ಮಹಾಸಭೆಯ ಚಟುವಟಿಕೆಗಳು ಗ್ರಾಮೀಣ ಭಾಗಕ್ಕೂ ತಲುಪಲಿ’
ಬೆಳಗಾವಿ 16ಃ ಅಖಿಲ ಭಾರತ ವೀರಶೈವ ಮಹಾ ಸಭೆಯ ಬೆಳಗಾವಿ ಜಿಲ್ಲಾ ಘಟಕವು ಶೈವಶಿಖಾಮಣಿ ಹಾನಗಲ್ ಗುರು ಕುಮಾರಸ್ವಾಮಿಗಳ ದೂರದೃಷ್ಠಿ ಹಾಗೂ ಕರ್ತೃತ್ವದ ಫಲವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಸಹ ಇನ್ನೂ ಹಲವಾರು ಯೋಚನೆಗಳು ಹಾಗು ಯೋಜನೆಗಳನ್ನು ಅಳವಡಿಸಿಕೊಂಡು ನಗರದಿಂದ ಗ್ರಾಮಾಂತರ ಮಟ್ಟದಲ್ಲಿಯೂ ಕ್ರಿಯಾಶೀಲವಾಗಬೇಕೆಂದು ಸಮಾಜದ ಯುವ ಮುಖಂಡರು ಆಶಯ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಮಹಾಸಭಾದ ನೂತನ ಅಧ್ಯಕ್ಷರಾಗಿ ಎರಡನೆಯ ಬಾರಿ ಅಧಿಕಾರ ವಹಿಸಿಕೊಂಡಡಿರುವ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ರತ್ನಕ್ಕ ಬೆಲ್ಲದ ಅವರಿಗೆ ಬೆಳಗಾವಿ ಗ್ರಾಮಂತರ ವಿಭಾಗದ ವೀರಶೈವ ಲಿಂಗಾಯತ ಸಮಾಜದ ಹಿರಿಯರ ಸಲಹೆಯಂತೆ ಮನವಿ ಸಲ್ಲಿಸಲಾಯಿತು.
ಮಹಾಸಭೆಯ ಚಟುವಟಿಕೆಗಳು ಹಾಗೂ ಕಾರ್ಯಕ್ರಮಗಳು ಬರೀ ಜಿಲ್ಲಾ ಘಟಕದ ಕೇಂದ್ರೀಕೃತ ವ್ಯವಸ್ಥೆಯಾಗಿರದೆ ತಾಲೂಕಾ ಮತ್ತು ಹೋಬಳಿ ಮಟ್ಟಗಳ ಸಮುದಾಯದ ಜನರಿಗೂ ಸಹ ತಲುಪುವಂತಾಗಬೇಕು. ಅಲ್ಲದೆ ಸಮುದಾಯದ ಅಭಿವೃದ್ಧಿಯ ಹಿತದೃಷ್ಠಿಯಿಂದ ಈ ಹಿಂದೆ ಬಿ.ಎಸ್. ಯಡಯೂರ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಸ್ಥಾಪಿತವಾಗಿರುವ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಯೋಜನೆಗಳ ಬಗ್ಗೆ ವೀರಶೈವ ಮಹಾಸಭೆಯ ಸಹಯೋಗದಲ್ಲಿ ಗ್ರಾಮಂತರ ವಲಯಗಳಲ್ಲಿ ಜಾಗೃತಿ ಹಾಗೂ ಅನುಷ್ಠಾನ ಕಾರ್ಯಗಳ ನಡೆಯುವಂತಾಗಬೇಕು.
ವೀರಶೈವ ಧರ್ಮದ ತತ್ವ, ಸಿದ್ಧಾಂತ ಆಚಾರ ವಿಚಾರ ಹಾಗೂ ಆಚರಣೆಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ವೀರಶೈವ ಮಹಾಸಭಾದ ಮೂಲ ಆಶಯಗಳನ್ನು ಗುರಿ ಮುಟ್ಟಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿ ಸಂಘಟನೆಯನ್ನು ಬಲಪಡಿಸಬೇಕು.
