ಬಯಲಾಟ ಕಲಾ ಪ್ರದರ್ಶನಕ್ಕೆ ಸಾಮಾಜಿಕ ಆದ್ಯತೆ ದೊರೆಯಬೇಕು : ಕೆ.ಆರ್‌.ದುರ್ಗಾದಾಸ್

Outdoor art exhibition should get social priority : K.R. Durgadas

ಬಯಲಾಟ ಕಲಾ ಪ್ರದರ್ಶನಕ್ಕೆ ಸಾಮಾಜಿಕ ಆದ್ಯತೆ ದೊರೆಯಬೇಕು : ಕೆ.ಆರ್‌.ದುರ್ಗಾದಾಸ್ 

ಮೂಡಲಗಿ 22 : ಬಯಲಾಟವು ಮನರಂಜನೆಯೊಂದಿಗೆ ಬದುಕಿನ ವಿವೇಕ ನೈತಿಕತೆ ಸೌಹಾರ್ದ ಮನೋಭಾವ ಕೂಡುಬಾಳ್ವೆ ಮುಂತಾದ ಮೌಲ್ಯಗಳನ್ನು ಪ್ರಸಾರ ಮಾಡುತ್ತ ಬಂದಿದ್ದು ಗ್ರಾಮೀಣ ಪ್ರದೇಶದ ಎಲ್ಲಾ ಜಾತಿ-ಧರ್ಮಗಳ ಜನ ಸೇರಿ ಈ ಕಲೆಯನ್ನು ಸಂರಕ್ಷಿಸಿಕೊಂಡು ಬಂದಿರುವುದರಿಂದ ಬಯಲಾಟ ಜಾತ್ಯಾತೀತ ಕಲೆಯಾಗಿ ಬೆಳೆದಿದೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ. ಕೆ.ಆರ್‌.ದುರ್ಗಾದಾಸ ಹೇಳಿದರು.  ತಾಲೂಕಿನ ಅರಭಾವಿ ಗ್ರಾಮದ ಬಲಭೀಮ ದೇವಸ್ಥಾನದ ಬಯಲು ರಂಗ ಮಂದಿರದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿಯ ವತಿಯಿಂದ ಜರುಗಿದ ರಾಜ್ಯಮಟ್ಟದ ದೊಡ್ಡಾಟ-ಸಣ್ಣಾಟ ಸಂಭ್ರಮ ವಿಚಾರ ಸಂಕಿರಣ ಹಾಡುಗಾರಿಕೆ-ಪ್ರದರ್ಶನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಣ್ಣಾಟ-ದೊಡ್ಡಾಟಗಳ ತವರೂರಾದ ಬೆಳಗಾವಿ ಮತ್ತು ಕಲಬುರ್ಗಿ ವಿಭಾಗಗಳ ಜಿಲ್ಲೆಯಲ್ಲಿರುವ ಕಲಾವಿದರ ಸಾಧನೆಗಳ ಮಾಹಿತಿ ಸಂಗ್ರಹ ಕಾರ್ಯವನ್ನು ಆರಂಭಿಸಲಾಗಿದ್ದು ದೊಡ್ಡಾಟ-ಸಣ್ಣಾಟ ಬಯಲಾಟಗಳ ಕಲೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಅನಿವಾರ್ಯವಿದೆ. ಕಲಾವಿದರನ್ನು ಸಮಾಜದಲ್ಲಿ ಗೌರವದಿಂದ ಕಾಣುವಂತಾಗಬೇಕು. ಬಯಲಾಟ ಕಲೆ ಸಾಮಾನ್ಯವಾದುದಲ್ಲ ಅದು ನಾಡಿನ ಕಲೆಯಾಗಿದ್ದು ಪ್ರತಿ ಗ್ರಾಮಸ್ಥರು ಇಂತಹ ಕಲೆಗಳ ಪ್ರದರ್ಶನಕ್ಕೆ ಆದ್ಯತೆ ನೀಡಿದಾಗ ಈ ಕಲೆಗಳು ಉಳಿಯಲು ಸಾಧ್ಯವಾಗುತ್ತದೆಂದರು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜಾನಪದ ಚಿಂತಕ ಪ್ರೊ. ಗುರುಪಾದ ಮರೆಗುದ್ದಿ ದೊಡ್ಡಾಟ-ಸಣ್ಣಾಟಗಳು ನಮ್ಮ ಭಾಗದ ಸಾಂಸ್ಕೃತಿಕ ಅನನ್ಯತೆಯನ್ನು ಸಾರುವ ಕಲೆಯಾಗಿವೆ. ಗ್ರಾಮೀಣರು ಈ ಕಲೆಗಳನ್ನು ‘ಆಟಗಳು’ ಎಂದು ಕರೆಯುತ್ತಾರೆ. ಸುಮಾರು 15ನೇ ಶತಮಾನದ ಸಂದರ್ಭದಿಂದಲೂ ಕರ್ನಾಟಕದಲ್ಲಿ ದೊಡ್ಡಾಟ-ಸಣ್ಣಾಟಗಳು ಪ್ರದರ್ಶಿಸಲ್ಪಡುತ್ತಿದ್ದವು. ಉತ್ತರ ಕರ್ನಾಟಕದಲ್ಲಿ ಸುಮಾರು 450 ಕ್ಕೂ ಹೆಚ್ಚು ದೊಡ್ಡಾಟ-ಸಣ್ಣಾಟಗಳಿದ್ದವೆಂದು ಹೇಳಿದರು.  ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಸಣ್ಣಾಟಗಳಲ್ಲಿ ಸಾಮಾಜಿಕ ಸಂದೇಶ ಕುರಿತು ವಿಷಯ ಮಂಡಿಸಿದ ಜಾನಪದ ಸಾಹಿತಿ ಡಾ. ರಾಜು ಕಂಬಾರ ಕರ್ನಾಟಕದ ಉತ್ತರ ಭಾಗದಲ್ಲಿ ಪ್ರಚಲಿತದಲ್ಲಿರುವ ರಂಗ ಪ್ರಕಾರಗಳಲ್ಲಿ ಸಣ್ಣಾಟವು ಒಂದಾಗಿದ್ದು ಇದನ್ನು ‘ಡಪ್ಪಿನಾಟ’ವೆಂದು ಕರೆಯಲಾಗುತ್ತದೆ. ಡಪ್ಪು ಒಂದು ಸರಳ ಚರ್ಮವಾದ್ಯವಾಗಿದ್ದು ಡಪ್ಪು ವಾದ್ಯವಿಲ್ಲದೆ ಸಣ್ಣಾಟ ಪ್ರದರ್ಶನಗಳೇ ನಡೆಯವುದಿಲ್ಲ. ಮಹಾರಾಷ್ಟ್ರದ ತಮಾಷಾ ಮತ್ತು ದಾಸರಾಟಗಳ ಪ್ರಭಾವದಿಂದಾಗಿ ರಾಧಾನಟ ಸಂಗ್ಯಾ-ಬಾಳ್ಯಾನಂತಹ ಹಲವಾರು ಸಣ್ಣಾಟಗಳು ರೂಪಗೊಂಡು ಅಟ್ಟವೇರಿದವು ಎಂದರು. ಬಯಲಾಟ ಕಲಾವಿದರ ಪರಿಸ್ಥಿತಿ’ ವಿಷಯವಾಗಿ ಬೆಳಗಾವಿ ಜಿಲ್ಲಾ ಸಂಶೋಧನ ಸಹಾಯಕಿ ಡಾ. ವಿದ್ಯಾ ಪಾಟನಕರ ಮಾತನಾಡಿ ಕಲಾವಿದರು ಅನಕ್ಷರಸ್ಥರಾಗಿದ್ದು ಬಡತನದ  ರೇಖೆಯಲ್ಲಿದ್ದಾರೆ. ಸರ್ಕಾರದ ಮತ್ತು ಸಮಾಜದ ಪ್ರೋತ್ಸಾಹ ಅಗತ್ಯವಾಗಿದ್ದು ಈಗಿರುವ ಮಾಸಾಶನವನ್ನು ಹೆಚ್ಚಿಸಬೇಕು ಮತ್ತು ವಯೋಮಿತಿಯನ್ನು ಕಡಿಮೆಗೊಳಿಸಬೇಕು. ಬಯಲಾಟದ ಸ್ತ್ರೀಯರಿಗೆ ಹೆಚ್ಚಿನ ಆಧ್ಯತೆ ದೊರೆಯಬೇಕೆಂದರು. ಈರಲಟ್ಟಿಯ ಪರಮೇಶ್ವರ ಸಣ್ಣಾಟ ಜಾನಪದ ಕಲಾವಿದರ ಸಂಘದಿಂದ ಸಣ್ಣಾಟ ಪದಗಳ ಹಾಡುಗಾರಿಕೆ ನಡೆಯಿತು. ಶೀತಾಲಹರಿ ಗ್ರಾಮದ ಹೊನ್ನಮ್ಮದೇವಿ ದೊಡ್ಡಾಟ ಸಂಘದ-ರತಿ ಕಲ್ಯಾಣ ನಂದಗಾಂವದ ದುರ್ಗಾದೇವಿ ಜಾನಪದ ಬಯಲಾಟ ಸಂಘದ ರಾಧಾನಾಟ ಮತ್ತು ರಾಜಾಪೂರದ  ಪಾಂಡುರಂಗ ಬಯಲಾಟಗಳು ಪ್ರದರ್ಶನಗೊಂಡವು. ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದೆ ಕೆಂಪವ್ವ ಹರಿಜನ ಸದಸ್ಯ ಸಂಚಾಲಕ ಭೀಮಪ್ಪ ಹುದ್ದಾರ ದೊಡ್ಡಾಟ ಸಂಚಾಲಕ ಅಮರ ಶೆಟ್ಟಿ ಮುಂತಾದವರಿದ್ದರು.