ಹೈದರಾಬಾದ್, ಡಿ 3- ವಿಶ್ವ ಚಾಂಪಿಯನ್ ಹಾಗೂ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಅವರು ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್ ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವರ್ಷಾಂತ್ಯದಲ್ಲಿ ನಡೆಯುವ ಬ್ಯಾಡ್ಮಿಂಟನ್ ಪ್ರತಿಷ್ಠಿತ ಟೂರ್ನಿಗೆ ಅರ್ಹತೆ ಪಡೆದಿರುವ ಪಟ್ಟಿಯನ್ನು ಮಂಗಳವಾರ ಪ್ರಕಟಿಸಲಾಗಿದೆ. ಸಿಂಧು ಐದು ವಿಭಾಗದಲ್ಲಿ ಭಾರತದಿಂದ ಆಯ್ಕೆಯಾದ ಏಕೈಕ ಆಟಗಾರ್ತಿಯಾಗಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಎಂಟು ಆಟಗಾರ್ತಿಯರು ಈ ಕಣದಲ್ಲಿ ಪ್ರಶಸ್ತಿಗಾಗಿ ಕಾದಾಟ ನಡೆಸಲಿದ್ದಾರೆ. ಚೀನಾದ ಗುವಾಂಗ್‍ಝೌನಲ್ಲಿ ಡಿ.11 ರಿಂದ ಟೂರ್ನಿ ಆರಂಭವಾಗಲಿದೆ.
ಪ್ರಸಕ್ತ ಆವೃತ್ತಿಯಲ್ಲಿ ಪಿ.ವಿ ಸಿಂಧು ವಿಶ್ವ ಚಾಂಪಿಯನ್‍ಶಿಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆದ ಕಾರಣ ಅವರು ನೇರವಾಗಿ ಬಿಡಬ್ಲ್ಯುಎಫ್ ವಿಶ್ವ ಟೂರ್ ಗೆ ಅರ್ಹತೆ ಪಡೆದಿದ್ದಾರೆ. ಆದರೆ, ಇನ್ನುಳಿದ ಟೂರ್ನಿಗಳಲ್ಲಿ ಕಳಪೆ ಪ್ರದರ್ಶನ ತೋರಿದ್ದಾರೆ.
ಈ ಟೂರ್ನಿಯಲ್ಲಿ ಒಟ್ಟು 40 ಆಟಗಾರ್ತಿಯರು ಭಾಗವಹಿಸುತ್ತಿದ್ದು, ವಿಶ್ವದ ಅಗ್ರ 9 ಶ್ರೇಯಾಂಕ ಒಳಗಿರುವವರು ಮಾತ್ರ ಫಾಲ್ಗೊಳ್ಳಲು ಅವಕಾಶವಿದೆ. ಸಿಂಧು ಟೂರ್ನಿಯ ಶ್ರೇಯಾಂಕದಲ್ಲಿ 15ನೇ ಸ್ಥಾನ ಪಡೆದಿದ್ದಾರೆ.
ಪ್ರಸಕ್ತ ವರ್ಷದ ಆರಂಭದಲ್ಲಿ ಸೈನಾ ನೆಹ್ವಾಲ್ ಅವರು ಇಂಡೋನೇಷ್ಯಾ ಓಪನ್ ಚಾಂಪಿಯನ್ ಆಗಿದ್ದರು. ಸಿಂಧು ಅವರೊಂದಿಗೆ ವಿಶ್ವ ಶ್ರೇಷ್ಠ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದ ಭಾರತ ಏಕೈಕ ಸಿಂಗಲ್ಸ್ ಆಟಗಾರ್ತಿಯಾಗಿದ್ದಾರೆ. ಸಾತ್ವಿಕಸಾಯಿರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿಯು ಥಾಯ್ಲೆಂಡ್ ಓಪನ್ ಡಬಲ್ಸ್ ಕಿರೀಟ ಮುಡಿಗೇರಿಸಿಕೊಂಡಿದ್ದರು. ಇದಾದ ಬಳಿಕ ಈ ಜೋಡಿ ಗಾಯದ ಸಮಸ್ಯೆಯಿಂದ ಹಲವು ಟೂರ್ನಿಗಳಿಂದ ಹೊರಗುಳಿದಿತ್ತು.