ಪಂಚಾಚಾರ್ಯರ ಹೇಳಿಕೆ ಖಂಡನೀಯ : ಬಸವರಾಜ್ ರೊಟ್ಟಿ
ಬೆಳಗಾವಿ 12: ಪಂಚಾಚಾರ್ಯ ಜಗದ್ಗುರುಗಳು ಲಿಂಗಾಯತ ಧರ್ಮದ ಬಗ್ಗೆ ನೀಡಿದ ಹೇಳಿಕೆ ಆಧಾರರಹಿತವಾಗಿದ್ದು ಹತಾಶರಾಗಿ ಲಿಂಗಾಯತ ಧರ್ಮದ ಕುರಿತು ಮಿಥ್ಯ ಹಾಗೂ ದ್ವಂದ್ವ ಸೃಷ್ಟಿಸುವ ಹೇಳಿಕೆ ನೀಡುತ್ತಿರುವುದನ್ನು ಖಂಡನೀಯವಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ್ ರೊಟ್ಟಿ ಹೇಳಿದರು.
ಇಂದು ಬೆಳಗಾವಿಯ ಜಾಗತಿಕ ಲಿಂಗಾಯತ ಮಹಾಸಭೆಯ ಕೇಂದ್ರ ಕಾರ್ಯಾಲಯದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮವೊಂದರಲ್ಲಿ ಪಂಚಾಚಾರ್ಯರು ರಂಭಾಪುರಿ ಸ್ವಾಮೀಜಿ, ಕೇದಾರ ಪೀಠದ, ಉಜ್ಜಯಿನಿ, ಶ್ರೀಶೈಲ ಮತ್ತು ಕಾಶಿ ಜಗದ್ಗುರುಗಳು ಲಿಂಗಾಯತ ಮತ್ತು ವೀರಶೈವ ಒಂದೇ. ವೀರಶೈವ ಹಿಂದೂ ಧರ್ಮದ ಒಂದು ಭಾಗವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಬಸವಣ್ಣನವರು ವಚನಗಳಲ್ಲಿ ವೀರಶೈವ ಪದವನ್ನು ಬಳಸಿದ್ದು, ಜಾಗತಿಕ ಲಿಂಗಾಯತ ಮಹಾಸಭೆಯೂ ಪ್ರತ್ಯೇಕ ಧರ್ಮದ ಬೇಡಿಕೆಯಿಟ್ಟು ಧರ್ಮವನ್ನು ಒಡೆಯುವ ಕೆಲಸವನ್ನು ಮಾಡುತ್ತಿದೆ ಎಂದು ನೀಡಿರುವ ಹೇಳಿಕೆಯನ್ನು ಅವರು ಖಂಡಿಸಿದರು.
ಹಿಂದೂ ಕಾಯ್ದೆಯಲ್ಲಿ ಲಿಂಗಾಯತ ಮತ್ತು ವೀರಶೈವ ಒಂದೇ ಎನ್ನುವುದಾದರೇ ಲಿಂಗಾಯತ ಧರ್ಮಕ್ಕೆ ವಿರುದ್ಧ ಮಾಡುತ್ತಿರುವುದು ಯಾಕೆ? ವೀರಶೈವ ಇದು ಲಿಂಗಾಯತ ಧರ್ಮದ ಒಳಪಂಗಡ. ಹಿಂದೂ ಕಾನೂನುಗಳು ಬೇರೆಯಾಗಿವೆ. ಧರ್ಮವನ್ನು ಒಗ್ಗೂಡಿಸುವ ಕೆಲಸ ಜಾಗತಿಕ ಲಿಂಗಾಯತ ಮಹಾಸಭೆ ಮಾಡುತ್ತಿದೆ.
