹಾವೇರಿ ವಿಶ್ವವಿದ್ಯಾಲಯ ಸೇರಿದಂತೆ 9 ನೂತನ ವಿವಿಗಳಿಗೆ ವಿಶೇಷ ಅನುದಾನ ಘೋಷಿಸಿ ಮೇಲೆತ್ತುವ ಕೆಲಸ ಮಾಡಬೇಕಿತ್ತು. ರೈತ ವಿದ್ಯಾನಿಧಿ, ವಿದ್ಯಾಸಿರಿ ವಿತರಣೆ ಪುನರ್ ಘೋಷಣೆ ಮಾಡಬೇಕಿತ್ತು. ಕಡಿತ ಮಾಡಿದ ಕಾರ್ಮಿಕ ಮಕ್ಕಳ ವಿದ್ಯಾರ್ಥಿ ವೇತನ ಸೇರಿದಂತೆ ಎಲ್ಲಾ ವಿಭಾಗದ ಎಲ್ಲಾ ರೀತಿಯ ಬಾಕಿ ಇರುವ ವಿದ್ಯಾರ್ಥಿ ವೇತ ಬಿಡುಗಡೆ ಹಾಗೂ ಹೆಚ್ಚಿಸುವ ಅವಶ್ಯಕತೆ ಇತ್ತು. ಶುಲ್ಕ ಪುನರ್ ಪಾವತಿ, ಉಚಿತ ಲ್ಯಾಪ್ಟಾಪ್, ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ವಿಶೇಷವಾಗಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಡಿ ದರ್ಜೆಯ ಸಿಬ್ಬಂದಿ ನೇಮಕ ಸೇರಿದಂತೆ ಮುಂತಾದ ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸಲು ಹಾಗೂ ಶಿಕ್ಷಣದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಬಜೆಟ್ ನಲ್ಲಿ 30ಅ ಮೀಸಲಿಡಬೇಕಿತ್ತು.
ಅತಿಥಿ ಶಿಕ್ಷಕರಿಗೆ 2000 ವೇತನ ಏರಿಕೆ, ಖಾಲಿ ಇರುವ ಸರಕಾರಿ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿ ಶಿಕ್ಷಕರು, ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಿಸುವುದಾಗಿ ಬಜೆಟ್ ನಲ್ಲಿ ಹೇಳಿರುವುದು ಸ್ವಾಗತಾರ್ಹ. ಇದು ಕೂಡಲೇ ಕಾರ್ಯರೂಪಕ್ಕೆ ಬರಬೇಕಿದೆ. ಘೋಷಣೆಗಳು ಭಾಷಣವಾಗದೆ ಜಾರಿಗೊಳಿಸಲು ಮುಂದಾಗಬೇಕೆಂದು ಎಸ್‌ಎಫ್‌ಐ ತಾಲ್ಲೂಕು ಅಧ್ಯಕ್ಷ ಗೌತಮ್ ಸಾವಕ್ಕನವರ, ಮುಖಂಡ ಕೃಷ್ಣ ನಾಯಕ ಪ್ರತಿಕ್ರಿಯಿಸಿದರು.