ಶಿವಶರಣೆ ಅಕ್ಕಮಹಾದೇವಿ, ವೀರರಾಣಿ ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮ ಹಾಗೂ ಆಂಧರ ಬಾಳಿನ ಆಶಾ ಕಿರಣ ಪಂ ಪಂಚಾಕ್ಷರಿ ಗವಾಯಿಗಳು, ಪಂ ಪುಟ್ಟರಾಜ ಗವಾಯಿಗಳು ಕಾರುಣ್ಯ ಸಿಂಧು ಡಾ. ಶಿವಕುಮಾರ ಸ್ವಾಮೀಜಿ ಮತ್ತು ಬೆಳಗಾವಿ ಜಿಲ್ಲೆಯ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದಲ್ಲಿರುವ ಸುಳೇಭಾವಿ ಗ್ರಾಮದ ಸಂಗೀತ ಸ್ವರ ಸಾಮ್ರಾಟ ಕುಮಾರ ಗಂಧರ್ವರು ದಶಿವಪುತ್ರಯ್ಯ ಕೊಂಕಾಳಿಮಠನ ಇಂಥ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿ ಸಮಾಜಕ್ಕೆ ತಮ್ಮದೆ ಆದ ಕೊಡುಗೆಯನ್ನು ನೀಡಿದ ಇನ್ನೂ ಹಲವಾರು ಮಹನೀಯರು ಈ ವೀರಶೈವ ಲಿಂಗಾಯತ ಧರ್ಮದಲ್ಲಿ ಜನಿಸಿದ್ದು, ಹೆಮ್ಮಯ ವಿಷಯ. ಇಂಥ ಮಹಾಮಹಿಮರ ಚರಿತ್ರೆ ಅಚೆ ಸಾಧನೆಯ ಪರ್ವ ಈ ಬಗ್ಗೆ ಯುವ ಸಮುದಾಯಕ್ಕೆ ತಿಳಿಸುವಂಥ ಹಾಗೂ ಅವರಲ್ಲಿ ಪ್ರೇರಣೆ ಸ್ಫೂರ್ತಿ ತುಂಬುವಂಥ ಕಾರ್ಯಸೂಚಿಯನ್ನು ವೀರಶೈವ ಮಹಾಸಭಾದ ಬೆಳಗಾವಿ ಜಿಲ್ಲಾ ಘಟಕವು ಮಾಡಬೇಕು.
ವೀರಶೈವ ಮಹಾಸಭಾದ ಆಶಯಗಳೇನು? ಆಮೂಲ ಸಿದ್ಧಾಂತಗಳನ್ನು ಕೇಂದ್ರೀಕರಿಸಿಕೊಂಡು ನಾವು ಕಾರ್ಯ ನಿರ್ವಹಿಸುವದಕ್ಕೆ ಆತ್ಮ ವಿಮರ್ಶೆಗೆ ಇದು ಸಂಕ್ರಮಣದ ಕಾಲ. ಆದ್ದರಿಂದ ಜಾಗೃತಿ ಮತ್ತು ಸಂಘಟನೆ ಎಂಬ ಮೂಲಮಂತ್ರದೊಂದಿಗೆ ಜಿಲ್ಲಾ ಘಟಕವು ಕಾರ್ಯನಿರ್ವಹಿಸಬೇಕೆಂದು ಅವರು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ವೀರಶೈವ ಮಹಾ ಸಭಾ ಜಿಲ್ಲಾಘಟಕದ ಕಾರ್ಯಕಾರಿ ಸಮಿತಿಯ ಸದಸ್ಯ ವಿಜಯ ಮಠಪತಿ, ಯುವಮುಖಂಡ ಮಂಜುನಾಥ ವಸ್ತ್ರದ್, ಡಾ ದೊಡಮನಿ, ಡಾ. ಮಹೇಶ ಗುರನಗೌಡ ಸೇರಿದಂತೆ ಇತರರು ಇದ್ದರು.