ಇತ್ತೀಚೆಗೆ ಬರೆಸಲ್ಪಟ್ಟ ಎರಡು 'ಉತ್ತರ ಆಗಮಗಳು' 'ಸುಪ್ರಭೇದ ಮತ್ತು ಸ್ವಯಂಭು' ಇತರ ನಾಲ್ವರ ಮೂಲದ ಬಗ್ಗೆ ಪರಸ್ಪರ ವಿರುದ್ಧವಾದ ಎರಡು ವಿಭಿನ್ನ ವಿಷಯಗಳನ್ನು ಉಲ್ಲೇಖಿಸಿವೆ. 13ನೇ ಶತಮಾನದ ಹರಿಹರನ ರೇವಣಸಿದ್ಧ ರಗಳೆಯೂ ಈ ನಾಲ್ವರ ಬಗ್ಗೆ ಏನನ್ನೂ ಉಲ್ಲೇಖಿಸುವುದಿಲ್ಲ. ಆದ್ದರಿಂದ ಈ ನಾಲ್ವರ ಪ್ರಸ್ತುತತೆ ಅನುಮಾನಸ್ಪವಾಗಿದೆ. ಆದರೂ ಅವರು ಬಹಳ ನಂತರ ಕೆಲವು ಪುರಾಣಗಳನ್ನು ಬರೆಸಿಕೊಂಡಿದ್ದಾರೆ. ಈ ಸಂಗತಿಯು ಪಂಚಾಚಾರ್ಯರು ಇಬ್ಭಾಗವಾಗಲು ಮೂಲ ಕಾರಣವಾಗಿದೆ.
ಹೊಸದಾಗಿ ಪತ್ತೆಯಾದ 12ನೇ ಶತಮಾನದ ಬಸವಣ್ಣನವರು ಮತ್ತು ನೂರಾರು ಶರಣೆ ಇಪ್ಪತ್ಮೂರು ಸಾವಿರ ವಚನಗಳು ಜನಪ್ರಿಯವಾಗುತ್ತಿವೆ. ಅದರಿಂದ ಪಂಚಾಚಾರ್ಯರಲ್ಲಿ ಲಿಂಗಾಯತರಿಗೆ ನಂಬಿಕೆ ಮತ್ತು ಗೌರವ ಕಡಿಮೆಯಾಗುತ್ತಿವೆ.
ಈ ಪಂಚಾಚಾರ್ಯರಉಗಮದ ಬಗೆಗಿನ ಪುರಾಣಗಳ ಕಾಲ್ಪನಿಕ ಕಥೆಗಳು ತಮ್ಮ ಮಹತ್ವ ಕಳಖೆದುಕೊಂಡಿವೆ.ಅವರ ಕೆಲವು ಆಚರಣೆಗಳಲ್ಲಿ ಶಿವಲಿಂಗದ ಪ್ರತಿಮೆಯ ಮೇಲೆ ತಮ್ಮ ಪಾದಗಳನ್ನು ಇಡುವಂತಹ ವಿಚಿತ್ರ ಆಚರಣೆಗಳು ಲಿಂಗಾಯತರ ಮತ್ತು ಹಿಂದೂ ಶೈವರ ಆಕ್ರೋಶಕ್ಕೆ ಕಾರಣವಾಗಿವೆ ಬಸವಣ್ಣನವರನ್ನು ಅನುಸರಿಸುವ ಬಹುಪಾಲು ಲಿಂಗಾಯತರು ಪಂಚಾಚಾರ್ಯರನ್ನು ತೊರೆದಿದ್ದಾರೆ. ಅವರ ಕಟ್ಟು ಕಥೆಗಳನ್ನು ಪ್ರಶ್ನಿಸಲಾಗುತ್ತಿದೆ. ಹೀಗಾಗಿ ಅವರ ಮಾಧ್ಯಮ ಹೇಳಿಕೆಗಳು ಹತಾಶ, ಸೇಡು ತೀರಿಸಿಕೊಳ್ಳುವ ಮನೋಭಾವನೆಯನ್ನು ಬಹಿರಂಗ ಪಡಿಸುತ್ತಿವೆ ಎಂದು ಅವರು ಆರೋಪಿಸಿದರು.
