ರೈಲು ಹೋರಾಟ ಸಮಿತಿಯ ಪೂರ್ವಭಾವಿ ಸಭೆ

Preliminary meeting of Rail Struggle Committee

ರೈಲು ಹೋರಾಟ ಸಮಿತಿಯ ಪೂರ್ವಭಾವಿ ಸಭೆ 

ತಾಳಿಕೋಟಿ 17: ಆಲಮಟ್ಟಿ- ಯಾದಗಿರಿ ರೈಲು ಮಾರ್ಗದ ರೂಪರೇಷೆಗಳನ್ನು ಚರ್ಚಿಸಲು ಹೋರಾಟ ಸಮಿತಿಯ ಸಭೆಯನ್ನು ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಭಾನುವಾರ ಆಯೋಜಿಸಲಾಗಿತ್ತು. ಸೇರಿದ್ದ ಪ್ರಮುಖರು ತಮ್ಮ ಅನುಭವ ಹಂಚಿಕೊಂಡರು.1933ರಲ್ಲಿ ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ಆಲಮಟ್ಟಿಯಿಂದ ಹುಲ್ಲೂರ, ಮುದ್ದೇಬಿಹಾಳ, ತಾಳಿಕೋಟೆ, ಹುಣಸಗಿ ಮಾರ್ಗವಾಗಿ ಯಾದಗೀರವರೆಗೆ ರೈಲು ಮಾರ್ಗ ಅಳವಡಿಸುವ ಯೋಜನೆ ರೂಪಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ತಡೆಯಾಗಿದ್ದು ಅದನ್ನು ಮುಂದುವರೆಸುವ ಹಲವು ಪ್ರಯತ್ನಗಳನ್ನು ಈ ಭಾಗದ ಜನತೆ ಮಾಡಿದರೂ ಯಶಸ್ಸು ಕಂಡಿಲ್ಲ. ಅಂದಿನಿಂದ ಇಂದಿನವರೆಗೆ ಯೋಜನೆ ಕಾರ್ಯರೂಪಕ್ಕೆ ತರಲು ಹಲವು ಪ್ರಯತ್ನಗಳು ಮನವಿಗಳನ್ನು ನೀಡಲಾಗಿದೆ, ಯಾದಗೀರ ಜಿಲ್ಲೆಯ ಬಹುಭಾಗ ಭತ್ತದ ಕಣಜವಾಗಿ, ತಾಳಿಕೋಟೆ ಮುದ್ದೇಬಿಹಾಳ ಭಾಗ ತೊಗರಿ ಕಣಜವಾಗಿವೆ. ನೀರಾವರಿಯಿಂದ ಕಬ್ಬು ಹತ್ತಿಯಂತಹ ವಾಣಿಜ್ಯ ಬೆಳೆಗಳು, ತೋಟಗಾರಿಕೆ ಉತ್ಪನ್ನಗಳ ಪ್ರಮಾಣ ಹೆಚ್ಚಿದೆ. ಜೊತೆಗೆ ರೈಲುಪ್ರಯಾಣವು ಪ್ರಯಾಣಿಕರಿಗೆ ವೆಚ್ಚ ತಗ್ಗಿಸಿದರೆ ಇದು ಪರಿಸರಕ್ಕೆ ಆಗುವ ಹಾನಿಯನ್ನು ಹೆಚ್ಚಿನಮಟ್ಟದಲ್ಲಿ ತಪ್ಪಿಸುತ್ತದೆ ಎಂಬೆಲ್ಲ ವಿಷಯಗಳನ್ನು ಪಟ್ಟಿಮಾಡಿಕೊಂಡು ರೈಲುಮಾರ್ಗವನ್ನು ನೀಡಲೇಬೇಕು ಎಂಬ ಒತ್ತಾಯ, ಒತ್ತಡ ಹೆಚ್ಚಿಸಬೇಕು. ಯೋಜನೆ ಕಾರ್ಯರೂಪಕ್ಕೆ ಬರುವವರೆಗೆ ಅಚಲ ಹೋರಾಟ ನಡೆಸಬೇಕು ಎಂದು ತೀರ್ಮಾನಿಸಲಾಯಿತು.  

ಈ ಹಿಂದೆ ಕಡೆಗಣಿಸಲ್ಪಟ್ಟಿರುವ ಕಾರಣಗಳನ್ನು ಗುರುತಿಸಿ ರೈಲು ಮಾರ್ಗದ ಅವಶ್ಯಕತೆಯನ್ನು ಮನಗಾಣಿಸಬೇಕು. ಇದರಲ್ಲಿ ಜನಪ್ರತಿನಿಧಿಗಳು ಪ್ರಮುಖ ಪಾತ್ರ ವಹಿಸುವಂತೆ ಒತ್ತಾಯ ತರಬೇಕು. ಹೋರಾಟವು ಪಕ್ಷಾತೀತವಾಗಿ, ಜಾತ್ಯತೀತವಾಗಿ ಇರಬೇಕು. ಸಾರ್ವಜನಿಕ ಹಿತಾಸಕ್ತಿಯೇ ಪ್ರಮುಖವಾಗಬೇಕು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು.ಎಷ್ಟೆ ಎಡರು ತೊಡರು ಬಂದರೂ ಲೆಕ್ಕಿಸದೇ ತನುಮನಧನದಿಂದ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ತೀರ್ಮಾನಿಸಿದರು.  

ಸಂಸತ್ ಅಧಿವೇಶನ ಇದೇ 20ಕ್ಕೆ ಕೊನೆಗಾಣಲಿದ್ದು ಇದರೊಳಗೆ ಸಮಿತಿಯೊಂದು ಈ ಭಾಗದ ಸಂಸದರು, ಶಾಸಕರನ್ನೊಳಗೊಂಡು ಕೇಂದ್ರ ರೈಲು ಸಚಿವರನ್ನು ಭೇಟಿಯಾಗಬೇಕು. ರಾಜ್ಯ ರೈಲು ಸಚಿವರು ನಮ್ಮವರೇ ಆಗಿದ್ದು ಅದರ ಪ್ರಯೋಜನ ಪಡೆಯಬೇಕು ಎಂದು ಚರ್ಚೆ ನಡೆಯಿತು. 

ಮಹಾಂತೇಶ ಮುರಾಳ ಸ್ವಾಗತಿಸಿದರು. ಆರಿ​‍್ವ.ಜಾಲವಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇವರಲ್ಲದೇ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ, ಇಬ್ರಾಹಿಂ ಮನ್ಸೂರ, ಪ್ರಮುಖರಾದ ತಿರುಪತಿ ನವಲೆ, ಶ್ರೀಕಾಂತ ಪತ್ತಾರ, ಪ್ರಸನ್ನ ತಂಬಾಕೆ, ಪ್ರಭುಗೌಡ ಮದರಕಲ್ಲ, ಘನಶ್ಯಾಮ ಚವಾಣ, ಕಾಶಿನಾಥ ಮುರಾಳ, ರಾಜು ಹಂಚಾಟೆ, ಆರ್‌.ಎಲ್‌.ಕೊಪ್ಪದ, ಬಸನಗೌಡ ಬಾಗೇವಾಡಿ, ಮೊದಲಾದವರು ಮಾತನಾಡಿದರು.