ದುಶ್ಚಟಗಳನ್ನು ನಮ್ಮ ಜೋಳಿಗೆಗೆ ಹಾಕಿ: ಓಲೇಮಠದಶ್ರೀ

Put the vices in our bag: Ole Matha Dasri

ಲೋಕದರ್ಶನ ವರದಿ 

ದುಶ್ಚಟಗಳನ್ನು ನಮ್ಮ ಜೋಳಿಗೆಗೆ ಹಾಕಿ: ಓಲೇಮಠದಶ್ರೀ  

ಜಮಖಂಡಿ 18: ದುಶ್ಚಟ ಮಾಡುವವರು ನಮ್ಮ ಜೋಳಿಗೆ ಹಾಕಬೇಕು. ದುಶ್ಚಟಗಳು ಕೇವಲ ಮಧ್ಯಪಾನ, ಧೂಮಪಾನ ಮಾಡುವದು ಅಷ್ಟೇ ಅಲ್ಲ ಇನ್ನೊಬ್ಬರ ಮನಸ್ಸಿಗೆ ನೋವು ಉಂಟು ಮಾಡುವ ಹಾಗೆ ನಿಂದನೆ ಮಾಡುವುದು ಸಹ ದುಶ್ಚಟವಾಗಿದೆ ಎಂದು ಓಲೇಮಠದಶ್ರೀ ಆನಂದ ದೇವರು ಹೇಳಿದರು. 

ನಗರದ ಓಲೇಮಠದ ಆನಂದ ದೇವರು ಶ್ರೀಗಳ ನೇತೃತ್ವದಲ್ಲಿ ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ ಹಾಗೂ ರುದ್ರಾಕ್ಷಿ ಧಾರಣ ಸದ್ಭಾವನ ಪಾದಯಾತ್ರೆಯನ್ನು ರುದ್ರಸ್ವಾಮಿ ಪೇಠದ ರುದ್ರಾವಧೂತ ಮಠದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. 

ಮದ್ಯಪಾನ, ಧೂಮಪಾನ ದೇಹಕ್ಕೆ ಮಾತ್ರ ಮಾರಕವಾಗಿದೆ. ಆದರೆ ಮಹಿಳೆಯರು ಮತ್ತು ಯುವಕರು ಬೇರೆಯವರಿಗೆ ನಿಂದನೆ ಮಾಡುವುದು ಸಹ ಬಹಳ ದೊಡ್ಡ ದುಶ್ಚಟವಾಗಿದೆ. ಹಿಂದಿನ ಹಿರಿಯರು ನೂರು ವರ್ಷಗಳ ಕಾಲ ಗಟ್ಟಿಯಾದ ಶರೀರದಿಂದ ಬದುಕುತ್ತಿದ್ದರು. ಆದರೆ 75 ವರ್ಷದ ವಯೋವೃದ್ಧರ ವಯಸ್ಸಿನ ಹಾಗೆ ಇಂದಿನ 25 ವರ್ಷದ ಯುವಕರು ಕಾಣುತ್ತಿದ್ದಾರೆ ಎಂದರೆ ಅದು ಅವರು ಮಾಡುತ್ತಿರುವ ದುಶ್ಚಟವೇ ಕಾರಣ ಎಂದರು. 