ಪಂಚಾಚಾರ್ಯರು ಅಡ್ಡಪಲ್ಗಲಕ್ಕಿಯಲ್ಲಿ ಮೆರವಣಿಗೆ ಮಾಡಿಸಿಕೊಳ್ಳಲು ಇಷ್ಟಪಡುತ್ತಾರೆ. ಆದರೆ ಅಡ್ಡಪಲ್ಲಕ್ಕಿಯನ್ನು ಹೊತ್ತುಕೊಳ್ಳುವುದು ಗುಲಾಮಗಿರಿಯ ಸಂಕೇತವಾಗಿದ್ದು, ಈಗ ಲಿಂಗಾಯತರು ಅದರಿಂದ ಹೊರಗೆ ಬಂದಿದ್ದಾರೆ. ಪ್ರತಿವರ್ಷ ನೂರಾರು ಅಡ್ಡ-್ಪಲ್ಲಕ್ಕಿ ಸೇವೆಗಳು ನಿಂತು ಹೋಗಿ ಆದಾಯವು ಗಣನೀಯವಾಗಿ ಕಡಿಮೆ ಆಗಿದೆ. ಲಿಂಗಾಯತರು ತಮ್ಮ ಧರ್ಮದ ನಿಜವಾದ ಸ್ವರೂಪದ ಬಗ್ಗೆ ಅರಿತು ಬಹುತೇಕರು ಬಸವ ತತ್ವದತ್ತ ವಾಲುತ್ತಿದ್ದಾರೆ ಎಂದು ಬಸವರಾಜ್ ರೊಟ್ಟಿ ಹೇಳಿದರು.
ಪಂಚಾಚಾರ್ಯರು ಮತ್ತು ಅವರ ಅನುಯಾಯಿಗಳು ವೈದಿಕ ಧರ್ಮದ ಗ್ರಂಥಗಳನ್ನು ಓದಲು ಪ್ರಸ್ತಾಪಿಸಲು ಸಂಪೂರ್ಣ ಅಧಿಕಾರ ಉಳ್ಳವರು. ಆದರೆ ಶರಣ ತತ್ವಗಳ ವಿರೂಪಗೊಳಿಸುವುದು ತಪ್ಪಾಗಿ ಅರ್ಥೈಸುವುದು ಹಾಗೂ ಶರಣ ಧರ್ಮದಲ್ಲಿ ಮಧ್ಯ ಪ್ರವೇಶಿಸುವುದನ್ನು ನಿಲ್ಲಿಸಬೇಕು. ಲಿಂಗಾಯತ ಧರ್ಮದಲ್ಲಿ ಹಸ್ತಕ್ಷೇಪ ಮಾಡುವುದನ್ನು ಲಿಂಗಾಯತರು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಡಾ. ನಾಗಮೋಹನ ದಾಸ ಅವರು ತಮ್ಮ ವರದಿಯಲ್ಲಿಯೂ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಸಂಸ್ಥಾಪಕರು ವಚನ ಸಾಹಿತ್ಯವೂ ಧರ್ಮಗ್ರಂಥವೆಂದಿದ್ದಾರೆ. ರಾಜ್ಯ ಸರ್ಕಾರ ಒಪ್ಪಿಕೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಎಂದರು.
ಕನ್ನೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿಗಳು ಮಾತನಾಡಿ ಬಸವ ಅನುಯಾಯಿಗಳು, ಬಸವ ತಾಲಿಬಾನಿಗಳು ಎಂದು ನೀಡಿರುವ ಹೇಳಿಕೆಯನ್ನು ಬಲವಾಗಿ ಖಂಡಿಸಿದ ಅವರು ಶ್ರೀಗಳು ತಮ್ಮ ಹೇಳಿಕೆಯನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದರು. ಕಾಡಸಿದ್ಧೇಶ್ವರ ಸ್ವಾಮಿಗಳು ಮೂಲತಃ ಬಸವ ಅನುಯಾಯಿಗಳು ಆದರೆ ಈಗಿನ ಶ್ರೀಗಳು ಬಸವತತ್ವದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ಮಠದ ಭಕ್ತರೇ ಈ ಕುರಿತು ನಿರ್ಣಯವನ್ನು ತೆಗೆದುಕೊಳ್ಳಬೇಕು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಪ್ರಧಾನ ಗುರು ಅಶೋಕ ಮಳಗಲಿ, ಖಜಾಂಚಿ ಮುರಿಗೆಪ್ಪ ಬಾಳಿ, ನಗರ ಘಟಕದ ಕಾರ್ಯದರ್ಶಿ ಚಂದ್ರಾ್ಪ ಬೂದಿಹಾಳ, ಉಪಾಧ್ಯಕ್ಷ ಪ್ರವೀಣಕುಮಾರ ಚಿಕಲಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ದರು.