ಶ್ರೀನಗರ, ಜೂ.13, ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರಿಗಾಗಿ ಶೋಧ ಕಾರ್ಯವನ್ನು ಭದ್ರತಾ ಪಡೆ ಶನಿವಾರ ಮುಂದುವರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಜಮ್ಮು ಕಾಶ್ಮೀರ ಪೊಲೀಸ್‌ನ ವಿಶೇಷ ಕಾರ್ಯಾಚರಣಾ ಪಡೆ, ಸಿಆರ್‌ಪಿಎಫ್ ಮತ್ತು ರಾಷ್ಟ್ರೀಯ ರೈಫಲ್ಸ್, ಜಂಟಿಯಾಗಿ ಪುಲ್ವಾಮ ಜಿಲ್ಲೆಯ ಗುಲಾಬ್ ಭಾಗ್ ತ್ರಾಲ್‌ನಲ್ಲಿ ಶೋಧ ಕಾರ್ಯ ಆರಂಭಿಸಿದೆ ಎಂದು ಅವು ತಿಳಿಸಿವೆ.ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಗ್ರಾಮದ ಎಲ್ಲಾ ಹೊರ ಹೋಗುವ ಮಾರ್ಗಗಳನ್ನು ಬಂದ್ ಮಾಡಿದ ಭದ್ರತಾ ಪಡೆ, ಮನೆ ಮನೆ ಶೋಧ ಆರಂಭಿಸಿದೆ. ಬೆಳಗ್ಗಿನ ವೇಳೆ ಸ್ವಲ್ಪ ಹೊತ್ತು ಗುಂಡು ಹಾರಾಟದ ಶಬ್ಧ ಕೇಳಿಬಂದಿದೆ.ಅದು ಉಗ್ರರ ಕಡೆಯಿಂದ ಅಥವಾ ಭದ್ರತಾಪಡೆ ನಡೆದ ಗುಂಡಿನ ದಾಳಿಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಅಲ್ಲಿಂದ ಕೊನೆಯ ಬಾರಿಗೆ ವರದಿ ಬಂದಾಗಲೂ ಶೋಧ ಕಾರ್ಯ ಮುಂದುವರಿದಿತ್ತು. ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ ಎಂದು ಮೂಲಗಳು ತಿಳಿಸಿವೆ.