ನಮ್ಮ ಮಠಕ್ಕೆ ದವಸ, ಧಾನ್ಯಗಳನ್ನು ನೀಡುವ ಬದಲು ದುಶ್ಚಟಗಳಿಗೆ ಅಂಟಿಕೊಂಡಿರುವವರು ತಮ್ಮ ದುಶ್ಚಟಗಳನ್ನು ನಮ್ಮ ಜೋಳಿಗೆಗೆ ಹಾಕಿ. ನೀವುಗಳು ದುಶ್ಚಟಗಳಿಂದ ದೂರ ಇರಬೇಕು. ನಿಮ್ಮ ದುಶ್ಚಟಗಳನ್ನು ನಮ್ಮ ಜೋಳಿಗೆಗೆ ಹಾಕಿದರೆ ಮಾತ್ರ ಅದೇ ನಮಗೆ ಕೊಡುವ ದೊಡ್ದ ಕೊಡುಗೆ ಆಗಿದೆ. ಜಾತಿ, ಮತ, ಪಂತ, ಪಕ್ಷ ಭೇದಭಾವಗಳು ಯಾವುದು ನಮ್ಮ ಮಠದಲ್ಲಿ ಇರುವುದಿಲ್ಲ ಎಂದು ಆರ್ಶೀವಚನ ನೀಡಿದರು.  

ರುದ್ರಾವಧೂತ ಮಠದ ಹಿರಿಯ ಶ್ರೀಗಳಾದ ಸಹಜಾನಂದ ಅವಧೂತರು, ಝಂಜರವಾಡದ ಬಸವರಾಜೇಂದ್ರ ಶರಣರು ಆರ್ಶೀವಚನ ನೀಡಿದರು.ವಿಶ್ವನಾಥ ದೇವರು ಹೂವಿಹಿಪ್ಪರಗಿ, ಕೃಷ್ಣಾನಂದ ಅವಧೂತರು, ಡಾ,ವಿಜಯಲಕ್ಷ್ಮೀ ತುಂಗಳ, ನಗರಸಭೆ ಸದಸ್ಯರು ಸಿದ್ದು ಮೀಶಿ ಮಾತನಾಡಿದರು. ಪ್ರದೀಪ ಮೆಟ್ಟಗುಡ್ಡ ಪ್ರಾಸ್ತಾವಿಕ ಮಾತನಾಡಿದರು. 


ಬಾಕ್ಸ್‌ :     ನಗರದ ರುದ್ರಾಸ್ವಾಮಿ ಪೇಠದ ಓಣಿಗೆ ಓಲೇಮಠದ ಆನಂದ ದೇವರು ಪಾದಯಾತ್ರೆಗ ಬರುತ್ತಿದಂತೆ. ಗಲ್ಲಿಯ ಮಹಿಳೆಯರು ನಸುಕಿನ ಜಾವದಲ್ಲಿ ಮನೆಯ ಅಂಗಳದಲ್ಲಿ ಹಾಗೂ ರಸ್ತೆಯ ಉದ್ದಗಲಕ್ಕೂ ರಂಗೋಲಿಯನ್ನು ಚಿತ್ರವನ್ನು ಬಿಡಿಸಿದರು. ಮಹಿಳೆಯರು ಆರತಿ ಮಾಡುವ ಮೂಲಕ ಶ್ರೀಗಳನ್ನು ಬರಮಾಡಿಕೊಂಡರು. ಆನಂದ ದೇವರು ಪುಟ್ಟ ಬಾಲಕರಿಗೆ ಹಾಗೂ ಯುವಕ, ಯುವತಿಯರಿಗೆ ರುದ್ರಾಕ್ಷಿ ಧಾರಣವನ್ನು ಮಾಡುತ್ತಾ ಪಾದಯಾತ್ರೆಯಲ್ಲಿ ತೊಡಗಿದರು.  

ಶಿವಾನಂದ ಕೊಣ್ಣೂರ, ರವಿ ಯಡಳ್ಳಿ, ಮಲ್ಲು ಜೈನಾಪೂರ, ಬಸು ಬಳಗಾರ, ಪ್ರಭು ಹಿರೇಮಠ, ಬಸಯ್ಯ ಶಾಸ್ತ್ರಿ, ಈರಯ್ಯ ಮಠಪತಿ, ಕಸ್ತೂರಿ ಜೈನಾಪೂರ ಸೇರಿದಂತೆ ನೂರಾರು ಯುವಕರು, ಮಹಿಳೆಯರು ಸದ್ಭಾವನ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.